ಬೆಳಗಾವಿ(ಫೆ.24): ಕಿಡ್ನಾಪ್ ಆಗಿ ವೇಶ್ಯಾವಾಟಿಕೆಯಲ್ಲಿ ಸಿಲುಕಿಕೊಂಡಿದ್ದ ಯುವತಿಯೊಬ್ಬಳನ್ನ ರಕ್ಷಿಸಿ ಮರಳಿ ಪಾಲಕರ ಮಡಿಲು ಸೇರಿಸಿದ ಘಟನೆ ಇಂದು(ಬುಧವಾರ) ನಗರದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಫೆ.7ರಂದು ಸದಾಶಿವನಗರದ ಮನೆಯೊಂದರಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಜಾಲದ ಮೇಲೆ ಬೆಳಗಾವಿ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಇಬ್ಬರು ಯುವತಿಯರನ್ನು ಪೊಲೀಸರು ರಕ್ಷಿಸಿದ್ದರು. ಎಪಿಎಂಸಿ ಠಾಣೆ‌ ಸಿಪಿಐ ಜಾವೇದ್ ಮುಷಾಪುರೆ ನೇತೃತ್ವದಲ್ಲಿ ನಡೆದಿದ್ದ ದಾಳಿ ಸಂದರ್ಭದಲ್ಲಿ ರಕ್ಷಿಸಿದ್ದ  ಇಬ್ಬರು ಯುವತಿಯರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿತ್ತು. ವಿಚಾರಣೆ ವೇಳೆ ಓರ್ವ ಯುವತಿಯ ವಿಳಾಸವನ್ನ ಪೊಲೀಸರು ಪತ್ತೆ ಹಚ್ಚಿದ್ದರು. 

ಭಾರತೀಯ ನೌಕಾಪಡೆ ಅಧಿಕಾರಿಯ ಕಿಡ್ನಾಪ್, 10 ಲಕ್ಷ ರೂ ನೀಡದ ಕಾರಣ ಹತ್ಯೆ!

2017ರಲ್ಲಿ ಈ ಯುವತಿ ಅಪಹರಣವಾಗಿದ್ದ ಬಗ್ಗೆ ಕೇಸ್ ದಾಖಲಾಗಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ದೂರಿನ ಆಧಾರದ ಮೇಲೆ ಯುವತಿಯನ್ನು ಆಕೆಯ ಪೋಷಕರ ಮಡಿಲು ಸೇರುವಂತೆ ಮಾಡಿದ್ದಾರೆ. ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾದ ಎಪಿಎಂಸಿ ಪೊಲೀಸರು, ಮಹಿಳಾ ಸಾಂತ್ವನ ಕೇಂದ್ರದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.