ಕರ್ಣಿ ಸೇನಾ ರಾಷ್ಟ್ರೀಯ ಅಧ್ಯಕ್ಷ Sukhdev Singh Gogamedi ಮರ್ಡರ್!
ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೇಡಿ ಮೇಲೆ ಹಾಡಹಗಲೇ ಗುಂಡಿ ದಾಳಿ ನಡೆದಿದ್ದು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಗುಂಡಿನ ದಾಳಿ ನಡೆದ ಬೆನ್ನಲ್ಲಿಯೇ ಅರನ್ನು ಮಾನಸ ಸರೋವರದಲ್ಲಿರುವ ಮೆಟ್ರೋ ಮಾಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಜೈಪುರ (ಡಿ.5): ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಜೈಪುರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮಂಗಳವಾರ ಸ್ಕೂಟಿ ಸವಾರಿ ಮಾಡುತ್ತಿದ್ದ ಕೆಲ ದುಷ್ಕರ್ಮಿಗಳು ಹಾಡಹಗಲೇ ಇವರ ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಸುಖದೇವ್ ಅವರನ್ನು ಮಾನಸ ಸರೋವರದಲ್ಲಿರುವ ಮೆಟ್ರೋ ಮಾಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಕೆಲವು ಮೂಲಗಳ ಪ್ರಕಾರ, ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಜೈಪುರದ ಶ್ಯಾಮ್ ನಗರದಲ್ಲಿರುವ ದಾನಾ ಪಾನಿ ರೆಸ್ಟೋರೆಂಟ್ ಹಿಂದೆ ಗುಂಡು ಹಾರಿಸಿ ಕೊಲ್ಲಲಾಗಿದೆ. ಪ್ರಸ್ತುತ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಮತ್ತು ಪ್ರದೇಶವನ್ನು ಸಿಸಿಟಿವಿ ಮೂಲಕ ತನಿಖೆ ನಡೆಸುತ್ತಿದ್ದಾರೆ. 2018ರಲ್ಲಿ ಬಾಲಿವುಡ್ ಚಿತ್ರ ಪದ್ಮಾವತ್ ಬಿಡುಗಡೆಯ ವೇಳೆ ದೇಶಾದ್ಯಂತ ಇವರ ನೇತೃತ್ವದಲ್ಲಿ ಕರ್ಣಿ ಸೇನಾ ರಣಾಂಗಣ ಎಬ್ಬಿಸಿತ್ತು.
ಪೊಲೀಸರ ಮಾಹಿತಿಯ ಪ್ರಕಾರ, ಈ ದಾಳಿಯಲ್ಲಿ ಇನ್ನೂ ಇಬ್ಬರು ಗಾಯಗೊಂಡಿದ್ದಾರೆ. ಇದಕ್ಕೂ ಮುನ್ನ ಸಾಕಷ್ಟು ಬಾರಿ ಸುಖ್‌ದೇವ್ ಸಿಂಗ್, ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯನಾದ ಸಂಪತ್ ನೆಹ್ರಾನಿಂದ ಜೀವ ಬೆದರಿಕೆ ಕರೆ ಸ್ವೀಕರಿಸಿದ್ದರು. ಈ ಬಗ್ಗೆ ಅವರು ಜೈಪುರ ಪೊಲೀಸರಿಗೂ ಮಾಹಿತಿ ನೀಡಿದ್ದರು.
ಪೊಲೀಸರ ಪ್ರಕಾರ, ಗೊಗಮೆಡಿ ಮಧ್ಯಾಹ್ನ 1.45 ರ ಸುಮಾರಿಗೆ ತನ್ನ ಮನೆಯ ಹೊರಗೆ ನಿಂತಿದ್ದಾಗ ಸ್ಕೂಟರ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಗೊಗಮೆಡಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಘಟನೆಯಲ್ಲಿ ಗೊಗಮೆಡಿ ಜೊತೆಗಿದ್ದ ಅಜಿತ್ ಸಿಂಗ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.