ಬೆಂಗಳೂರು (ಸೆ. 19): ಮಾದಕ ವಸ್ತು ಮಾರಾಟ ಜಾಲದ ಕಬಂಧ ಬಾಹುಗಳು ಚಲನಚಿತ್ರ ನಟರು ಹಾಗೂ ರಾಜಕಾರಣಿಗಳ ಮಕ್ಕಳ ಬಳಿಕ ಈಗ ಪೊಲೀಸ್‌ ಇಲಾಖೆಗೆ ಚಾಚಿ ಕಂಡಿದ್ದು, ಓರ್ವ ಹಿರಿಯ ಐಪಿಎಸ್‌ ಅಧಿಕಾರಿ ಸೇರಿದಂತೆ 10ಕ್ಕೂ ಹೆಚ್ಚಿನ ಪೊಲೀಸರಿಗೆ ಸಿಸಿಬಿ ತನಿಖೆ ಬಿಸಿ ತಟ್ಟುವ ಸಾಧ್ಯತೆಗಳಿವೆ.

ಪೇಜ್‌-3 ಪಾರ್ಟಿ ಆಯೋಜನೆ ದಂಧೆಯ ಕಿಂಗ್‌ಪಿನ್‌ ಎನ್ನಲಾದ ವೀರೇನ್‌ ಖನ್ನಾ ಸಂಪರ್ಕದ ಸರಪಳಿಯನ್ನು ಸಿಸಿಬಿ ಬಿಡಿಸಿದ್ದು, ಅದರಲ್ಲಿ ಹಿರಿಯ ಐಪಿಎಸ್‌ ಅಧಿಕಾರಿ (ಎಸ್ಪಿ ದಜೆÜರ್‍), ಓರ್ವ ಎಸಿಪಿ ಹಾಗೂ ನಾಲ್ಕೈದು ಇನ್ಸ್‌ಪೆಕ್ಟರ್‌ಗಳ ಹೆಸರು ಪ್ರಸ್ತಾಪವಾಗಿದೆ. ಈ ಪೊಲೀಸರ ಪಾಲಿಗೆ ಖನ್ನಾ ಸ್ನೇಹವು ಮುಳ್ಳಾಗಬಹುದು ಎಂದು ತಿಳಿದು ಬಂದಿದೆ.

ಮಾದಕ ವಸ್ತು ಜಾಲದಲ್ಲಿ ಹೆಸರು ಕೇಳಿ ಬಂದಿರುವ ಪೊಲೀಸರ ವಿರುದ್ಧ ತನಿಖೆ ಸಂಬಂಧ ನಗರ ಆಯುಕ್ತರ ಮಟ್ಟದಲ್ಲಿ ಜಂಟಿ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌ ಸೇರಿ ಅಧಿಕಾರಿಗಳು ಸಮಾಲೋಚಿಸಿದ್ದಾರೆ. ಪ್ರಕರಣದಲ್ಲಿ ಖನ್ನಾ ತನಿಖೆ ಮುಗಿದ ತರುವಾಯ ಆರೋಪಕ್ಕೆ ತುತ್ತಾಗಿರುವ ಪೊಲೀಸರನ್ನು ಸಿಸಿಬಿ ಪ್ರಶ್ನಿಸಲಿದೆ ಎನ್ನಲಾಗಿದೆ.

"

ಪೂರ್ವ ದಿಕ್ಕಿನ ಖಾಕಿ ಕೋಟೆಗೆ ನಡುಕ:

ಮಾದಕ ವಸ್ತು ಮಾರಾಟ ಜಾಲ ನಂಟು ಸಂಬಂಧ ಪೇಜ್‌-3 ಪಾರ್ಟಿಗಳ ಆಯೋಜಕ ವೀರೇನ್‌ ಖನ್ನಾನನ್ನು ಬಂಧಿಸಿದ ಸಿಸಿಬಿ, ಆತನ ಸ್ನೇಹ ವಲಯವನ್ನು ಜಾಲಾಡಿತು. ಆಗ ಆತನ ಸಂಪರ್ಕದಲ್ಲಿ ಸಿನಿಮಾ ತಾರೆಯರು, ರಿಯಲ್‌ ಎಸ್ಟೇಟ್‌ ಉದ್ಯಮಿಗಳು, ರಾಜಕಾರಣಿಗಳ ಮಕ್ಕಳು ಹಾಗೂ ಪೊಲೀಸರು ಸೇರಿದಂತೆ ಹಲವು ಗಣ್ಯರ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ಹೀಗಾಗಿ ಖನ್ನಾನ ರಂಗು ರಂಗಿನ ಪಾರ್ಟಿಗಳಿಗೆ ಐಪಿಎಸ್‌ ಅಧಿಕಾರಿ ರಕ್ಷಣೆ ಕೊಟ್ಟಿರಬಹುದು ಎಂಬ ಸಂಶಯವು ಸಿಸಿಬಿ ಮೂಲಗಳು ವ್ಯಕ್ತಪಡಿಸಿವೆ.

