ಆಂಧ್ರದಿಂದ ಬೆಂಗಳೂರಿಗೆ ಅಕ್ರಮ ಗೋಮಾಂಸ ಸಾಗಣೆ, ಕಾರಿಗೆ ಬೆಂಕಿ, ಶ್ರೀರಾಮ ಸೇನೆ ಕಾರ್ಯಕರ್ತರು ಅರೆಸ್ಟ್
ಆಂಧ್ರದಿಂದ ಬೆಂಗಳೂರಿನ ಶಿವಾಜಿನಗರಕ್ಕೆ 15 ಟನ್ ಗೋಮಾಂಸವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವಾಹನಗಳನ್ನು ತಡೆದ ಶ್ರೀರಾಮ ಸೇನೆ ಕಾರ್ಯಕರ್ತರು. ಗೋಮಾಂಸ ಸಾಗಣೆ ಮಾಡುತ್ತಿದ್ದ ಏಳು ಮಂದಿ ಬಂಧನ, ಶ್ರೀರಾಮ ಸೇನೆಯ 14 ಮಂದಿ ವಶಕ್ಕೆ.
ದೊಡ್ಡಬಳ್ಳಾಪುರ (ಸೆ.25): ಅಕ್ರಮ ಗೋಮಾಂಸವನ್ನು ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಶ್ರೀರಾಮ ಸೇನೆ ಕಾರ್ಯಕರ್ತರು ದೊಡ್ಡಬಳ್ಳಾಪುರ ಪ್ರವಾಸಿ ಮಂದಿರ ವೃತ್ತದಲ್ಲಿ ಗೋಮಾಂಸ ತುಂಬಿದ್ದ 5 ವಾಹನಗಳನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಗೋಮಾಂಸ ಸಾಗಣೆ ಮಾಡುತ್ತಿದ್ದ ವ್ಯಕ್ತಿಗಳಿಗೆ ಸಂಬಂಧಿಸಿದ ಕಾರೊಂದಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಭಾನುವಾರ ಬೆಳಗ್ಗೆ 5.30ರಲ್ಲಿ ನಡೆದಿದೆ.
ಆಂಧ್ರಪ್ರದೇಶದ ಹಿಂದೂಪುರದಿಂದ ಬೆಂಗಳೂರಿನ ಶಿವಾಜಿನಗರಕ್ಕೆ ಅಕ್ರಮವಾಗಿ ಪ್ರತಿನಿತ್ಯ ಗೋಮಾಂಸ ಸಾಗಣೆ ನಡೆಯುತ್ತಿದೆ ಎಂಬ ಸಂಶಯ ಆಧರಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಕಾರ್ಯಾಚರಣೆಗಿಳಿದಿದ್ದರು ಎನ್ನಲಾಗಿದೆ. ಭಾನುವಾರ ನಸುಕಿನ ಜಾವ ಸುಮಾರು 3.45ರ ವೇಳೆಗೆ ಹಿಂದೂಪುರದಿಂದ ಗೋಮಾಂಸ ತುಂಬಿಕೊಂಡ ವಾಹನಗಳು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದವು.
ದೊಡ್ಡಬಳ್ಳಾಪುರ ತಾಲೂಕಿನ ಗುಂಜೂರು ಟೋಲ್ ಬಳಿ ಅಕ್ರಮ ಗೋಮಾಂಸ ಸಾಗಣೆ ಬಗ್ಗೆ ಪ್ರಶ್ನಿಸಿದ ಕಾರ್ಯಕರ್ತರ ವಿರುದ್ದ ಸಾಗಣೆದಾರರು ಹಲ್ಲೆಗೆ ಮುಂದಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ. ಬಳಿಕ ದೊಡ್ಡಬಳ್ಳಾಪುರ ಪ್ರವಾಸಿ ಮಂದಿರ ಬಳಿ ಶ್ರೀರಾಮ ಸೇನೆ ಕಾರ್ಯಕರ್ತರು ವಾಹನಗಳನ್ನು ತಡೆದಿದ್ದಾರೆ. ಈ ವೇಳೆ ವಾಹನಗಳ ರಕ್ಷಣೆಗೆ ಬಂದು, ತಡೆಯಲು ಮುಂದಾದ ಕಾರ್ಯಕರ್ತರ ಮೇಲೆ ವಾಹನ ಹರಿಸುವ ಪ್ರಯತ್ನ ನಡೆದಾಗ ಪ್ರಕರಣ ತೀವ್ರಗೊಳ್ಳಲು ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಶ್ರೀರಾಮ ಸೇನೆಯ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಸುಂದರೇಶ್ ಮಾತನಾಡಿ, ಹಿಂದೂಪುರದಿಂದ ಗೋಮಾಂಸ ಸಾಗಣೆ ಮಾಹಿತಿ ಪಡೆದು ಗುಂಜೂರು ಟೋಲ್ ಬಳಿ ಪ್ರಶ್ನಿಸಲು ಮುಂದಾದ ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಯತ್ನ ನಡೆದಿದೆ. ಕೂಡಲೇ ದೊಡ್ಡಬಳ್ಳಾಪುರ ಶಾಖೆಯ ಕಾರ್ಯಕರ್ತರಿಗೆ ಕರೆ ಮಾಡಿ ವಿಚಾರ ತಿಳಿಸಿ, ದೊಡ್ಡಬಳ್ಳಾಪುರದಲ್ಲಿ ವಾಹನಗಳನ್ನು ತಡೆದಾಗ 30 ಟನ್ ಗಳಷ್ಟು ಗೋಮಾಂಸ ಇರುವುದು ಕಂಡು ಬಂದಿದೆ. ದಿನನಿತ್ಯ ಈ ಮಾರ್ಗದಲ್ಲಿ ಹಿಂದುಪುರದಿಂದ ಬೆಂಗಳೂರು, ದೊಡ್ಡಬಳ್ಳಾಪುರ, ನೆಲಮಂಗಲ, ಶಿವಾಜಿನಗರ ಕಡೆಗೆ ಗೋಮಾಂಸ ಸರಬರಾಜಾಗುತ್ತಿದೆ. ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅಕ್ರಮ ತಡೆಯಲು ಜನಪ್ರತಿನಿಧಿಗಳೂ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
6 ತಿಂಗಳಲ್ಲಿ 3ನೇ ಪ್ರಕರಣ: ತಾಲೂಕಿನಲ್ಲಿ ಕಳೆದ ಆರು ತಿಂಗಳಲ್ಲಿ ಇದು ಮೂರನೇ ಅಕ್ರಮ ಗೋಮಾಸ ಸಾಗಾಣಿಕೆಯ ಪ್ರಕರಣವಾಗಿದ್ದು, ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರ ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿರುವ ಪ್ರಕರಣಗಳು ಪದೇ ಪದೇ ಬೆಳಕಿಗೆ ಬರುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆ ನಿರ್ಲಕ್ಷ್ಯ ಹಾಗೂ ಸಂಭವನೀಯ ಅನಾಹುತಗಳ ತಡೆಗೆ ಜಾಗೃತಿಯ ಕೊರತೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಅಕ್ರಮ ತಡೆಗೆ ಪೊಲೀಸರು ವಿಫಲ: ಪ್ರತಿಕ್ರಿಯೆ ನೀಡಿರುವ ಶ್ರೀರಾಮ ಸೇನೆ ಪ್ರಮುಖರು, ಗೌರಿಬಿದನೂರು ತಾಲೂಕಿನ ಟೋಲ್ ಬಳಿ ಗೋ ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಪ್ರಶ್ನಿಸಲು ಮುಂದಾದ ಕಾರ್ಯಕರ್ತನ ಮೇಲೆ, ಗೋ ಮಾಂಸ ಸಾಗಿಸುತ್ತಿದ್ದ ಗೂಂಡಾಗಳು ಹಲ್ಲೆಗೆ ಮುಂದಾಗಿದ್ದಾರೆ. ಇಷ್ಟು ದೊಡ್ಡಪ್ರಮಾಣದಲ್ಲಿ ಅಕ್ರಮವಾಗಿ ಗೋ ಮಾಂಸ ಸರಬರಾಜು ಮಾಡುತ್ತಿದ್ದರು, ಸ್ಥಳೀಯ ಶಾಸಕರಾಗಲಿ, ಅಧಿಕಾರಿಗಳಾಗಲಿ ಯಾವುದೇ ಕ್ರಮಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು. ಅಲ್ಲದೆ ಕಾರಿಗೆ ಬೆಂಕಿ ಇಟ್ಟವರು ನಮ್ಮ ಕಾರ್ಯಕರ್ತರಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಲಘು ಲಾಠಿ ಪ್ರಹಾರ: ಘಟನೆ ವೇಳೆ ಹೆಚ್ಚಿನ ಜನಸಂದಣಿ ಸೇರಿದ ಪರಿಣಾಮ ಪರಿಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ಡಿವೈಎಸ್ಪಿ ರವಿ, ಆರಕ್ಷಕ ನಿರೀಕ್ಷಕ ಅಮರೇಶ್ ಗೌಡ, ಎಂ.ಆರ್.ಹರೀಶ್ ಭೇಟಿ ನೀಡಿ, ಪರಿಶೀಲನೆ ನಡೆಸಿ ವಾಹನಗಳನ್ನು ವಶಕ್ಕೆ ಪಡೆದರು.
