ಪ್ರಯಾಣಿಕನ ಸೋಗಿನಲ್ಲಿ ಆಟೋ ರಿಕ್ಷಾ ಹತ್ತಿದ ಕಳ್ಳನೊಬ್ಬ ಆಟೋ ಚಾಲಕನ ಮೊಬೈಲ್‌ನೊಂದಿಗೆ ಪರಾರಿಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ನಡೆದಿದೆ, ಅಲ್ಲದೇ ಇದು ಪೊಲೀಸರಿಗೆ ಸವಾಲು ಒಡ್ಡಿದೆ.
ಕಾರವಾರ, ಉತ್ತರಕನ್ನಡ (ಮಾ.27) ಪ್ರಯಾಣಿಕನ ಸೋಗಿನಲ್ಲಿ ಆಟೋ ರಿಕ್ಷಾ ಹತ್ತಿದ ಕಳ್ಳನೊಬ್ಬ ಆಟೋ ಚಾಲಕನ ಮೊಬೈಲ್‌ನೊಂದಿಗೆ ಪರಾರಿಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ನಡೆದಿದೆ, ಅಲ್ಲದೇ ಇದು ಪೊಲೀಸರಿಗೆ ಸವಾಲು ಒಡ್ಡಿದೆ.
ಘಟನೆ ಹಿನ್ನೆಲೆ:
ದಾಂಡೇಲಿ ನಗರದ ಸೋಮಾನಿ ವೃತ್ತದಿಂದ ಆರಂಭವಾದ ಈ ಘಟನೆಯಲ್ಲಿ, ಕಳ್ಳನೊಬ್ಬ ಪ್ರಯಾಣಿಕನಂತೆ ಆಟೋ ರಿಕ್ಷಾ ಹತ್ತಿದ್ದಾನೆ. ಆತ ಆಟೋ ಚಾಲಕನೊಂದಿಗೆ 1000 ರೂಪಾಯಿ ಬಾಡಿಗೆಗೆ ಮಾತನಾಡಿ, ಬ್ಯಾಂಕ್ ಸಾಲ ವಸೂಲಿಗಾಗಿ ದಾಂಡೇಲಿಯ ಕೆಲವು ಪ್ರದೇಶಗಳಿಗೆ ಕರೆದೊಯ್ಯುವಂತೆ ಹೇಳಿದ್ದಾನೆ. ಈ ಕಾರಣಕ್ಕಾಗಿ ಆಟೋ ಚಾಲಕನನ್ನು ನಗರದಾದ್ಯಂತ ಸುತ್ತಾಡಿಸಿದ್ದಾನೆ. ಬಳಿಕ, ತನ್ನ ಪರಿಚಯಸ್ಥರನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ ಎಂದು ಹೇಳಿ, ಅವರನ್ನು ಭೇಟಿಯಾಗಿ ಮಾತನಾಡಿಸಿ ಬರಬೇಕು ಎಂದು ಆಟೋವನ್ನು ಆಸ್ಪತ್ರೆಯತ್ತ ಮುಖಮಾಡಿಸಿದ್ದಾನೆ.
