Asianet Suvarna News Asianet Suvarna News

ಗುಡ್ ಬೈ 2019: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ 5 ಅಪರಾಧ ಪ್ರಕರಣಗಳು!

ಇಡೀ ವಿಶ್ವವೇ 2019ಕ್ಕೆ ವಿದಾಯ ಹೇಳಲು ಸಜ್ಜಾಗಿದೆ ಹಾಗೂ ಪ್ರತಿ ವರ್ಷದಂತೆ  ಈ ವರ್ಷವೂ ಹಲವಾರು ನೆನಪುಗಳನ್ನು ಬಿಟ್ಟು ಹೋಗುತ್ತಿದೆ. ಆದರೆ ಈ ವರ್ಷ ನಡೆದ ಕೆಲ ವಿದ್ಯಮಾನಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಕರಾಳ ನೆನಪುಗಳಾಗಿ ಉಳಿದಿದೆ. 

Recap 2019 5 Crime Cases Which which shook the nation
Author
Bangalore, First Published Dec 31, 2019, 1:25 PM IST
  • Facebook
  • Twitter
  • Whatsapp

2019ರಲ್ಲಿ ನಡೆದ ಕೆಲ ಅಪರಾಧ ಪ್ರಕರಣಗಳಿಂದ ಜನರ ಕಣ್ಣಾಲಿಗಳು ತುಂಬಿ ಬಂದಿವೆ. ಜನರ ಮನದಲ್ಲಿ ಒಂದು ಬಗೆಯ ಭಯವನ್ನೂ ಹುಟ್ಟು ಹಾಕಿದೆ. ಇಲ್ಲಿವೆ ದೇಶಾದ್ಯಂತ ಸದ್ದು ಮಾಡಿದ 5 ಕ್ರೈಂ ಪ್ರಕರಣಗಳು

1. ಆಲೀಗಢದಲ್ಲಿ ಎರಡೂವರೆ ವರ್ಷ ಮಗುವಿನ ಹತ್ಯೆ

ಆಲೀಗಢದಲ್ಲಿ 2019ರ ಜೂನ್ ಆರಂಭದಲ್ಲಿ ಎರಡೂವರೆ ವರ್ಷದ ಮಗುವನ್ನು ಕರುಣೆ ಇಲ್ಲದೇ ಹತ್ಯೆ ಮಾಡಲಾಗಿತ್ತು. ಕೇವಲ 10 ಸಾವಿರ ರೂಪಾಯಿಗಾಗಿ ಮುಗ್ಧ ಕಂದನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಮೃತ ದೇಹವನ್ನು ಕಸದ ತೊಟ್ಟಿಯಲ್ಲಿ ಪತ್ತೆಯಾಗಿತ್ತು. ಮೇ 30ರಂದು ನಾಪತ್ತೆಯಾಗಿದ್ದ ಕಂದನ ಮೃತದೇಹ ಜೂನ್ 2ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಿರ್ಲಕ್ಷ್ಯ ಮೆರೆದ ಇನ್ಸ್‌ಪೆಕ್ಟರ್ ಸೇರಿ 5 ಮಂದಿ ಪೊಲೀಸರನ್ನು ಅಮಾನತ್ತುಗೊಳಿಸಿದ್ದರೆ, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು.

2. ತೆಲಂಗಾಣದ ಮಹಿಳಾ ತಹಶೀಲ್ದಾರ್ ಗೆ ಬೆಂಕಿ

ತೆಲಂಗಾಣದಲ್ಲಿ ನವೆಂಬರ್ 4 ರಂದು ನಡೆದಿದ್ದ ಘಟನೆ ಇಡೀ ದೇಶದಾದ್ಯಂತ ಸದ್ದು ಮಾಡಿತ್ತು. ಇಲ್ಲಿನ ಅಬ್ದುಲ್ಲಾಪುರ ಮೇಟ್ ನ ಮಹಿಳಾ ತಹಶೀಲ್ದಾರರನ್ನು ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಹಗಲು ಹೊತ್ತಲ್ಲೇ ಅವರ ಕಚೇರಿಗೆ ನುಗ್ಗಿದ್ದ ದುಷ್ಕರ್ಮಿ ಜೀವಂತವಾಗಿ ಸುಟ್ಟು ಹಾಕಿದ್ದ. ಹಿರಿಯ ಕಂದಾಯ ಸಚಿವರೊಬ್ಬರು 30 ವರ್ಷದ ಮಹಿಳಾ ತಹಶೀಲ್ದಾರ್ ವಿಜಯಾ ರೆಡ್ಡಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅವರನ್ನು ರಕ್ಷಿಸಲು ಹೋಗಿದ್ದ ಇಬ್ಬರು ಸಿಬ್ಬಂದಿಗಳಿಗೂ ಸುಟ್ಟ ಗಾಯಗಳಾಗಿದ್ದವು ಎಂದಿದ್ದರು. ಇನ್ನು ವಿಜಯಾ ರೆಡ್ಡಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ವ್ಯಕ್ತಿಯೂ ಗಾಯಗೊಂಡಿದ್ದ.

3. ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ

ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ 27 ವರ್ಷದ ಪಶು ವೈದ್ಯೆ ದಿಶಾ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ, 2012ರಲ್ಲಿ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಪ್ರಕರಣದ ಕಹಿ ನೆನಮಪು ಮತ್ತೆ ಜೀವಂತಗೊಳಿಸಿತ್ತು. ಉದ್ದೇಶಪೂರ್ವಕವಾಗಿ ಸ್ಕೂಟಿಯನ್ನು ಪಂಕ್ಷರ್ ಮಾಡಿದ್ದ ದುರುಳರು, ಡ್ರಾಪ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಬಳಿಕ ಪೆಟ್ರೋಲ್ ಸುರಿದು ಆಕೆಯನ್ನು ಸುಟ್ಟು ಹಾಕಿದ್ದರು. 

ದಿಶಾ ಅತ್ಯಾಚಾರ ಹಾಗೂ ಕೊಲೆ ಕೇಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಕರಣದ ಬೆನ್ನಲ್ಲೇ ತನಿಖೆ ನಡೆಸಿದ್ದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಹೀಗಿರುವಾಗಲೇ ದೇಶದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿತ್ತು. ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿದ್ದರು. ಆದರೆ ಇದಾದ ಕೇವಲ 9 ದಿನಗಳಲ್ಲೇ ಅಂದರೆ ಡಿಸೆಂಬರ್ 6 ರಂದು ಮಹಜರು ಮಾಡಲು ಆರೋಪಿಗಳನ್ನು ಪೊಲೀಸರು ಘಟನಾ ಸ್ಥಳಕ್ಕೊಯ್ದಿದ್ದರು. ಈ ವೇಳೆ ಪೊಲೀಸರ ಕೈಯ್ಯಲ್ಲಿದ್ದ ಗನ್ ಕಸಿದ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಬೇರೆ ವಿಧಿ ಇಲ್ಲದ ಪೊಲೀಸರು ಎನ್ ಕೌಂಟರ್ ನಡೆಸಿದ್ದರು. ಈ ತಂಡದ ಮುಂದಾಳತ್ವ ಹುಬ್ಬಳ್ಳಿ ಮೂಲದ ಪೊಲೀಸ್ ಅಧಿಕಾರಿ ವಿ. ಸಿ ಸಜ್ಜನರ್ ವಹಿಸಿದ್ದರು. 

4. ಉನ್ನಾವ್ ರೇಪ್ ಸಂತ್ರಸ್ತೆಯನ್ನು ಜೀವಂತವಾಗಿ ಸುಟ್ಟಾಕಿದ್ರು

ಕಳೆದ ವರ್ಷ ಡಿ.18ರಂದು ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಆಕೆ ಕೋರ್ಟ್‌ ಮೆಟ್ಟಿಲೇರಿದ ಮೇಲೆ 2019ರ ಮಾಚ್‌ರ್‍ನಲ್ಲಿ ಪ್ರಕರಣ ದಾಖಲಾಗಿ, ಆರೋಪಿಗಳ ಬಂಧನವಾಗಿತ್ತು. ಅವರಿಗೆ ನ.25ರಂದು ಜಾಮೀನು ದೊರೆತಿತ್ತು. 

ಉನ್ನಾವೋ ಅಪರಾಧ ಪ್ರಕರಣ ಸಂಬಂಧಿತ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೀಗಿರುವಾಗ ಅತ್ಯಾಚಾರ ಪ್ರಕರಣದ ವಿಚಾರಣೆಗೆಂದು ಉನ್ನಾವ್‌ ಜಿಲ್ಲೆಯಲ್ಲಿರುವ ತನ್ನ ಗ್ರಾಮದಿಂದ ಸಂತ್ರಸ್ತ ಯುವತಿ ರಾಯ್‌ಬರೇಲಿಯಲ್ಲಿರುವ ನ್ಯಾಯಾಲಯಕ್ಕೆ ಡಿಸೆಂಬರ್ 3ರಂದು ಮುಂಜಾನೆ ತೆರಳುತ್ತಿದ್ದಳು. ಈ ಸಂದರ್ಭದಲ್ಲಿ ಹರಿಶಂಕರ್‌ ತ್ರಿವೇದಿ, ರಾಮ್‌ಕಿಶೋರ್‌ ತ್ರಿವೇದಿ, ಉಮೇಶ್‌ ಬಾಜಪೇಯಿ, ಶಿವಂ ತ್ರಿವೇದಿ ಹಾಗೂ ಶುಭಂ ತ್ರಿವೇದಿ, ಸಂತ್ರಸ್ತೆಯ ಮನೆ ಸಮೀಪದಲ್ಲೇ ಆಕೆಯ ಮೇಲೆ ದಾಳಿ ಮಾಡಿ, ಬೆಂಕಿ ಹಚ್ಚಿದ್ದಾರೆ. ಈ ವೇಳೆ ಉರಿಯುತ್ತಿದ್ದ ಬೆಂಕಿಯೊಂದಿಗೆ ಯುವತಿ ತನ್ನನ್ನು ರಕ್ಷಿಸಿ ಎಂದು ಕೂಗುತ್ತಾ 1 ಕಿ.ಮೀ.ವರೆಗೂ ಓಡಿದ್ದಾಳೆ. ಈ ವೇಳೆ ಆಕೆಯನ್ನು ಗಮನಿಸಿದ ಕೆಲ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮೊದಲು ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ನಂತರ ಲಖನೌನ ಶ್ಯಾಮಪ್ರಸಾದ್‌ ಮುಖರ್ಜಿ ಆಸ್ಪತ್ರೆಗೆ ಆಕೆಯನ್ನು ಸ್ಥಳಾಂತರಿಸಲಾಯಿತು. ಬಳಿಕ ಗುರುವಾರ ರಾತ್ರಿ, ದಿಲ್ಲಿಯ ಸಫ್ದರ್‌ಜಂಗ್‌ ಆಸ್ಪತ್ರೆಗೆ ಈಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಮಾನದ ಮೂಲಕ ರವಾನಿಸಲಾಯಿತು.

