ಬೆಂಗಳೂರು(ನ.09):  ಮಹಜರ್‌ಗೆ ಕರೆದೊಯ್ದಿದ್ದ ವೇಳೆ ಸಬ್‌ಇನ್ಸ್‌ಪೆಕ್ಟರ್‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಸುಲಿಗೆಕೋರನ ಕಾಲಿಗೆ ಗುಂಡು ಹಾರಿಸಿ ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆ.ಜಿ.ಹಳ್ಳಿ ನಿವಾಸಿ ಅರ್ಬಾಜ್‌ ಖಾನ್‌ ಅಲಿಯಾಸ್‌ ಕಾಂಚಾ (25) ಗುಂಡೇಟಿನಿಂದ ಗಾಯಗೊಂಡವನು. ಆರೋಪಿಯಿಂದ ಹಲ್ಲೆಗೊಳಗಾದ ಪಿಎಸ್‌ಐ ಷಹಜಾನ್‌ ಅವರನ್ನು ಚಿಕಿತ್ಸೆಗಾಗಿ ಅಂಬೇಡ್ಕರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಎಸ್‌.ಡಿ. ಶರಣಪ್ಪ ತಿಳಿಸಿದ್ದಾರೆ.

ಶರತ್‌ ಎಂಬುವರು ಕಾಚರಕನಹಳ್ಳಿ ಹೆಣ್ಣೂರಿನ ಮುಖ್ಯರಸ್ತೆಯಲ್ಲಿ ಕಾಂಡಿಮೆಂಟ್ಸ್‌ ಇಟ್ಟುಕೊಂಡಿದ್ದಾರೆ. ಅ.22ರಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಅಂಗಡಿ ಬಳಿ ಹೋಗಿದ್ದ ಅರ್ಬಾಜ್‌ ಖಾನ್‌ ಮತ್ತು ಆತನ ಸಹಚರರು ಹಣ ನೀಡುವಂತೆ ಅಂಗಡಿ ಮಾಲೀಕನಿಗೆ ಬೆದರಿಕೆ ಹಾಕಿದ್ದರು. ಹಣ ಕೊಡದಿದ್ದಾಗ ಡ್ರ್ಯಾಗರ್‌ನಿಂದ ಅಂಗಡಿ ಮುಂಭಾಗದಲ್ಲಿದ್ದ ವಸ್ತುಗಳನ್ನು ಜಖಂಗೊಳಿಸಿ, ಬಳಿಕ ಹಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಅಂಗಡಿ ಮಾಲೀಕ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಅರ್ಬಾಜ್‌ ಖಾನ್‌ ಕೃತ್ಯ ಎಸಗಿರುವುದು ಪತ್ತೆಯಾಗಿತ್ತು. ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಪೊಲೀಸರು ಕರೆತಂದಿದ್ದರು. ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದ.

ಕರ್ತವ್ಯ ನಿರತ ಪಿಎಸ್‌ಐ ಮೇಲೆ ಮಾರಣಾಂತಿಕ ಹಲ್ಲೆ: ಆರೋಪಿ ಬಂಧನ

ಕೃತ್ಯಕ್ಕೆ ಬಳಸಿದ್ದ ಡ್ರ್ಯಾಗರ್‌ ಅನ್ನು ಎಚ್‌ಆರ್‌ಬಿಆರ್‌ನ ವಾಟರ್‌ ಟ್ಯಾಂಕರ್‌ ಬಳಿ ಎಸೆದಿರುವುದಾಗಿ ಹೇಳಿದ್ದ. ಅದನ್ನು ಜಪ್ತಿ ಮಾಡಲು ಭಾನುವಾರ ಮಧ್ಯಾಹ್ನ 12 ಗಂಟೆಯಲ್ಲಿ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಡ್ರ್ಯಾಗರ್‌ ತೆಗೆದುಕೊಂಡು ಪಿಎಸ್‌ಐ ಷಹಜಾನ್‌ ಅವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಇನ್‌ಸ್ಪೆಕ್ಟರ್‌ ಜಯರಾಜ್‌, ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಆರೋಪಿ ಅರ್ಬಾಜ್‌ಗೆ ಶರಣಾಗುವಂತೆ ಸೂಚಿಸಿದ್ದರು. ಇದನ್ನು ಲೆಕ್ಕಿಸದೆ ಮತ್ತೇ ಹಲ್ಲೆಗೆ ಮುಂದಾಗಿದ್ದ. ಇನ್‌ಸ್ಪೆಕ್ಟರ್‌ ಜಯರಾಜ್‌ ಸಿಬ್ಬಂದಿಯ ಆತ್ಮರಕ್ಷಣೆಗಾಗಿ ಆರೋಪಿಯ ಎಡಗಾಲಿಗೆ ಗುಂಡಿಕ್ಕಿ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಬೇಲ್‌ ಮೇಲೆ ಹೊರಬಂದಿದ್ದ

ಆರೋಪಿ ಅರ್ಬಾಜ್‌ ಖಾನ್‌ 2016ರಲ್ಲಿ ತನ್ನ ಸಹಚರರ ಜೊತೆಗೂಡಿ ಕೆ.ಜಿ.ಹಳ್ಳಿಯಲ್ಲಿ ದ್ವಿಚಕ್ರ ವಾಹನ ಕಳವು ಮಾಡಿದ್ದ. ಪಾದಚಾರಿಯಿಂದ ಮೊಬೈಲ್‌, ಪರ್ಸ್‌, ಹಣ ದೋಚಿದ್ದ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿ ಕಳೆದ ಮೂರು ತಿಂಗಳಿನಿಂದ ಎಚ್‌ಬಿಆರ್‌ ಲೇಔಟ್‌, ಹೆಣ್ಣೂರು, ಅಮೃತಹಳ್ಳಿ, ಬಾಗಲೂರು ಸೇರಿದಂತೆ ಇತರೆಡೆ ಮಾರಕಾಸ್ತ್ರದಿಂದ ಬೆದರಿಸಿ ಮೊಬೈಲ್‌, ಹಣ ಸುಲಿಗೆ ಮಾಡಿದ್ದ ಎಂದು ವಿವರಿಸಿದರು.