ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಉರುಳಿ ತಾಯಿ,ಮಗ ಸಾವು!
ಮಂಗಳವಾರ ಬೆಳಗ್ಗೆ ನಾಗವಾರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಉರುಳಿ, ತಾಯಿ ಹಾಗೂ ಮಗ ಸಾವಿಗೀಡಾದ ದಾರುಣ ಘಟನೆ ನಡೆದಿದೆ. ಪಿಲ್ಲರ್ ಬಿದ್ದು ಗಾಯಗೊಂಡಿದ್ದ ಒಂದೇ ಕುಟುಂಬದ ಮೂವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಬೆಂಗಳೂರು (ಜ.10): ನಗರದ ನಾಗವಾರ ಪ್ರದೇಶದಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಉರುಳಿ, ತಾಯಿ ಹಾಗೂ ಮಗ ಸಾವಿಗೀಡಾದ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ. ಆರಂಭದಲ್ಲಿ ಯಾವುದೇ ಪ್ರಾಣಾಪಾಯವಿಲ್ಲ ಎಂದು ಹೇಳಲಾಗಿತ್ತಾದರೂ, ಪಿಲ್ಲರ್ ಬೈಕ್‌ನ ಮೇಲೆ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಗಾಯಗೊಂಡಿದ್ದರು. ಇದರಲ್ಲಿ ತಾಯಿ ಹಾಗೂ ಮಗ ಸಾವು ಕಂಡಿದ್ದರೆ, ತಂದೆ ಹಾಗೂ ಇನ್ನೊಂದು ಮಗು ಪಾರಾಗಿದೆ. 35 ವರ್ಷದ ತಾಯಿ ತೇಜಸ್ವಿನಿ ಹಾಗೂ ಎರಡೂವರೆ ವರ್ಷದ ಮಗ ವಿಹಾನ್ ಮೃತಪಟ್ಟ ವ್ಯಕ್ತಿಗಳು. ಕೆಆರ್ ಪುರಂನಿಂದ ಹೆಬ್ಬಾಳಕ್ಕೆ ಬೈಕ್‌ನಲ್ಲಿ ದಂಪತಿಗಳು ತೆರಳುತ್ತಿದ್ದ ವೇಳೆ ಬೈಕ್‌ನ ಮೇಲೆ ಪಿಲ್ಲರ್ ರಾಡ್‌ಗಳು ಕುಸಿದಿವೆ. ಬೆಂಗಳೂರಿನ ನಾಗವಾರ ಬಳಿ ಮೆಟ್ರೋ ಪಿಲ್ಲರ್‌ಗಾಗಿ ಕಬ್ಬಿಣದ ರಾಡ್‌ಗಳನ್ನು ನಿಲ್ಲಿಸಲಾಗಿತ್ತು. ಸಿಲ್ಕ್ ಬೋರ್ಡ್‌ನಿಂದ ಏರ್ಪೋರ್ಟ್ ವರೆಗಿನ ನಿರ್ಮಾಣ ಹಂತದ ಮೆಟ್ರೋ ಮಾರ್ಗದಲ್ಲಿ ಈ ಅವಗಢ ಸಂಭವಿಸಿದೆ.
ಕಬ್ಬಿಣದ ಪಿಲ್ಲರ್ ಓವರ್ ಲೋಡ್ ಆಗಿದ್ದ ಕಾರಣ ಕುಸಿದಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಮೆಟ್ರೋ ಅಧಿಕಾರಿಗಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಲ್ಯಾಣ್‌ನಗರದಿಂದ ಎಚ್‌ಆರ್‌ಬಿಆರ್ ಲೇಔಟ್‌ಗೆ ಹೋಗುವ ರಸ್ತೆಯಲ್ಲಿ ನಿರ್ಮಾಣವಾಗುತ್ತಿದ್ದ ಮೆಟ್ರೊ ರೈಲು ಪಿಲ್ಲರ್ ಕುಸಿದು ಬಿದ್ದಿದೆ. ಘಟನೆಯಲ್ಲಿ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಲೋಹಿತ್ ಕುಮಾರ್, ಆತನ ಪತ್ನಿ ತೇಜಸ್ವಿನಿ ಹಾಗೂ ಅವರ ಪುತ್ರ ವಿಹಾನ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು.ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ. ಇನ್ನೊಬ್ಬ ಮಗ ವಿಸ್ಮಿತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬೆಂಗಳೂರು: ಕೆ.ಆರ್.ಪುರ-ವೈಟ್‌ಫೀಲ್ಡ್ ಮೆಟ್ರೋ ಶೀಘ್ರ ಆರಂಭ?