ಈಗ ದಾಳಿ ನಡೆಸಿದ ಐವರಲ್ಲಿ ಶಿವಂ ತ್ರಿವೇದಿ ಹಾಗೂ ಶುಭಂ ತ್ರಿವೇದಿ ಅವರು 2018ರ ಡಿಸೆಂಬರ್‌ನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಸಂತ್ರಸ್ತೆ ಆಗ ದೂರಿದ್ದಳು. ಸಂತ್ರಸ್ತೆಗೆ ಚಿಕಿತ್ಸೆ ಮುಂದುವರೆಸಲಾಗಿತ್ತಾದರೂ, ಇದು ಫಲಿಸದೇ ಮೂರು ದಿನಗಳ ಬಳಿಕ ಆಕೆ ಸಾವನ್ನಪ್ಪಿದ್ದಳು.

5. ಬಿಹಾರದ ಬಕ್ಸರ್ ನಲ್ಲಿ ಪೈಶಾಚಿಕ ಕೃತ್ಯ

ಬಿಹಾರದ ಬಕ್ಸರ್ ನಲ್ಲಿ ಯುವತಿಯನ್ನು ಸಾಮೂಹಿ ಅತ್ಯಾಚಾರಗೈದು ಬಳಿಕ ಆಕೆಯನ್ನು ಶೂಟ್ ಮಾಡಿ, ಬೆಂಕಿ ಹಾಕಿ ಸುಟ್ಟ ಘಟನೆ ವರದಿಯಾಗಿತ್ತು. ಆದರೆ ತನಿಖೆ ಬಳಿಕ ಇದೊಂದು ಮರ್ಯಾದಾ ಹತ್ಯೆ ಎಂಬ ಸತ್ಯ ಬಹಿರಂಗಗೊಂಡಿತ್ತು. ಈ ಹತ್ಯೆ ಪ್ರಕರಣದಲ್ಲಿ ಒಟ್ಟು 6 ಮಂದಿ ಭಾಗಿಯಾಗಿದ್ದರು. ಯುವತಿಯ ಕೊಲೆಗೆ ಎಲ್ಲಾ ರೀತಿಯ ಯೋಜನೆ ಹಮ್ಮಿಕೊಂಡಿದ್ದ ಕುಟುಂಬಸ್ಥರು ಆಕೆಯನ್ನು ನಿರ್ಜನ ಪ್ರದೇಶಕ್ಕೊಯ್ದು ಮೊದಲು ಶೂಟ್ ಮಾಡಿ ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. 2018ರ ಮಾರ್ಚ್ 5 ರಂದು ಯುವತಿಯ ಮದುವೆ ನಿಶ್ಚಯವಾಗಿತ್ತು. ಎಲ್ಲಾ ತಯಾರಿ ಕೂಡಾ ನಡೆದಿತ್ತು. ಆದರೆ ಆಕೆ ಮದುವೆ ಕಾರ್ಯಕ್ರಮದಂದೇ ನಾಪತ್ತೆಯಾಗಿದ್ದು, ಬಳಿಕ ಮನೆಗೆ ಮರಳಿದ್ದರು. ಈ ಘಟನೆ ಬಳಿಕ ಯುವತಿಯ ತಂದೆಗೆ ಗ್ರಾಮಸ್ಥರು ಇಲ್ಲ ಸಲ್ಲದ ಮಾತುಗಳಿಂದ ಚುಚ್ಚಲಾರಂಭಿಸಿದ್ದರು. ಇದರಿಂದ ಬೇಸತ್ತ ತಂದೆ ಮಗಳನ್ನು ಹತ್ಯೆಗೈದಿದ್ದ.

ಎಲ್ಲಾ ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಸೆಂಬರ್ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios