Asianet Suvarna News Asianet Suvarna News

ವೈದ್ಯೆಗೆ ಸಹದ್ಯೋಗಿ ವೈದ್ಯನಿಂದ ಲೈಂಗಿಕ ಕಿರುಕುಳ?: ಜೀವ ಬೆದರಿಕೆ, ಪೊಲೀಸ್ ಠಾಣೆಗೆ ದೂರು

ನಗರದ ಪ್ರತಿಷ್ಠಿತ ಖಾಸಗಿ ವೈದ್ಯಕೀಯ ಕಾಲೇಜಿನ ವಿಭಾಗವೊಂದರ ಮುಖ್ಯಸ್ಥೆಗೆ ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ ಆರೋಪದಡಿ ವೈದ್ಯರೊಬ್ಬರ ವಿರುದ್ಧ ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. 

Sexual harassment of a doctor by a Women doctor at Bengaluru gvd
Author
First Published Feb 10, 2024, 5:43 AM IST

ಬೆಂಗಳೂರು (ಫೆ.10): ನಗರದ ಪ್ರತಿಷ್ಠಿತ ಖಾಸಗಿ ವೈದ್ಯಕೀಯ ಕಾಲೇಜಿನ ವಿಭಾಗವೊಂದರ ಮುಖ್ಯಸ್ಥೆಗೆ ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ ಆರೋಪದಡಿ ವೈದ್ಯರೊಬ್ಬರ ವಿರುದ್ಧ ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. 51 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಡಾ। ಎಚ್‌.ವಿ.ರಾಜು ಎಂಬುವವರ ವಿರುದ್ಧ ದೌರ್ಜನ್ಯ, ಬೆದರಿಕೆ, ಶಾಂತಿ ಭಂಗ ಉಂಟು ಮಾಡಿದ ಆರೋಪದಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ?: ಸಂತ್ರಸ್ತೆ ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಖಾಸಗಿ ವೈದ್ಯಕೀಯ ಕಾಲೇಜಿನ ವಿಭಾಗವೊಂದರ ಮುಖ್ಯಸ್ಥೆಯಾಗಿದ್ದಾರೆ. ಆರೋಪಿ ಡಾ। ರಾಜು ಸಹ ಇದೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಜೇಷ್ಠತೆಯಲ್ಲಿ ಸಂತ್ರಸ್ತೆ ಹಿರಿಯರಾಗಿದ್ದರೂ ಸಹ ಕಾಲೇಜಿನ ಸಹ ಪ್ರಾಂಶುಪಾಲರು ದುರುದ್ದೇಶದಿಂದ ಡಾ। ರಾಜು ಸಂತ್ರಸ್ತೆಗಿಂತ ಹಿರಿಯರು ಎಂದು ಕಾಲೇಜಿನ ಆಡಳಿತ ಮಂಡಳಿಗೆ ಜೇಷ್ಠತಾಪಟ್ಟಿ ಕಳುಹಿಸಿಕೊಟ್ಟಿದ್ದಾರೆ. ಈ ವಿಚಾರ ತಿಳಿದು ಸಂತ್ರಸ್ತೆ ಜ.19ರಂದು ಪ್ರಾಂಶುಪಾಲರ ಕಚೇರಿಗೆ ತೆರಳಿ ಮಾತನಾಡುವಾಗ, ಅಲ್ಲಿಗೆ ಬಂದಿರುವ ಡಾ। ರಾಜು, ‘ನೀನು ದಿನಕ್ಕೊಬ್ಬನ ಹೆಗಲ ಮೇಲೆ ಕೈ ಹಾಕಿಕೊಂಡು ಬರುತ್ತೀಯಾ. ಇವತ್ತು ಮನೋಹರ ರೆಡ್ಡಿಯ ಹೆಗಲ ಮೇಲೆ ಕೈ ಹಾಕಿಕೊಂಡು ಬಂದಿದ್ದೀಯಾ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದೆ ವಿಷಯಕ್ಕೆ ವರ್ತಕರ ಜೋಡಿ ಕೊಲೆ ಆಗಿದ್ದು: ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದ್ದೇನು?

