ಬೆಂಗಳೂರು(ಅ.28):  ಕೆಲ ದಿನಗಳ ಹಿಂದೆ ಜೆ.ಪಿ.ನಗರ ಸಮೀಪ ಹೋಟೆಲ್‌ವೊಂದರ ಜೂಜು ಅಡ್ಡೆ ಮೇಲೆ ಪುಟ್ಟೇನಹಳ್ಳಿ ಪೊಲೀಸರು ದಾಳಿ ನಡೆಸಿದಾಗ ಅದೇ ಠಾಣೆಯ ಏಳು ಮಂದಿ ಕಾನ್‌ಸ್ಟೇಬಲ್‌ಗಳು ಸಿಕ್ಕಿಬಿದ್ದಿದ್ದಾರೆ.

ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ದಕ್ಷಿಣ ವಿಭಾಗದ ಡಿಸಿಪಿ ಹರೀಶ್‌ ಪಾಂಡೆ ಅವರು, ಅ.19 ರಂದು ಪುಟ್ಟೇನಹಳ್ಳಿಯ 27ನೇ ಅಡ್ಡರಸ್ತೆಯ ನಂದಿನಿ ಹೋಟೆಲ್‌ನಲ್ಲಿ ಜೂಜಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿತು. ಅದರನ್ವಯ ಪೊಲೀಸರು ದಾಳಿ ನಡೆಸಿದ್ದರು. ಆ ವೇಳೆ ಜೂಜಾಡುತ್ತಿದ್ದ ಪುಟ್ಟೇನಹಳ್ಳಿ ಠಾಣೆ 7 ಮಂದಿ ಕಾನ್‌ಸ್ಟೇಬಲ್‌ಗಳು ಸಿಕ್ಕಿಬಿದ್ದಿದ್ದಾರೆ ಎಂದರು.

ಈ ಘಟನೆ ಕುರಿತು ಸುಬ್ರಹ್ಮಣ್ಯಪುರ ಉಪ ವಿಭಾಗದ ಎಸಿಪಿ ವರದಿ ಸಲ್ಲಿಸಿದ್ದಾರೆ. ಈ ವರದಿ ಪರಿಶೀಲಿಸಿದ ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಜೂಜು ಅಡ್ಡೆಗಳ ಮೇಲೆ ನಿಯಂತ್ರಿಸಬೇಕಾದ ಪೊಲೀಸರೇ ಈಗ ಜೂಜಾಟ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಬೇಸರ ವ್ಯಕ್ತಪಡಿಸಿದರು.

ಆನ್‌ಲೈನ್ ರಮ್ಮಿ, ಪೋಕರ್ ಬ್ಯಾನ್; ಸರ್ಕಾರದ ದಿಟ್ಟ ನಿರ್ಧಾರ

ಕೆಲ ದಿನಗಳ ಹಿಂದೆ ಅಂತಾರಾಜ್ಯ ಜೂಜು ಅಡ್ಡೆಗೆ ಸಹಕಾರ ನೀಡಿದ ಆರೋಪದ ಮೇರೆಗೆ ಮಹದೇವಪುರ ಠಾಣೆ ಇನ್ಸ್‌ಪೆಕ್ಟರ್‌ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ ಅವರನ್ನು ಆಯುಕ್ತ ಕಮಲ್‌ ಪಂತ್‌ ಅಮಾನತುಗೊಳಿಸಿದ್ದರು. ಈಗ ಜೂಜು ಅಡ್ಡೆಯಲ್ಲಿ ಪೊಲೀಸರು ಪತ್ತೆಯಾಗಿರುವುದು ಇಲಾಖೆಗೆ ತೀವ್ರ ಮುಜುಗರ ಉಂಟು ಮಾಡಿದೆ.