ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹಾಡಹಗಲೇ ಸುಲಿಗೆಗೆ ಯತ್ನ| ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದ ಘಟನೆ| ಸಾರ್ವಜನಿಕರು ಸಹಾಯಕ್ಕೆ ಬರುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದ ದುಷ್ಕರ್ಮಿಗಳು| ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಬೆಂಗಳೂರು(ಅ.03): ಹಾಡಹಗಲೇ ದುಷ್ಕರ್ಮಿಗಳು ವ್ಯಕ್ತಿಯ ಮೇಲೆ ಮಾರಾಸ್ತ್ರಗಳಿಂದ ಹಲ್ಲೆ ನಡೆಸಿದ ಸುಲಿಗೆ ಯತ್ನಿಸಿದ ಘಟನೆ ನಗರದ ಉತ್ತರಹಳ್ಳಿಯಲ್ಲಿ ನಡೆದಿದೆ. ಸೆಪ್ಟೆಂಬರ್ 30 ರಂದು ಘಟನೆ ನಡೆದಿದ್ದು ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ಹಾಡಹಗಲೇ ಇಬ್ಬರು ದುಷ್ಕರ್ಮಿಗಳು ವ್ಯಕ್ತಿಯ ಮೇಲೆ ಡ್ರ್ಯಾಗರ್‌ನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಹಣ ಹಣಕಿತ್ತುಕೊಳ್ಳುವ ಯತ್ನ ನಡಸಿದ್ದಾರೆ.
ವರದರಾಜು ಎಂಬುವರೇ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ವರದರಾಜು ಬಾಲಾಜಿ ಸೌಹಾರ್ದ ಸೊಸೈಟಿಯ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ವರದರಾಜು ಹಣವನ್ನು ಕಲೆಕ್ಟ್ ಮಾಡಿ ಉತ್ತರಹಳ್ಳಿ ಮೈನ್ ರೋಡ್‌ಗೆ ಬಂದಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು.
ಬೆಳಗಾವಿಯಲ್ಲಿ ಭೀಕರ ಅಪಘಾತ: 6 ಕೂಲಿ ಕಾರ್ಮಿಕರ ದುರ್ಮರಣ, ಹಲವರಿಗೆ ಗಾಯ
ಪಲ್ಸರ್ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬಂದಿದ್ದ ಇಬ್ಬರು ಸುಲಿಗೆಕೋರರು, ಡ್ರ್ಯಾಗರ್‌ನಿಂದ ಹಲ್ಲೆ ಮಾಡಿ ವರದರಾಜ್ ಬಳಿ ಇದ್ದ ಹಣದ ಬ್ಯಾಗ್ ಕಿತ್ತು ಕೊಳ್ಳುವ ಪ್ರಯತ್ನ ನಡೆಸಿದ್ದರು. ವರದರಾಜ್ ಹಣದ ಬ್ಯಾಗ್ ನೀಡದಿದ್ದಾಗ ರಸ್ತೆಯಲ್ಲಿ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿದ್ದರು. ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದರು.
ನಂತರ ವರದರಾಜ್ ಅವರು ಆರೋಪಿಗಳಿಂದ ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸಿದ್ದರು. ಈ ವೇಳೆ ಸಾರ್ವಜನಿಕರು ಸಹಾಯಕ್ಕೆ ಬರುತ್ತಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು. ಆರೋಪಿಗಳ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
