ವಿಜಯಪುರ(ಫೆ.15): ನಗರದ ಆಶ್ರಮ ಹತ್ತಿರದ ಟೀಚರ್ಸ್‌ ಕಾಲೋನಿಯಲ್ಲಿರುವ ಬಸ್‌ ತಂಗುದಾಣದಲ್ಲಿ ಭಿಕ್ಷುಕನ ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುರಕ್ಷಾ ಕಾಲೋನಿಯ ಮಹಾಂತೇಶ ಈರಪ್ಪ ಮೇಟಿ (28) ಬಂಧಿತ ಆರೋಪಿ.

ಅಪರಿಚಿತ ಭಿಕ್ಷುಕನೊಬ್ಬ ಅಲ್ಲಿ ಇಲ್ಲಿ ಭಿಕ್ಷೆ ಬೇಡುತ್ತ ತಿರುಗಾಡಿ ಬಸ್‌ ತಂಗುದಾಣದಲ್ಲಿ ವಾಸಿಸುತ್ತಿದ್ದ. ಫೆ. 12ರಂದು ಈ ಭಿಕ್ಷುಕನ ಮೇಲೆ ಹಲ್ಲೆ ನಡೆಸಿ ಅಮಾನುಷವಾಗಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಆದರ್ಶನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಡ್ರಗ್ಸ್‌ ಮಾಫಿಯಾ: ನೈಜೀರಿಯಾ ಪ್ರಜೆಗಳಿಂದ 15 ಲಕ್ಷದ ಮಾದಕ ವಸ್ತು ಜಪ್ತಿ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ ಅಗರವಾಲ್‌, ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ ಅರಸಿದ್ದಿ ಮಾರ್ಗದರ್ಶನದಲ್ಲಿ ವಿಜಯಪುರ ಡಿಎಸ್ಪಿ ಲಕ್ಷ್ಮಿನಾರಾಯಣ ನೇತೃತ್ವದಲ್ಲಿ ಗೋಳಗುಮ್ಮಟ ಪೊಲೀಸ್‌ ಠಾಣೆ ಸಿಪಿಐ ಬಸವರಾಜ ಮುಕರ್ತಿಹಾಳ, ಪೊಲೀಸ್‌ ಅಧಿಕಾರಿ, ಸಿಬ್ಬಂದಿಯನ್ನು ಒಳಗೊಂಡ ತನಿಖಾ ತಂಡ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆ ಕಾಲಕ್ಕೆ ಆರೋಪಿಯು ಭಿಕ್ಷುಕನ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.