ಲಂಡನ್‌ನಿಂದ ಪತ್ನಿಗೆ ಸರ್‌ಪ್ರೈಸ್‌ ನೀಡಲು ಬಂದ ನೌಕಾಧಿಕಾರಿ ಸೌರಭ್‌ ರಜಪೂತ್ ಕೊಲೆಯಾಗಿದ್ದು, ಆತನ 6 ವರ್ಷದ ಮಗಳಿಗೂ ಈ ಬಗ್ಗೆ ಸುಳಿವು ಸಿಕ್ಕಿತ್ತು ಎಂದು ತಿಳಿದುಬಂದಿದೆ. ಮುಸ್ಕಾನ್ ಮತ್ತು ಆಕೆಯ ಪ್ರಿಯಕರನಿಂದ ಕೊಲೆ ನಡೆದಿದೆ ಎಂದು ಆರೋಪಿಸಲಾಗಿದೆ.

ಮೇರಠ್‌ (ಮಾ.21): ಪತ್ನಿಗೆ ಸರ್‌ಪ್ರೈಸ್‌ ನೀಡಲೆಂದು ಲಂಡನ್‌ನಿಂದ ಬಂದು ಆಕೆಯ ಕೈಯ್ಯಲ್ಲೇ ಕೊಲೆಯಾದ ನೌಕಾಧಿಕಾರಿ ಸೌರಭ್‌ ರಜಪೂತ್‌ ಸಾವನ್ನಪ್ಪಿದ ಬಗ್ಗೆ ಆತನ 6 ವರ್ಷದ ಪುತ್ರಿಗೆ ತಿಳಿದಿತ್ತು ಎಂದು ಅವರ ತಾಯಿ ರೇಣು ದೇವಿ ಹೇಳಿದ್ದಾರೆ.

ಹತ್ಯೆಯ ಕುರಿತು ಪುಟ್ಟ ಬಾಲಕಿಗೆ ಏನೋ ಸುಳಿವು ಸಿಕ್ಕಿತ್ತು. ಹೀಗಾಗಿ ನೆರೆಮನೆಯವರ ಬಳಿ ಅಪ್ಪ ಡ್ರಂನಲ್ಲಿದ್ದಾರೆ ಎಂದು ಹೇಳಿದ್ದ ವಿಷಯ ಇದೀಗ ಬೆಳಕಿಗೆ ಬಂದಿದೆ. ಜೊತೆಗೆ ರೋಪಿ ಮುಸ್ಕಾನ್‌ನ ಪೋಷಕರಿಗೂ ಹತ್ಯೆ ವಿಷಯ ತಿಳಿದಿತ್ತು. ಆದರೆ ಜೈಲು ಪಾಲಾಗುವುದನ್ನು ತಪ್ಪಿಸಲು ಅವರು ಇದೀಗ ನಾಟಕವಾಡುತ್ತಿದ್ದಾರೆ ಎಂದು ಸೌರಭ್‌ರ ಪೋಷಕರು ಆರೋಪಿಸಿದ್ದಾರೆ.

‘ಮುಸ್ಕಾನ್‌ ಇದ್ದ ಮನೆಯ ನವೀಕರಣಕ್ಕಾಗಿ ಅದನ್ನು ಖಾಲಿ ಮಾಡುತ್ತಿದ್ದಾಗ ಕೋಣೆಯಲ್ಲಿ ಭಾರವಾದ ಡ್ರಂ ಪತ್ತೆಯಾಗಿದೆ. ಆ ಬಗ್ಗೆ ವಿಚಾರಿಸಿದಾಗ ಗುಜರಿ ತುಂಬಿಟ್ಟಿರುವುದಾಗಿ ಮುಸ್ಕಾನ್‌ ಹೇಳಿದ್ದಳು. ಆದರೆ ಅದನ್ನು ತೆರೆದಾಗ ದುರ್ಗಂಧ ಹೊರಹೊಮ್ಮಿತು. ಕೂಡಲೇ ಪೊಲೀಸರಿಗೆ ತಿಳಿಸಲಾಯಿತು’ ಎಂದರು.

ಇದನ್ನೂ ಓದಿ: ಮಗಳ ಹುಟ್ಟುಹಬ್ಬಕ್ಕೆ ಬಂದ ಮರ್ಚಂಟ್ ನೇವಿ ಅಧಿಕಾರಿ ಕತೆ ಮುಗಿಸಿದ ಪತ್ನಿ, ಆಕೆಯ ಪ್ರಿಯಕರ

ಮೊದಲೇ ಹಳಸಿದ್ದ ಸಂಬಂಧ:

2016ರಲ್ಲಿ ಮುಸ್ಕಾನ್‌ಳನ್ನು ಪ್ರೇಮಿಸಿ ಮದುವೆಯಾಗಿದ್ದ ಸೌರಭ್‌ಗೆ, ಆಕೆ ಸಾಹಿಲ್‌ ಎಂಬುವನೊಂದಿಗೆ ಪ್ರೇಮಸಂಬಂಧ ಹೊಂದಿರುವುದು ತಡವಾಗಿ ತಿಳಿದಿತ್ತು. ವಿಷಯ ಬಹಿರಂಗವಾಗುತ್ತಿದ್ದಂತೆ ವಿಚ್ಛೇದನಕ್ಕೆ ಮುಂದಾದರೂ, ಮಗಳ ಉತ್ತಮ ಭವಿಷ್ಯಕಾಗಿ ಸೌರಭ್‌ ಆ ನಿರ್ಧಾರವನ್ನು ಕೈಬಿಟ್ಟಿದ್ದರು. ಬಳಿಕ ಅವರು 2023ರಲ್ಲಿ ಕೆಲಸಕ್ಕಾಗಿ ಲಂಡನ್‌ಗೆ ಹೋಗಿದ್ದು, ಇಲ್ಲಿ ಮುಸ್ಕಾನ್‌ ಹಾಗೂ ಸಾಹಿಲ್‌ರ ಪ್ರೇಮ ಮುಂದುವರೆದಿತ್ತು. ಇದಕ್ಕೆ ಸೌರಭ್‌ ತೊಡಕಾಗಬಹುದೆಂದು ಆತನನ್ನು ಕೊಲೆ ಮಾಡಿರುವ ಶಂಕೆಯಿದೆ.

ಪತಿ ಸೌರಭ್‌ರನ್ನು ಹತ್ಯೆ ಮಾಡುವ ಮುನ್ನ ಪತ್ನಿ ಮುಸ್ಕಾನ್‌ ಅವರೊಂದಿಗೆ ನಾಗಿನ್ ಡಾನ್ಸ್‌ ಮಾಡಿದ್ದ ವಿಡಿಯೋವೊಂದು ಇದೀಗ ವೈರಲ್‌ ಆಗಿದೆ.