ನೀವು ಹತ್ತು ನಿಮಿಷ ಕಾಯಿರಿ ಒಳಗೆ ಹೋಗಿಬರ್ತೇನೆ ಎಂದ ಕಳ್ಳ:
ಆಟೋ ಚಾಲಕ ಕಳ್ಳನ ಹೇಳಿಕೆಯಂತೆ ಸರ್ಕಾರಿ ಆಸ್ಪತ್ರೆ ಆವರಣಕ್ಕೆ ಆಟೋ ತಂದು ನಿಲ್ಲಿಸಿದ್ದಾನೆ. ಆಗ ಕಳ್ಳ, 'ನೀವು ಹತ್ತು ನಿಮಿಷ ಕಾಯಿರಿ, ನಾನು ಒಳಗೆ ಹೋಗಿ ಬರುತ್ತೇನೆ' ಎಂದು ಹೇಳಿ ಆಸ್ಪತ್ರೆಯೊಳಗೆ ಹೋಗಿದ್ದಾನೆ. ಆದರೆ, ಅರ್ಧ ಗಂಟೆ ಕಳೆದರೂ ಆತ ಮರಳಿ ಬಾರದಿರುವುದನ್ನು ಗಮನಿಸಿದ ಆಟೋ ಚಾಲಕ, ಆತನನ್ನು ಆಸ್ಪತ್ರೆಯ ಸುತ್ತಮುತ್ತ ಹುಡುಕಾಡಿದ್ದಾನೆ. ಪತ್ತೆಯಾದ ಕಳ್ಳ ಈ ಸಂದರ್ಭದಲ್ಲಿ ಆಟೋ ಚಾಲಕನ ಮೊಬೈಲ್‌ನ್ನು ಕೇಳಿದ್ದಾನೆ. 'ನನ್ನ ಮೊಬೈಲ್ ಸ್ವಿಚ್ ಆಫ್ ಆಗಿದೆ, ಕಾಲ್ ಮಾಡಲು ನಿಮ್ಮ ಮೊಬೈಲ್ ಕೊಡಿ' ಎಂದು ಹೇಳಿದ್ದಾನೆ. ಆದರೆ ಕಳ್ಳನ ಅಸಲೀಯತ್ತು ತಿಳಿಯದ ಆಟೋ ಚಾಲಕ ತನ್ನ ಮೊಬೈಲ್‌ನ್ನು ಖದೀಮನಿಗೆ ನೀಡಿದ್ದಾನೆ.
ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಗಳೇ ಆಫ್!
ಪ್ರಯಾಣಿಕ ಮರಳಿ ಬಾರದಿರುವುದನ್ನು ಗಮನಿಸಿದ ಆಟೋ ಚಾಲಕ, ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಆಶ್ಚರ್ಯಕರವಾಗಿ ಕ್ಯಾಮೆರಾಗಳು ಬಂದ್ ಆಗಿರುವುದು ಕಂಡುಬಂದಿದೆ. ಹೀಗಾಗಿ ಕಳ್ಳ ಪ್ರಯಾಣ ಆರಂಭಿಸಿದ್ದ ಸೋಮಾನಿ ವೃತ್ತದ ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಈ ಪರಿಶೀಲನೆಯಲ್ಲಿ ರಿಕ್ಷಾ ಹತ್ತಿದ್ದ ಕಳ್ಳನ ಗುರುತು ಸಿಕ್ಕಿದ್ದು, ಆ ವಿಡಿಯೋವನ್ನು ದಾಂಡೇಲಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ: ಆಟೋ ಡ್ರೈವರ್ ಆಗಿದ್ದ ಬಿಂದು ಜೀರಾ ಡ್ರಿಂಕ್ ಕಂಪನಿ ಒಡೆಯ ಈಗ ರೋಲ್ಸ್ ರಾಯ್ಸ್ ಮಾಲೀಕ
ಪತ್ತೆ ಹಚ್ಚಲು ಮುಂದಾದ ಪೊಲೀಸರು:
ಆಟೋ ಚಾಲಕನ ದೂರನ್ನು ದಾಖಲಿಸಿಕೊಂಡ ದಾಂಡೇಲಿ ಪೊಲೀಸರು, ಕಳ್ಳನ ಪತ್ತೆಗಾಗಿ ತನಿಖೆಯನ್ನು ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯ ಗುರುತನ್ನು ಖಚಿತಪಡಿಸುವ ಪ್ರಯತ್ನ ನಡೆಯುತ್ತಿದೆ. ಆಟೋ ಚಾಲಕನ ಮೊಬೈಲ್ ಮತ್ತು ಆತನಿಗೆ ಆಗಿರುವ ಆರ್ಥಿಕ ನಷ್ಟವನ್ನು ಪರಿಗಣಿಸಿ, ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಒಟ್ಟಿನಲ್ಲಿ ಈ ಘಟನೆಯು ದಾಂಡೇಲಿ ನಗರದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ/ ಆಟೋ ಚಾಲಕರಂತಹ ಕಾರ್ಮಿಕ ವರ್ಗದವರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ಪೊಲೀಸರು ಶೀಘ್ರವಾಗಿ ಕಳ್ಳನನ್ನು ಪತ್ತೆಹಚ್ಚಿ, ಆಟೋ ಚಾಲಕನಿಗೆ ನ್ಯಾಯ ಒದಗಿಸಲಿ.
