ಬೆಂಗಳೂರು(ಅ.08): ಕನ್ನಡ ಚಲನಚಿತ್ರ ರಂಗದ ಹಿರಿಯ ನಟನ ಮೂವರು ಮಕ್ಕಳು ಹಾಗೂ ಹಿರಿಯ ನಿರ್ದೇಶಕರೊಬ್ಬರ ಮಗಳಿಗೆ ಡ್ರಗ್ಸ್‌ ಪೆಡ್ಲರ್‌ಗಳ ಜತೆ ನಂಟಿದೆ. ಆ ನಟನ ಮಕ್ಕಳ ಮೊಬೈಲ್‌ ಜಪ್ತಿ ಮಾಡಿ ಪರಿಶೀಲಿಸಿದರೆ ಸತ್ಯ ಹೊರಬರಲಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಆರೋಪಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಂಬರಗಿ, ‘ಕಳೆದ ಜುಲೈನಲ್ಲಿ ಆ ನಟನ ಮಕ್ಕಳ ಕಾರು ಅಪಘಾತವಾಗಿತ್ತು. ಆಗ ಪೊಲೀಸ್‌ ಕೇಸ್‌ನಲ್ಲಿ ಮಕ್ಕಳ ಹೆಸರು ಬಾರದಂತೆ ನೋಡಿಕೊಳ್ಳಲಾಗಿದೆ. ಡ್ರಗ್ಸ್‌ ಪಾರ್ಟಿ ಮುಗಿಸಿಕೊಂಡು ಮನೆಗೆ ಬರುವಾಗಲೇ ಅಪಘಾತವಾಗಿದೆ. ಈ ಬಗ್ಗೆ ತನಿಖೆ ನಡೆಸಿದರೆ ನಿಜವೇನು ಬಹಿರಂಗವಾಗಲಿದೆ. ನಾನು ಕವಡೆ ಶಾಸ್ತ್ರ ಹೇಳುತ್ತಿಲ್ಲ’ ಎಂದಿದ್ದಾರೆ.

‘ಕನ್ನಡ ಚಲನಚಿತ್ರ ರಂಗದ ಹಿರಿಯ ನಟನ ಮೂವರು ಮಕ್ಕಳು ಹಾಗೂ ಹಿರಿಯ ನಿರ್ದೇಶಕನ ಮಗಳಿಗೆ ಡ್ರಗ್ಸ್‌ ಪೆಡ್ಲರ್‌ಗಳ ಸಂಪರ್ಕವಿದೆ. ಆ ನಟನ ಮಕ್ಕಳ ಸೋದರ ಮಾವ ಹಿರಿಯ ನಿರ್ದೇಶಕರಾಗಿದ್ದಾರೆ. ಇನ್ನು ‘ಎ’ ಹೆಸರಿನ ನಟನಿಗೆ ಡ್ರಗ್ಸ್‌ ಚಟವಿದೆ. ಹಲವು ವರ್ಷಗಳಿಂದ ಮಾದಕ ವಸ್ತುವಿಗೆ ಆ ನಟ ದಾಸನಾಗಿದ್ದ. ಈಗ ವ್ಯಸನ ಮುಕ್ತನಾಗಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾನೆ. ಇದೇ ರೀತಿ ಹಲವು ನಟ-ನಟಿಯರಿಗೆ ಮಾದಕ ವಸ್ತು ಚಟವಿದೆ’ ಎಂದು ಸಂಬರಗಿ ದೂರಿದ್ದಾರೆ.

ಶಾಸಕ ಜಮೀರ್‌ ವಿರುದ್ಧ ಸಿಎಂಗೆ ಸಂಬರಗಿ ದೂರು

‘ಕೆಲ ದಿನಗಳ ಹಿಂದೆ ನಟಿಯೊಬ್ಬಳ ಆತ್ಮಹತ್ಯೆ ಯತ್ನದ ಹಿಂದೆ ಸಹ ಮಾದಕ ವಸ್ತು ಚಟವಿದೆ. ಆ ನಟಿಯ ತಾಯಿ, ಮಗಳ ವರ್ತನೆಯಿಂದ ಬೇಸತ್ತು ಹೋಗಿದ್ದಾಳೆ. ಸಾಮಾಜಿಕ ಜಾಲ ತಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ನಟಿ ಬರೆದುಕೊಂಡಿದ್ದಳು. ಈ ಸಂದೇಶ ನೋಡಿದ ಕೂಡಲೇ ನಾನೇ ಆ ನಟಿಯ ಜೀವ ರಕ್ಷಣೆಗೆ ಶ್ರಮಿಸಿದೆ. ಡ್ರಗ್ಸ್‌ ಸೇವನೆಯಿಂದಲೇ ಖಿನ್ನತೆಗೊಳಗಾಗಿ ಆಕೆ ಜೀವ ಕಳೆದುಕೊಳ್ಳಲು ಹೋಗಿದ್ದು. ಪರಿಸ್ಥಿತಿ ಅರಿತುಕೊಳ್ಳದೆ ಹೋದರೆ ಕಷ್ಟವಾಗಲಿದೆ’ ಎಂದು ಪ್ರಶಾಂತ್‌ ಸಂಬರಗಿ ಹೇಳಿದ್ದಾರೆ.

