Asianet Suvarna News Asianet Suvarna News

ಬೆಂಗಳೂರು: ಶೀಲ ಶಂಕಿಸಿ ಪತ್ನಿಯ ಮರ್ಮಾಂಗಕ್ಕೆ ಚಾಕು ಇರಿಯಲು ಯತ್ನ, ರೌಡಿ ಅರೆಸ್ಟ್‌

ಹಲ್ಲೆಯಿಂದ ಗಾಯಗೊಂಡಿದ್ದ ಪ್ರಿಯಾಂಕಾ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಆರೋಪಿ ದಯಾನಂದ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 

Rowdy Arrested For Who Assault to Wife in Bengaluru grg
Author
First Published Jun 27, 2023, 10:01 AM IST

ಬೆಂಗಳೂರು(ಜೂ.27):  ಶೀಲ ಶಂಕಿಸಿ ತನ್ನ ಮಕ್ಕಳೆದುರೇ ಪತ್ನಿಯ ತೊಡೆಗೆ ಚಾಕುವಿನಿಂದ ಇರಿದು ಕ್ರೌರ್ಯ ಮೆರೆದಿದ್ದ ರೌಡಿಯೊಬ್ಬನನ್ನು ಘಟನೆ ನಡೆದ ಕೆಲವೇ ತಾಸಿನಲ್ಲಿ ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾತ್ರಿ 9.45ರ ಸುಮಾರಿಗೆ ನೀಲಸಂದ್ರದ ಬಜಾರ್‌ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದೆ. ಹಲ್ಲೆಯಿಂದ ಗಾಯಗೊಂಡಿದ್ದ ಪ್ರಿಯಾಂಕಾ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಆರೋಪಿ ದಯಾನಂದ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಶೋಕನಗರ ಪೊಲೀಸ್‌ ಠಾಣೆ ರೌಡಿ ಶೀಟರ್‌ ದಯಾನಂದ್‌, ಕೆಲ ವರ್ಷಗಳ ಹಿಂದೆ ಪ್ರಿಯಾಂಕಾ ಜತೆಗೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆರೋಪಿಗೆ ನಿಶ್ಚಿತ ಕೆಲಸವಿಲ್ಲ. ದುಶ್ಚಟಗಳ ದಾಸನಾಗಿರುವ ಈತ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಈತನ ವಿರುದ್ಧ ಅಶೋಕ ನಗರ, ಆಡುಗೋಡಿ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕೊಲೆಗೆ ಯತ್ನ, ಸುಲಿಗೆ, ದರೋಡೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ.

ಪತ್ನಿ ಪ್ರಿಯಾಂಕಾ ಮನೆಗೆಲಸ ಮಾಡಿಕೊಂಡು ಜೀವನ ದೂಡುತ್ತಿದ್ದಾರೆ. ಆರೋಪಿ ದಯಾನಂದ್‌, ನಿತ್ಯ ಮದ್ಯ ಸೇವಿಸಿ ಮನೆಗೆ ಬಂದು ಮದ್ಯ ಖರೀದಿಸಲು ಹಣಕ್ಕಾಗಿ ಪೀಡಿಸುತ್ತಿದ್ದ. ಆಕೆ ಹಣ ನೀಡಲು ನಿರಾಕರಿಸಿದರೆ, ಹಲ್ಲೆ ನಡೆಸುತ್ತಿದ್ದ. ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಆರೋಪಿ 15 ದಿನಗಳ ಹಿಂದೆಯಷ್ಟೇ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ. ಪತ್ನಿಯ ಶೀಲದ ಬಗ್ಗೆ ಅನುಮಾನಿಸುತ್ತಿದ್ದ ಆರೋಪಿ, ಪತ್ನಿಯ ಮೊಬೈಲ್‌ ಪಡೆದು ಆಕೆ ಯಾರೊಂದಿಗೆ ಮಾತನಾಡಿದ್ದಾಳೆ ಎಂದು ಮೊಬೈಲ್‌ ಸಂಖ್ಯೆಗಳನ್ನು ಪರಿಶೀಲಿಸುತ್ತಿದ್ದ. ಯಾರೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದೀಯಾ ಎಂದು ವಿನಾಕಾರಣ ಆಕೆ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಮರ್ಮಾಂಗಕ್ಕೆ ಚಾಕು ಇರಿಯಲು ಯತ್ನ

ಭಾನುವಾರ ರಾತ್ರಿ ಪಾನಮತ್ತನಾಗಿ ಮನೆಗೆ ಬಂದಿದ್ದ ಆರೋಪಿ ದಯಾನಂದ್‌, ಪತ್ನಿಯ ಶೀಲ ಶಂಕಿಸಿ ಗಲಾಟೆ ಶುರು ಮಾಡಿದ್ದಾನೆ. ಈ ವೇಳೆ ಮಕ್ಕಳು ಆತನನ್ನು ಸುಮ್ಮನಿರಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಆ ಮಕ್ಕಳ ಮೇಲೂ ಹಲ್ಲೆ ಮಾಡಿದ್ದಾನೆ. ಬಳಿಕ ಪತ್ನಿ ಪ್ರಿಯಾಂಕಾಳ ಜತೆಗೆ ಜೋರು ಗಲಾಟೆ ಶುರು ಮಾಡಿ, ಅಡುಗೆ ಮನೆಯಿಂದ ಚಾಕು ತಂದು ಆಕೆಯನ್ನು ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಇರಿಯಲು ಪ್ರಯತ್ನಿಸಿದ್ದಾನೆ. ಈ ವೇಳೆ ತೀವ್ರ ಪ್ರತಿರೋಧವೊಡ್ಡಿದ ಪರಿಣಾಮ ಚಾಕು ಆಕೆಯ ತೊಡೆಗೆ ಚುಚ್ಚಿಕೊಂಡಿದೆ.

ತಕ್ಷಣ ಆಕೆ ಸಹಾಯಕ್ಕೆ ಕೂಗಿ ಕೊಂಡಾಗ, ಅಕ್ಕಪಕ್ಕದ ನಿವಾಸಿಗಳು ಆಕೆಯ ರಕ್ಷಣೆಗೆ ಧಾವಿಸಿದ್ದಾರೆ. ಅಷ್ಟರಲ್ಲಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಸ್ಥಳೀಯರೇ 112 ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮತ್ತೊಂದೆಡೆ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಆಡುಗೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios