ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಬಾಂಬರ್‌ ತುಮಕೂರಿನಲ್ಲಿ ಓಡಾಡಿದ್ದ ಎಂಬ ಅನುಮಾನ ಹಿನ್ನೆಲೆಯಲ್ಲಿ ತಮಕೂರು ಹಾಗೂ ಬಳ್ಳಾರಿಯಲ್ಲಿ ಬೆಂಗಳೂರಿನ ಪೊಲೀಸರು ಹುಡುಕಾಟ ನಡೆಸಿದ್ದಾರೆ. 

ತುಮಕೂರು(ಮಾ.07): ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಬಾಂಬರ್‌ ತುಮಕೂರಿನಲ್ಲಿ ಓಡಾಡಿದ್ದ ಎಂಬ ಅನುಮಾನ ಹಿನ್ನೆಲೆಯಲ್ಲಿ ಬೆಂಗಳೂರಿನ ಪೊಲೀಸರು ಹುಡುಕಾಟ ನಡೆಸಿದ್ದಾರೆ. 

ಶಂಕಿತ ಬಾಂಬರ್‌ ಮಾರ್ಚ್‌ 1ರಂದು ತುಮಕೂರಿನಲ್ಲಿ ಓಡಾಡಿದ್ದ ಎಂಬ ಶಂಕೆ ಹಿನ್ನೆಲೆಯಲ್ಲಿ ಆತನ ಸುಳಿವಿಗಾಗಿ ತುಮಕೂರಿನಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬುಧವಾರ ರಾತ್ರಿ ಇಬ್ಬರು ಡಿಸಿಪಿ ನೇತೃತ್ವದಲ್ಲಿ 28 ವಾಹನಗಳಲ್ಲಿ ಆಗಮಿಸಿದ ಪೊಲೀಸರು ತುಮಕೂರಿನ ರೈಲ್ವೆ ನಿಲ್ದಾಣ, ಮಂಡಿಪೇಟೆ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಶಂಕಿತನ ಹೆಜ್ಜೆ ಗುರುತು ಪತ್ತೆ ಹಚ್ಚಲು ಹುಡುಕಾಟ ನಡೆಸಿದ್ದಾರೆ. ನಗರದ ಬೇರೆ ಬೇರೆ ಭಾಗಗಳಲ್ಲಿ ಇರುವ ಹಲವು ಸಿಸಿ ಕ್ಯಾಮರಾಗಳ ದೃಶ್ಯವನ್ನು ಎನ್‌ಐಎ ಅಧಿಕಾರಿಗಳ ತಂಡ ವೀಕ್ಷಿಸಿದ್ದು, ತುಮಕೂರು ಪೊಲೀಸರ ಜೊತೆ ಶೋಧ ನಡೆಸಿದರು.

Breaking: ರಾಮೇಶ್ವರಂ ಕೆಫೆ ಬ್ಲಾಸ್ಟ್‌, ಬಾಂಬರ್‌ನ ಮಾಹಿತಿಗೆ ಭರ್ಜರಿ ಬಹುಮಾನ ಘೋಷಿಸಿದ ಎನ್‌ಐಎ!

ಬಳ್ಳಾರಿಗೆ ಬಂದ ಎನ್ಐಎ ತಂಡ

ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಎನ್ಐಎ ತಂಡ ಮಾಹಿತಿಯನ್ನ ಪಡೆದುಕೊಂಡಿದೆ. ಎನ್ಐಎ ತಂಡಕ್ಕೆ ಬಳ್ಳಾರಿ ಮತ್ತು ತುಮಕೂರು ಪೊಲೀಸರು ಸಾಥ್ ನೀಡಿದ್ದರು. ಆರೋಪಿ ಘಟನೆ ನಡೆದ ಬಳಿಕ ತುಮಕೂರು ಮೂಲಕ ಬಳ್ಳಾರಿ ಬಸ್ ನಿಲ್ದಾಣಕ್ಕೆ ಬಂದಿದಿದ್ದನಂತೆ. ಬಳ್ಳಾರಿ ಬಸ್ ನಿಲ್ದಾಣದಿಂದ ಮಂತ್ರಾಲಯ ಗೋಕರ್ಣ ಬಸ್ ಮೂಲಕ ಭಟ್ಕಳಗೆ ತೆರಳಿದ್ದಾನೆ. ಹೀಗಾಗಿ ಎನ್ಐಎ ತಂಡ ಬಳ್ಳಾರಿ ನಿಲ್ದಾಣಕ್ಕೆ ಬಂದು ಪರಿಶೀಲನೆ ನಡೆಸಿದೆ.

ಹತ್ತುಕ್ಕೂ ಹೆಚ್ಚು ಅಧಿಕಾರಿಗಳು ಬೆಂಗಳೂರಿಂದ ಎರಡು ಎರಡು ಕಾರುಗಳಲ್ಲಿ ಬಂದಿದ್ದು, ಬಳ್ಳಾರಿಯಿಂದಲೇ ಬೇರೆಡೆ ತೆರಳಿದ ಹಿನ್ನಲೆ ಬಳ್ಳಾರಿ ನಿಲ್ದಾಣದಲ್ಲಿ ಮಾಹಿತಿ ಪಡೆಯಲಾಗಿದೆ.