ಬೆಂಗಳೂರು ನಗರದ ಪೂರ್ವ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಹೆಚ್ಚಿನ ಪೊಲೀಸರು ವೀರೇನ್‌ ಗೆಳೆತನದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಹಿರಿಯ ಐಪಿಎಸ್‌ ಅಧಿಕಾರಿ ಹಾಗೂ ಎಸಿಪಿ ಸಹ ಒಡನಾಟವಿದೆ. ಈ ಐಪಿಎಸ್‌ ಅಧಿಕಾರಿ, ಪೂರ್ವ ವಿಭಾಗದ ಡಿಸಿಪಿ ಆಗಿ ಕಾರ್ಯನಿರ್ವಹಿಸುವಾಗ ಖನ್ನಾನಿಗೆ ಪರಿಚಯವಾಗಿದ್ದಾರೆ. ಬಳಿಕ ಅವರ ಮಧ್ಯೆ ಸ್ನೇಹ ಬೆಳೆದಿದೆ. ಬಹುಕೋಟಿ ವಂಚನೆ ಪ್ರಕರಣವೊಂದರಲ್ಲಿ ಸಹ ಆ ಅಧಿಕಾರಿ ಹೆಸರು ಕೇಳಿ ಬಂದಿರುವುದು ಗಮನಾರ್ಹ ಸಂಗತಿಯಾಗಿದೆ.

ಇನ್ನು ಬಹಳ ವರ್ಷ ರಾಜಧಾನಿಯಲ್ಲಿ ಎಸಿಪಿ ಕೆಲಸ ಮಾಡಿದ್ದಾರೆ. ಇನ್ಸ್‌ಪೆಕ್ಟರ್‌ ಆಗಿಯೂ ನಗರದಲ್ಲಿ ಸೇವೆ ಸಲ್ಲಿಸಿರುವ ಅವರು, ಎಸಿಪಿ ಹುದ್ದೆಗೆ ಮುಂಬಡ್ತಿ ನಂತರ ಕೇಂದ್ರ ಭಾಗದ ಕೆಲಸ ಮಾಡಿದ್ದರು. ಖನ್ನಾ ಸ್ನೇಹವು ಎಸಿಪಿ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಎರಡು ವರ್ಷಗಳ ಹಿಂದೆ ಕಾಂಗ್ರೆಸ್‌ ಶಾಸಕರೊಬ್ಬರ ಪುತ್ರನ ಗಲಾಟೆ ಪ್ರಕರಣದಲ್ಲೂ ಶಾಸಕರ ಪುತ್ರನಿಗೆ ನೆರವಾದ ಆರೋಪಕ್ಕೆ ಎಸಿಪಿ ತುತ್ತಾಗಿದ್ದರು. ಇನ್ನುಳಿದಂತೆ ಈ ಹಿಂದೆ ಇಂದಿರಾ ನಗರ, ಹಲಸೂರು, ಕಮರ್ಷಿಯಲ್‌ ಸ್ಟ್ರೀಟ್‌, ಅಶೋಕ ನಗರ, ಕಬ್ಬನ್‌ ಪಾರ್ಕ್ ಸೇರಿದಂತೆ ಪೂರ್ವ ಹಾಗೂ ಕೇಂದ್ರ ಭಾಗದ ಕೆಲವು ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದ ಇನ್ಸ್‌ಪೆಕ್ಟರ್‌ಗಳಿಗೂ ಸಹ ಸಿಸಿಬಿ ತನಿಖೆ ನಡುಕ ಹುಟ್ಟಿಸಿದೆ ಎಂದು ತಿಳಿದು ಬಂದಿದೆ.

ಪಾರ್ಟಿಗಳಿಗೆ ಪೊಲೀಸರ ರಕ್ಷಣೆ:

ನಗರದಲ್ಲಿ ಪಬ್‌, ಕ್ಲಬ್‌, ಐಷಾರಾಮಿ ಹೋಟೆಲ್‌ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ವೀರೇನ್‌ ಖನ್ನಾ ಪಾರ್ಟಿ ಆಯೋಜಿಸುತ್ತಿದ್ದ. ಈ ಪಾರ್ಟಿಗಳಿಗೆ ತೊಂದರೆ ಉಂಟಾಗದಂತೆ ರಕ್ಷಣೆ ಸಲುವಾಗಿ ಪೊಲೀಸರನ್ನು ಆತ ಸ್ನೇಹದ ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಅದರಲ್ಲೂ ಪಬ್‌ ಹಾಗೂ ಕ್ಲಬ್‌ಗಳ ಬಾಹುಳ್ಯದ ಪೊಲೀಸ್‌ ಅಧಿಕಾರಿಗಳೇ ಆತನ ಅಚ್ಚುಮೆಚ್ಚಿನವರಾಗಿದ್ದರು ಎಂದು ತಿಳಿದು ಬಂದಿದೆ.

ಪಾಸ್‌​ವರ್ಡ್‌ ನೀಡ​ಲು ಒಪ್ಪದ ಖನ್ನಾ

ತನ್ನ ಮೊಬೈಲ್‌ ಪಾಸ್‌ವರ್ಡ್‌ ನೀಡಲು ವೀರೇನ್‌ ಖನ್ನಾ ನಿರಾಕರಿಸುತ್ತಿದ್ದಾನೆ. ಆ ಮೊಬೈಲ್‌ನಲ್ಲಿ ಆತನ ಸಂಪರ್ಕ ಜಾಲದ ಕುರಿತು ಮಹತ್ವದ ಮಾಹಿತಿಗಳು ಅಡಕವಾಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಪಾಸ್‌ವರ್ಡ್‌ ನೀಡುವಂತೆ ನ್ಯಾಯಾಲಯದ ಸೂಚನೆಯನ್ನು ಆತ ಪಾಲಿಸಲಿಲ್ಲ. ಈಗ ಸೈಬರ್‌ ತಜ್ಞರ ನೆರವು ಪಡೆದು ಮೊಬೈಲ್‌ ಆನ್‌ ಲಾಕ್‌ ಮಾಡಿಸಲು ನಿರ್ಧರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

- ಗಿರೀಶ್ ಮಾದೇನಹಳ್ಳಿ