ಸಂಜನಾ ಮಧ್ಯವರ್ತಿ ಕೆಲಸ:

‘ಮಾದಕ ವಸ್ತು ಮಾರಾಟ ದಂಧೆಯಲ್ಲಿ ಹಣಕ್ಕಾಗಿ ನಟಿ ಸಂಜನಾ ಗಲ್ರಾನಿ ಮಧ್ಯವರ್ತಿಯಂತೆ ಮಾಡಿದ್ದಾಳೆ. ಹಲವು ನಟಿ-ನಟಯರನ್ನು ಆ ಜಾಲಕ್ಕೆ ಸಂಜನಾ ಪರಿಚಯಿಸಿದ್ದಾಳೆ. ಆದಷ್ಟುಬೇಗ ಹಣ ಸಂಪಾದಿಸಬೇಕು ಎಂಬ ದುರಾಸೆಯೇ ಇದಕ್ಕೆ ಕಾರಣವಾಗಿದೆ. 60 ಸಿನಿಮಾಗಳಲ್ಲಿ ನಟಿಸಿದ ಸ್ಟಾರ್‌ ನಟಿಯೊಬ್ಬಳಿಗೆ ಸಂಜನಾ ಗಾಳಕ್ಕೆ ಹಾಕಿದ್ದಳು. ಪಾರ್ಟಿಯಲ್ಲಿ ಪೆಡ್ಲರ್‌ಗಳಿಗೆ ಆ ನಟಿಯನ್ನು ಸಂಜನಾ ಪರಿಚಯಿಸಿದ್ದಳು. ಆದರೆ ಕೊನೆ ಕ್ಷಣದಲ್ಲಿ ಆ ಸ್ಟಾರ್‌ ನಟಿ ಪರಾಗಿದ್ದಾಳೆ. ಈಗ ಡ್ರಗ್ಸ್‌ ಕೇಸಿನಲ್ಲಿ ಪ್ರಸ್ತಾಪವಾಗಿರುವ ಆರೋಪಿಗೆ ಆ ಸ್ಟಾರ್‌ ಸ್ನೇಹವಿತ್ತು. ಈಗ ನಾನು ದೊಡ್ಡ ಗಂಡಾಂತರದಿಂದ ಪಾರಾದರೆ ಎನ್ನುತ್ತಿದ್ದಾಳೆ. ಕೆಲವೇ ದಿನಗಳಲ್ಲಿ ಆ ನಟಿ ಬಹಿಂಗವಾಗಿ ಮಾತನಾಡುತ್ತಾಳೆ’ ಎಂದು ಹೇಳಿದ್ದಾರೆ.

ತಮ್ಮ ದಂಧೆಗೆ ನಟಿ ಸಂಜನಾ ಸೇರಿ ಹಲವು ನಟಿಯರನ್ನು ಮಾಫಿಯಾ ಸದಸ್ಯರು ಬಳಸಿಕೊಂಡಿದ್ದಾರೆ. ಪ್ರೇಮದ ಹೆಸರಿನಲ್ಲಿ ನಟಿಯರನ್ನು ಸೆಳೆಯಲು ಕುತಂತ್ರ ನಡೆದಿದೆ. ಹಣ ಹಾಗೂ ಐಷಾರಾಮಿ ಜೀವನ ಆಮಿಷವೊಡ್ಡಿ ಸ್ಟಾರ್‌ಗಳನ್ನು ಡ್ರಗ್ಸ್‌ ಮಾಫಿಯಾ ಬಲೆಗೆ ಬೀಳಿಸಿಕೊಳ್ಳುತ್ತಿದೆ. ಡ್ರಗ್ಸ್‌ ಪೆಡ್ಲರ್‌ನಿಂದ ಮುಕ್ತನಾದ ಕೆಲವು ನಟಿಯರನ್ನು ನಾನು ಭೇಟಿಯಾಗಿ ಮಾತನಾಡಿದ್ದೇನೆ ಎಂದು ಸಂಬರಗಿ ಹೇಳಿಕೊಂಡಿದ್ದಾರೆ.

ಡ್ರಗ್ಸ್‌ ಜಾಲದಲ್ಲಿ 18-20 ನಟ-ನಟಿಯರು

‘ಮಾದಕ ವಸ್ತು ಜಾಲದಲ್ಲಿರುವ ಸುಮಾರು 18-20 ನಟ-ನಟಿಯರ ಹೆಸರು ಸಮೇತ ಸಿಸಿಬಿ ಪೊಲೀಸರಿಗೆ ಲಿಖಿತವಾಗಿ ಬರೆದುಕೊಂಡಿದ್ದೇನೆ. ಅವರು ಯಾವ ಹೋಟೆಲ್‌ಗಳಲ್ಲಿ ಪಾರ್ಟಿ ಮಾಡಿದ್ದಾರೆ. ಯಾರೆಲ್ಲ ಇದ್ದರೂ ಎಂಬುದಾಗಿ ಸಹ ಅಧಿಕಾರಿಗಳು ತಿಳಿಸಿದ್ದೇನೆ. ಮುಂದಿನ ದಿನಗಳಲ್ಲಿ ಆ ಹೆಸರುಗಳು ಬಹಿರಂಗವಾಗಲಿವೆ’ ಎಂದು ಸಾಮಾ​ಜಿಕ ಕಾರ್ಯ​ಕರ್ತ ಪ್ರಶಾಂತ್‌ ಸಂಬರಗಿ ಹೇಳಿದ್ದಾರೆ.