ಬೆಂಗಳೂರು(ಅ.27): ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದ ಪತಿ, ತನ್ನ ಜತೆಗಿನ ಪತ್ನಿಯ ಏಕಾಂತದ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೆ.ಆರ್‌.ಪುರದ ದೇವಸಂದ್ರ ನಿವಾಸಿ 29 ವರ್ಷದ ಮಹಿಳೆ ಕೊಟ್ಟ ದೂರಿನ ಮೇರೆಗೆ ಹೊಂಗಸಂದ್ರ ನಿವಾಸಿ ಹರಿಕೃಷ್ಣ ಎಂಬಾತನ ವಿರುದ್ಧ ವೈಟ್‌ಫೀಲ್ಡ್‌ ಸಿಇಎನ್‌ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.

ಸಂತ್ರಸ್ತೆಗೆ ಆರೋಪಿ ಎರಡನೇ ಪತಿಯಾಗಿದ್ದು, ಮೊದಲ ಪತ್ನಿಯಿಂದ 2015ರಲ್ಲಿ ವಿಚ್ಛೇದನ ಪಡೆದಿದ್ದರು. ಖಾಸಗಿ ಕಂಪನಿಯೊಂದರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಹರಿಕೃಷ್ಣನ ಪರಿಚಯವಾಗಿ ಒಂದು ವರ್ಷದ ಹಿಂದೆ ವಿವಾಹವಾಗಿದ್ದರು. ಮೊದಲನೇ ಪತಿ ಜತೆ ಸಂಬಂಧ ಮುಂದುವರಿಸಿದ್ದಿಯಾ ಎಂದು ಪತ್ನಿಯ ಶೀಲ ಶಂಕಿಸಿ ಹರಿಕೃಷ್ಣ ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ಪತಿಯ ವಿರುದ್ಧ ಫೆಬ್ರವರಿಯಲ್ಲಿ ಬೊಮ್ಮನಹಳ್ಳಿ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದರು. ಈ ಕುರಿತು ಎನ್‌ಸಿಆರ್‌ ದಾಖಲಿಸಿಕೊಂಡಿದ್ದ ಪೊಲೀಸರು, ಇಬ್ಬರಿಗೂ ಬುದ್ಧಿ ಹೇಳಿ ಕಳುಹಿಸಿದ್ದರು.

ಫೇಸ್‌ಬುಕ್‌ನಲ್ಲಿ ಪೋರ್ನ್‌ ವಿಡಿಯೋ ಪೋಸ್ಟ್ ಮಾಡಿದ BJP ಮುಖಂಡ

ಇತ್ತೀಚೆಗೆ ಏಕಾಂತದಲ್ಲಿದ್ದಾಗ ಅರಿವಿಗೆ ಬಾರದಂತೆ, ಹರಿಕೃಷ್ಣ ತನ್ನ ಮೊಬೈಲ್‌ನಲ್ಲಿ ಖಾಸಗಿ ದೃಶ್ಯಗಳನ್ನು ಚಿತ್ರಿಸಿಕೊಂಡಿದ್ದಾನೆ. ಅದನ್ನು ವ್ಯಾಟ್ಸಾಪ್‌ ಮೂಲಕ ಸ್ನೇಹಿತರಿಗೆ ರವಾನಿಸಿದ್ದಾನೆ. ಅಲ್ಲದೆ, ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಖಾಸಗಿ ದೃಶ್ಯಗಳನ್ನು ಅಪ್‌ಲೋಡ್‌ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.