ದಂಪತಿಗಳು ತಮ್ಮ ಇಬ್ಬರು ಮಕ್ಕಳೊಂದಿಗೆ ಹೆಬ್ಬಾಳ ಕಡೆಗೆ ಹೋಗುತ್ತಿದ್ದರು. ಮೆಟ್ರೋ ಪಿಲ್ಲರ್ ಓವರ್ ಲೋಡ್ ಆಗಿ ಬೈಕ್ ಮೇಲೆ ಕುಸಿದು ಬಿದ್ದಿದೆ. ತಾಯಿ ಮತ್ತು ಮಗ ಪಿಲಿಯನ್ ರೈಡರ್ಸ್ ಆಗಿದ್ದರು. ಅವರಿಗೆ ಗಂಭೀರ ಗಾಯಗಳಾಗಿದ್ದು, ಆಲ್ಟಿಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅವರನ್ನು ತೇಜಸ್ವಿನಿ ಮತ್ತು ಆಕೆಯ ಎರಡೂವರೆ ವರ್ಷದ ಮಗ ವಿಹಾನ್ ಎಂದು ಗುರುತಿಸಲಾಗಿದೆ ಎಂದು ಪೂರ್ವ ಡಿಸಿಪಿ ಭೀಮಾಶಂಕರ್ ಎಸ್ ಗುಳೇದ್ ತಿಳಿಸಿದ್ದಾರೆ.
Namma Metro: ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ 1.70 ಕೋಟಿ ಆದಾಯ: ಹಿಂದಿನ ದಾಖಲೆ ಉಡೀಸ್
ಪತಿ ಹಾಗೂ ಇನ್ನೊಬ್ಬ ಮಗ ಪಾರು: ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪತಿ ಲೋಹಿತ್ ಕುಮಾರ್ ಹಾಗೂ ನಾಲ್ಕು ವರ್ಷದ ಇನ್ನೊಬ್ಬ ಮಗ ವಿಸ್ಮಿತ್ ಚಿಕಿತ್ಸೆಗೆ ಸ್ಪಂದಿಸಿದ್ದಾರೆ. ಪತ್ನಿಯನ್ನು ಮಾನ್ಯತಾ ಟೆಕ್ ಪಾರ್ಕ್‌ಗೆ ಬಿಟ್ಟು, ಮಗನನ್ನು ಬೇಬಿ ಸಿಟಿಂಗ್‌ಗೆ ಕಳುಹಿಸುವ ವೇಳೆ ಈ ಘಟನೆ ನಡೆದಿದೆ. ಲೋಹಿತ್ ಕುಮಾರ್ ಸಿವಿಲ್ ಇಂಜಿನಿಯರ್ ಆಗಿದ್ದರೆ, ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ತೇಜಸ್ವಿನಿ ಕೆಲಸ ಮಾಡುತ್ತಿದ್ದರು. ಇಬ್ಬರೂ ನಾಗವಾರದ ನಿವಾಸಿಗಳು ಎಂದು ಹೇಳಲಾಗಿದೆ. ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಮೆಟ್ರೋ ಪಿಲ್ಲರ್ ಇವರ ಮೇಲೆ ಬಿದ್ದಿದೆ. ಈ ವೇಳೆ ತಾಯಿ ತೇಜಸ್ವಿನಿ ಆಗೂ ವಿಹಾನ್‌ಗೆ ತೀವ್ರ ಗಾಯಗಳಾಗಿತ್ತು. ತಾಯಿ ಹಾಗೂ ಮಗುವಿನ ದೇಹವನ್ನು ಬೌರಿಂಗ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲು ಸಿದ್ಧತೆ ಮಾಡಲಾಗುತ್ತಿದೆ.
(ಸುದ್ದಿ ಅಪ್ ಡೇಟ್ ಆಗುತ್ತಿದೆ.)