ಸಾಗಣೆದಾರರ ಮೇಲೆ ಹಲ್ಲೆ: ಜೈ ಶ್ರೀರಾಮ್ ಘೋಷಣೆ
ಅಕ್ರಮ ಗೋಮಾಂಸ ಸಾಗಣೆದಾರರ ಮೇಲೆ ಹಲ್ಲೆ ನಡೆಸಿ, ಅವರ ತಲೆಯ ಮೇಲೆ ಕಡಿದ ಗೋವಿನ ತಲೆಯನ್ನು ಇರಿಸಿ ಜೈ ಶ್ರೀರಾಮ್ ಘೋಷಣೆಯನ್ನು ಹೇಳಿಸಿರುವ ವೀಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಪ್ರತಿ ವಾಹನದಲ್ಲೂ ಟನ್‌ಗಟ್ಟಲೆ ಗೋಮಾಂಸ ಪತ್ತೆಯಾಗಿದ್ದು, ನಿತ್ಯ ನಡೆಯುತ್ತಿದ್ದ ಲಕ್ಷಾಂತರ ರುಪಾಯಿ ಅಕ್ರಮ ವಹಿವಾಟು ಬಯಲಾದಂತಾಗಿದೆ.
21 ಮಂದಿ ಪೊಲೀಸ್ ವಶಕ್ಕೆ: ಘಟನೆ ಕುರಿತಂತೆ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಭಾನುವಾರ ಬೆಳಗಿನ ಜಾವ 5.30ರ ಸುಮಾರಿಗೆ ಹಿಂದೂಪುರದಿಂದ ಬೆಂಗಳೂರಿಗೆ 05 ಬೊಲೆರೋ ಪಿಕಪ್ ವಾಹನಗಳಲ್ಲಿ ಗೋಮಾಂಸ ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ಶ್ರೀರಾಮ ಸೇನೆ ಕಾರ್ಯಕರ್ತರು ವಾಹನಗಳನ್ನು ತಡೆದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಸ್ಥಳೀಯ ಪೊಲೀಸರು ಗೋಮಾಂಸ ಸಾಗಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಗೋಮಾಂಸ ಸಾಗಣೆ ಮಾಡುತ್ತಿದ್ದ 7 ಮಂದಿಯನ್ನು ಬಂಧಿಸಲಾಗಿದೆ. ವಾಹನಗಳನ್ನು ತಡೆದ 14 ಮಂದಿ ಶ್ರೀರಾಮ ಸೇನೆ ಕಾರ್ಯಕರ್ತರನ್ನು ಸಹ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಆಗಿದ್ದೇನು?
- ಆಂಧ್ರದಿಂದ ಬೆಂಗಳೂರಿಗೆ ನಿತ್ಯ ಗೋಮಾಂಸ ಸಾಗಣೆ ಬಗ್ಗೆ ಶ್ರೀರಾಮಸೇನೆಗೆ ಖಚಿತ ಮಾಹಿತಿ
- ಭಾನುವಾರ ನಸುಕಿನ ಜಾವ 3.45ರ ವೇಳೆಗೆ ಐದು ಬೊಲೆರೋ ವಾಹನ ತಡೆದ ಕಾರ್ಯಕರ್ತರು
- ಗೋಮಾಂಸ ಸಾಗಿಸುತ್ತಿದ್ದ ಐವರು ವಶಕ್ಕೆ. ಕಾರ್ಯಕರ್ತರ ಮೇಲೆ ಸಾಗಣೆದಾರರಿಂದ ಹಲ್ಲೆ ಯತ್ನ
- ಬಳಿಕ ಬೆಂಗಳೂರಿನತ್ತ ಸಾಗುತ್ತಿದ್ದ ವಾಹನಗಳಿಗೆ ಪ್ರವಾಸಿ ಮಂದಿರ ಬಳಿ ಮತ್ತೆ ಶ್ರೀರಾಮಸೇನೆ ತಡೆ
- ವಾಹನ ಹತ್ತಿಸಲು ಗೋ ಮಾಂಸ ಸಾಗಣೆದಾರರ ಯತ್ನ. ರೊಚ್ಚಿಗೆದ್ದ ಕಾರ್ಯಕರ್ತರಿಂದ ಕಾರಿಗೆ ಬೆಂಕಿ
- ಪೊಲೀಸರಿಂದ ಲಾಠಿ ಪ್ರಹಾರ, ಗೋ ಮಾಂಸ ಸಾಗಣೆದಾರರ ಬಂಧನ. ಗೋಮಾಂಸ ಜಪ್ತಿ