ಬೆಂಗಳೂರು(ಜ.12): ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್  ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ಜೈಲು ಸೇರಿರುವ ನಟಿ ರಾಗಿಣಿ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಒಂದು ವಾರ ಮುಂದೂಡಿದೆ. ಕೋರ್ಟ್ ಈ ಆದೇಶದಿಂದ ನಟಿ ರಾಗಿಣಿ ಸಂಕ್ರಾತಿ ಹಬ್ಬವನ್ನೂ ಜೈಲಿನಲ್ಲೇ ಆಚರಿಸುವಂತಾಗಿದೆ.

ಜೈಲಿನಲ್ಲಿರುವ ನಟಿ ರಾಗಿಣಿ ಜಾಮೀನು ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಸಲ್ಲಿಸಿದ್ದರು. ಆದರೆ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ಕಾಲಾವಕಾಶ ಕೋರಿದ ಹಿನ್ನೆಲೆ ಸುಪ್ರಿಂ ಕೋರ್ಟ್ ಈ ವಿಚಾರಣೆಯನ್ನು ಜನವರಿ 19ಕ್ಕೆ ಮುಂದೂಡಿದೆ. 

ಇನ್ನು ಕೆಲವು ದಿನಗಳ ಹಿಂದಷ್ಟೇ ರಾಜ್ಯ ಹೈಕೋರ್ಟ್ ರಾಗಿಣಿ ಜಾಮೀನು ಅರ್ಜಿ ವಜಾ ಮಾಡಿತ್ತು. ಅದನ್ನು ಪ್ರಶ್ನಿಸಿ ರಾಗಿಣಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ರಾಗಿಣಿ ಸಲ್ಲಿಸಿರುವ ಜಾಮೀನು ಅರ್ಜಿಗೆ ಸಿಸಿಬಿ ಪರ ವಕೀಲರು ಈಗಾಗಲೇ ಆಕ್ಷೇಪಣೆ ಸಲ್ಲಿಸಿದ್ದರು. 

ಮಾದಕ ದ್ರವ್ಯ ಪೂರೈಕೆ ಜಾಲದೊಂದಿಗೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಸೆ.4ರಂದು ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.