ಬೆಳಗಾವಿ(ಜ.12): ಕಳ್ಳತನ ಮಾಡಿ ಪರಾರಿಯಾಗಲು ಮುಂದಾಗುತ್ತಿದ್ದ ಕಳ್ಳನೊಬ್ಬ ಛಾವಣಿ ಮೇಲಿಂದ ಬಿದ್ದು, ಸಾರ್ವಜನಿಕರರಿಂದ ಧರ್ಮದೇಟು ತಿಂದು ಗಾಯಗೊಂಡ ಘಟನೆ ತಾಲೂಕಿನ ಹಿಂಡಲಗಾ ಗ್ರಾಮದ ಸಿದ್ಧಾರ್ಥ ನಗರದಲ್ಲಿ ನಡೆದಿದೆ. 

ಇಲ್ಲಿನ ರುಕ್ಮಿಣಿ ನಗರದ ರವಿ ಬಾಬು ಹಾಲಟ್ಟಿ (21) ಜನರ ಕೈಯಿಂದ ಹಲ್ಲೆಗೆ ಒಳಗಾಗಿರುವ ಕಳ್ಳ. ಈತ ಹಿಂಡಲಗಾದ ಗ್ರಾಮದ ವಿಲಾಸ ಹಿತ್ತಮನಿ ಎಂಬವರ ಮನೆಗೆ ಕೀಲಿಹಾಕಿ ಕುಟುಂಬ ಸಮೆತ ಸವದತ್ತಿ ಯಲ್ಲಮ್ಮ ಜಾತ್ರೆಗೆ ಹೋಗಿದ್ದರು. ಮನೆ ಕೀಲಿ ಹಾಕಿರುವುದನ್ನು ಗಮನಿಸಿದ ನಾಲ್ವರು ಕಳ್ಳರು ಮನೆಯಲ್ಲಿ ಕಳ್ಳತನ ಮಾಡಲು ಸಂಚು ರೂಪಿಸಿದ್ದಾರೆ. ಕಳ್ಳರು ತಮ್ಮ ಯೋಜನೆಯಂತೆ ರಾತ್ರಿ ಕಳ್ಳತನ ಮಾಡಲು ಮುಂದಾಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವೇಳೆ ರಾಜು ಬಾಳಪ್ಪಾ ಹಾಲಟ್ಟಿ ಮತ್ತೋರ್ವ ಮನೆಯ ಬಾಗಿಲಿಗೆ ಹಾಕಲಾಗಿದ್ದ ಕೀಲಿ ಮುರಿದು ಮನೆಯ ನುಗ್ಗಿದ್ದಾರೆ. ರವಿ ಹಾಲಟ್ಟಿ ಹಾಗೂ ಇನ್ನೋರ್ವ ಮನೆಯ ಚಾವಣಿ ಮೇಲೆ ಹತ್ತಿದ್ದಾರೆ. ಮನೆಯಲ್ಲಿ ಶಬ್ದವಾಗುತ್ತಿರುವ ಬ ಗ್ಗೆ ಗಮನಿಸಿದ ಅಕ್ಕಪಕ್ಕದ ಮನೆಯವರು, ಈ ಮನೆಯ ರೆಲ್ಲರೂ ಯಲ್ಲಮ್ಮ ದೇವಿ ಜಾತ್ರೆಗೆ ತೆರಳಿದ್ದಾರೆ. ಆದರೆ ಈ ಮನೆಯ ಬಾಗಿಲು ತೆರೆದಿದೆ ಎಂದು ಅನುಮಾನಗೊಂಡು ಸ್ಥಳೀಯರೆಲ್ಲರೂ ಸೇರಿದ್ದಾರೆ.

ಜನರು ಸೇರುತ್ತಿರುವುದನ್ನು ಅರಿತ ಮನೆಯೊಳಗೆ ಹೋಗಿದ್ದ ರಾಜು ಹಾಲಟ್ಟಿ ಹಾಗೂ ಇನ್ನೊಬ್ಬ ಕಳ್ಳ ಮನೆಯಲ್ಲಿದ್ದ 10 ಸಾವಿರ ನಗದು ಹಾಗೂ 7 ಗ್ರಾಂ. ಬಂಗಾರವನ್ನು ತೆಗೆದು ಕೊಂಡು ಪರಾರಿಯಾಗಿದ್ದಾರೆ. ಮನೆ ಛಾವಣಿ ಮೇಲೇರಿದ್ದ ರವಿ ಹಾಲಟ್ಟಿ ಹಾಗೂ ಇನ್ನೊಬ್ಬ ಕಳ್ಳ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಅಷ್ಟರಲ್ಲಿ ಆಯತಪ್ಪಿ ರವಿ ಹಾಲಟ್ಟಿ ಕೆಳಗೆ ಬಿದ್ದು ಸಾರ್ವಜನಿಕರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಇನ್ನೊಬ್ಬ ಪರಾರಿಯಾಗಿದ್ದಾನೆ. 

ಛಾವಣಿ ಮೇಲಿಂದ ಕೇಳಗೆ ಬಿದ್ದ ಕಳ್ಳನಿಗೆ ತಲೆ ಹಾಗೂ ಕೈಗೆ ಗಾಯವಾಗಿದೆ. ಅಲ್ಲದೇ ಸಾರ್ವಜನಿಕರು ಕೂಡ ಧರ್ಮದೇಟು ನೀಡಿದ್ದರಿಂದ ಮತ್ತಷ್ಟು ಗಾಯವಾಗಿದೆ. ನಂತರ ಸ್ಥಳೀಯರು ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ಈ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಕಳ್ಳತನಕ್ಕೆ ಯತ್ನಿಸಿದ ನಾಲ್ಕು ಜನರ ಪೈಕಿ ಓರ್ವ ಸಿಕ್ಕಿಹಾಕಿಕೊಂಡಿದ್ದು, ಪರಾರಿಯಾಗಿರುವ ಮೂವರು ಖದೀಮರ ಪತ್ತೆಗೆ ಜಾಲ ಬೀಸಿದ್ದಾರೆ. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.