ಮೈಸೂರು ಗ್ಯಾಂಗ್‌ರೇಪ್: ಅತ್ಯಾಚಾರ ಮಾಡಿದ್ದು 6 ಅಲ್ಲ, 7 ಮಂದಿ!
* ರೇಪ್ ಮಾಡಿದ್ದು 6 ಅಲ್ಲ, 7 ಮಂದಿ
* ಇದೇ ಜಾಗದಲ್ಲಿ ಇನ್ನಷ್ಟು ಅತ್ಯಾಚಾರ?
* ಸಾಮೂಹಿಕ ಅತ್ಯಾಚಾರ ನಡೆಸಿದ್ದು ಹೌದು: ಒಪ್ಪಿಕೊಂಡ ಪಂಚ ರಕ್ಕಸರು
* ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ, ಅಜ್ಞಾತ ಸ್ಥಳದಲ್ಲಿ ವಿಚಾರಣೆ
ಮೈಸೂರು(ಆ.30): ಜನಾಕ್ರೋಶಕ್ಕೆ ಕಾರಣವಾಗಿದ್ದ ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತ ಐದು ಮಂದಿ ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಆ.24ರಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಬಳಿಯ ನಿರ್ಜನ ಪ್ರದೇಶದಲ್ಲಿ ತಾವು ನಡೆಸಿದ ರಾಕ್ಷಸಿ ಕೃತ್ಯದ ವಿವರವನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.
ಆರೋಪಿಗಳು ಹಿಂದೆಯೂ ಇದೇ ರೀತಿಯ ಹಲವು ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆ ಪೊಲೀಸರಿಗಿದ್ದು, ಅವರಿಂದ ಇನ್ನಷ್ಟುಮಾಹಿತಿ ಕಲೆಹಾಕುವ ಪ್ರಯತ್ನವನ್ನು ನಡೆಸುತ್ತಿದ್ದಾರೆ.
ತಮಿಳುನಾಡು ರಾಜ್ಯದ ತಿರುಪ್ಪೂರು ಮೂಲದ 17 ವರ್ಷದ ಬಾಲಕ, ಜೋಸೆಫ್ (28), ಪ್ರಕಾಶ್ ಅಲಿಯಾಸ್ ಅರವಿಂದ್ ( 21), ಮುರುಗೇಶನ್ (22) ಮತ್ತು ಭೂಪತಿ (25) ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ತಲೆ ಮರೆಸಿಕೊಂಡಿದ್ದಾನೆ. ಆತನಿಗಾಗಿ ತಮಿಳುನಾಡಿಗೆ ತೆರಳಿರುವ ಪೊಲೀಸರ ತಂಡ ಶೋಧ ಮುಂದುವರೆಸಿದೆ. ಈ ನಡುವೆ ಅತ್ಯಾಚಾರ ಕೃತ್ಯದಲ್ಲಿ 7ನೇ ವ್ಯಕ್ತಿಯೂ ಇರುವ ಬಗ್ಗೆ ಆರೋಪಿಗಳು ಸುಳಿವು ನೀಡಿದ್ದು, ಈ ಕುರಿತು ಪೊಲೀಸರು ಇನ್ನಷ್ಟೇ ಮಾಹಿತಿ ಬಹಿರಂಗಪಡಿಸಬೇಕಿದೆ.
ರೇಪ್ ಮಾಡಿದ್ದು 6 ಅಲ್ಲ, 7 ಮಂದಿ!
ಸಿಕ್ಕಿಬಿದ್ದ 5 ಮಂದಿ ಆರೋಪಿಗಳು ಈಗ ತಪ್ಪೊಪ್ಪಿಕೊಂಡಿದ್ದಾರೆ. 6ನೆಯ ಆರೋಪಿ ಇನ್ನೂ ಸಿಕ್ಕಿಲ್ಲ. ಆದರೆ, ತಪ್ಪೊಪ್ಪಿಗೆಯ ವೇಳೆ ಆರೋಪಿಗಳು ತಮ್ಮ ಜೊತೆ 7ನೇ ವ್ಯಕ್ತಿ ಕೂಡ ಇದ್ದ. ಆತನೂ ಅತ್ಯಾಚಾರ ಮಾಡಿದ್ದಾನೆ ಎಂದು ಬಾಯ್ಬಿಟ್ಟಿದ್ದಾರೆ. ಆತನಿಗೂ ಈಗ ಶೋಧ ಆರಂಭವಾಗಿದೆ.
ಇದೇ ಜಾಗದಲ್ಲಿ ಇನ್ನಷ್ಟು ಅತ್ಯಾಚಾರ?
ಬಂಧಿತರೆಲ್ಲರೂ ಇದೇ ಜಾಗದಲ್ಲಿ ಈ ಹಿಂದೆಯೂ ಹಲವು ಅಪರಾಧ ಕೃತ್ಯಗಳನ್ನು ಎಸಗಿರುವ ಬಗ್ಗೆ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಬಂಡಿಪಾಳ್ಯ ಎಪಿಎಂಸಿಯಲ್ಲಿ ಕೆಲಸ ಮುಗಿದ ಮೇಲೆ ಚಾಮುಂಡಿಬೆಟ್ಟಸುತ್ತಮುತ್ತ ಪಾರ್ಟಿ ಮಾಡುತ್ತಿದ್ದ ಈ ಗ್ಯಾಂಗ್, ಏಕಾಂತಲ್ಲಿರುವ ಜೋಡಿಗಳನ್ನು ಹುಡುಕಿ, ಅವರ ಮೇಲೆ ಹಲ್ಲೆ ನಡೆಸಿ ಹಣ, ಚಿನ್ನ, ಮೊಬೈಲ್ ಕಸಿಯುತ್ತಿದ್ದರು. ಈ ವೇಳೆ ಒಬ್ಬಾತ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದ. ಆದರೆ, ಸಂತ್ರಸ್ತರು ಮರ್ಯಾದೆಗೆ ಅಂಜಿ ದೂರು ನೀಡಿರಲಿಲ್ಲ ಎಂದು ತಿಳಿದುಬಂದಿದೆ.