ಚಾರಿತ್ರ್ಯ ಹರಣದ ಆರೋಪ: ‘ಈ ಹಿಂದೆ ಸಹ ಡಾ। ರಾಜು ನನ್ನ ಚಾರಿತ್ರ್ಯ ಹರಣ ಮಾಡಿದ್ದರು. ನೀನು ಹೇಗೆ ಪಿಎಚ್‌ಡಿ ಮುಗಿಸಿದ್ದೀಯಾ ಅಂತಾ ನನಗೆ ಗೊತ್ತು. ಪಿಎಚ್‌ಡಿ ಗುರುಗಳ ಜತೆಗೆ ಅನೈತಿಕ ಸಂಬಂಧ ಇರಿಸಿಕೊಂಡು ಪಿಎಚ್‌ಡಿ ಮುಗಿಸಿದ್ದೀಯಾ ಎಂದು ಸುಳ್ಳು ಆಪಾದನೆಗಳನ್ನು ಮಾಡಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರು ಹಿಂಪಡೆಯುವಂತೆ ಒತ್ತಡ: ಮುಂದುವರೆದು, ‘ಜ.20ರಂದು ನಾನು ಇದೇ ರಾಜು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಾಂಶುಪಾಲರಿಗೆ ಪತ್ರ ನೀಡಿದ್ದೆ. ಬಳಿಕ ನನ್ನ ಕೊಠಡಿಯಲ್ಲಿ ಒಂಟಿಯಾಗಿ ಇದ್ದಾಗ ಏಕಾಏಕಿ ಕೊಠಡಿ ಪ್ರವೇಶಿಸಿದ ರಾಜು, ನನ್ನ ಬಳಿ ಬಂದು ನನ್ನ ಕೈ, ಎದೆ, ಬಟ್ಟೆಗಳನ್ನು ಹಿಡಿದು ಎಳೆದಾಡಿ, ನನ್ನ ಮೇಲೆ ಕಂಪ್ಲೇಟ್‌ ಕೊಡುತ್ತೀಯಾ? ನೀನು ಎಂತಹ ಹೆಂಗಸು ಎಂದು ನನಗೆ ಗೊತ್ತಿದೆ. ನೀನೇನು ಸಾಚಾನಾ? ನಿನಗೆ ನನ್ನ ಬಗ್ಗೆ ಗೊತ್ತಿಲ್ಲ. ನಾನು ಮನಸು ಮಾಡಿದರೆ, ನೀನು ನಾಳೆಯಿಂದ ಈ ಕಾಲೇಜಿನಲ್ಲೇ ಇರುವುದಿಲ್ಲ. ನೀನು ಇವತ್ತೇ ಪ್ರಾಂಶುಪಾಲರ ಬಳಿ ತೆರಳಿ ಕ್ಷಮಾಪಣೆ ಪತ್ರ ಬರೆದು ದೂರನ್ನು ವಾಪಾಸ್‌ ಪಡೆಯಬೇಕು ಎಂದು ಕೆಟ್ಟ ಶಬ್ಧಗಳಿಂದ ಬೈದು ನನ್ನ ಮೇಲೆ ಆಕ್ರಮಣ ಮಾಡಿದ್ದಾರೆ. ಕಾಲೇಜಿನಲ್ಲಿ ಎಲ್ಲರ ಮುಂದೆ ನನ್ನನ್ನು ಅವಮಾನಿಸಿದ್ದಾರೆ’ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಜೀವ ಬೆದರಿಕೆ: ‘ಅಷ್ಟೇ ಅಲ್ಲದೆ, ಡಾ। ರಾಜು, ನನ್ನ ಸ್ನೇಹಿತರ ಬಳಿ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ಬಗ್ಗೆ ಜ.24ರಂದು ಕರೆ ಮಾಡಿ ಪ್ರಶ್ನೆ ಮಾಡಿದ್ದೆ. ಮಾರನೇ ದಿನ ಬೆಳಗ್ಗೆ ಕಾಲೇಜಿನ ನನ್ನ ಕೊಠಡಿಗೆ ಬಂದಿದ್ದ ಡಾ। ರಾಜು, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಬಳಿಕ ನಾನು ಹೊರಗೆ ಹೋಗದಂತೆ ತಡೆದು ನನ್ನ ಮೈ-ಕೈ ಮುಟ್ಟಿ ನನ್ನ ಸಹವಾಸಕ್ಕೆ ಬರಬಾರದು. ಬಂದರೆ, ತುಂಬಾ ತೊಂದರೆ ಅನುಭವಿಸುವೆ ಎಂದು ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ರಾಪಿಡೋ ಬುಕ್‌ ಮಾಡಿ ಚಾಲಕನಿಗೆ 4 ಸಾವಿರ ವಂಚನೆ: ಸೈಬರ್ ವಂಚಕರ ಹೊಸ ತಂತ್ರವೇನು?

ಲೈಂಗಿಕ ಕಿರುಕುಳ: ‘ಡಾ। ರಾಜು ನಾನು ಕೆಲಸದ ಸ್ಥಳದಲ್ಲಿ ಎಲ್ಲೇ ಹೋದರೂ ನನ್ನನ್ನು ಹಿಂಬಾಲಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ನನ್ನ ಘನತೆಗೆ ಚ್ಯುತಿ ತಂದಿದ್ದಾರೆ. ಹೀಗಾಗಿ ಡಾ। ರಾಜು ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ’ ಸಂತ್ರಸ್ತೆ ದೂರಿನಲ್ಲಿ ಕೋರಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios