ಸೌಜನ್ಯಾ ಹೆಲ್ಪ್‌ಲೈನ್ ಹೆಸರಿನಲ್ಲಿ ಸಂಧ್ಯಾ ಪವಿತ್ರ ನಾಗರಾಜ್ ಎಂಬಾಕೆ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಬೆಳ್ತಂಗಡಿಯ ರಾಜೇಶ್ ಎಂಬುವವರಿಂದ 3.2 ಲಕ್ಷ ರೂಪಾಯಿ ಪಡೆದು ವಂಚಿಸಿದ ಆರೋಪದ ಮೇಲೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೌಜನ್ಯಾ ಹೆಸರಲ್ಲಿ ಹೆಲ್ಪ್‌ಲೈನ್ ತೆರೆದು ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದಲ್ಲಿ ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ (Sandhya Pavithra Nagaraj) ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ನ ಮಾಲಾಡಿ ನಿವಾಸಿ ಕೆ.ರಾಜೇಶ್ ಎಂಬುವವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ವೃತ್ತಿಯಲ್ಲಿ ಗಾಯಕರಾಗಿರುವ ರಾಜೇಶ್ ಕೆ.ರಾಜೇಶ್, 'Arvind vivek' ಎಂಬ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಲೈವ್ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. 2024ರಲ್ಲಿ ಫೇಸ್‌ಬುಕ್ ಮೂಲಕ ಸಂಧ್ಯಾ ಪವಿತ್ರ ನಾಗರಾಜ್ ಅವರೊಂದಿಗೆ ಪರಿಚಯವಾಯಿತು. ಸಂಧ್ಯಾ, ತಾವು ಹೋರಾಟಗಾರ್ತಿಯಾಗಿದ್ದು, Help Line ಹೆಸರಿನಲ್ಲಿ ನೊಂದವರಿಗೆ ಮತ್ತು ವಂಚನೆಗೊಳಗಾದವರಿಗೆ ಸಹಾಯ ಮಾಡುವುದಾಗಿ ರಾಜೇಶ್‌ಗೆ ನಂಬಿಸಿದ್ದರು. ಅಲ್ಲದೇ ರಾಜ್ಯದಲ್ಲಿ ಅಮಾಯಕರ ಮೇಲೆ ದಾಖಲಾದ ಹಲವು ಪ್ರಕರಣಗಳನ್ನು ಬಗೆಹರಿಸಿರುವುದಾಗಿಯೂ ಆಕೆ ಹೇಳಿಕೊಂಡಿದ್ದರು.
ರಾಜೇಶ್, ಬಂಟ್ವಾಳ ನಗರ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಸಂಧ್ಯಾಗೆ ತಿಳಿಸಿದಾಗ, ಆಕೆ ಆ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ 2025ರ ಜನವರಿಯಲ್ಲಿ ರಾಜೇಶ್‌ರನ್ನು ಬೆಂಗಳೂರಿನ ಜೆ.ಪಿ. ನಗರದ ತನ್ನ ಮನೆಗೆ ಕರೆಸಿದ್ದ ಸಂಧ್ಯಾ, ಪ್ರಕರಣ ಬಗೆಹರಿಸಲು ಖರ್ಚಾಗುತ್ತದೆ ಎಂದು ಹೇಳಿ, ಹಂತಹಂತವಾಗಿ ರಾಜೇಶ್‌ರಿಂದ 3.2 ಲಕ್ಷ ರೂ. ಪಡೆದಿದ್ದರು ಎಂದು ಆರೋಪಿಸಲಾಗಿದೆ.
ಆದರೆ, ಹಣ ನೀಡಿದರೂ ಪ್ರಕರಣ ಬಗೆಹರಿಯದ ಕಾರಣ, ರಾಜೇಶ್ ಈ ಬಗ್ಗೆ ಪ್ರಶ್ನಿಸಿದಾಗ, ಸಂಧ್ಯಾ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಂಶಯಗೊಂಡ ರಾಜೇಶ್, ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳನ್ನು ಕೇಳಿದಾಗ, ಸಂಧ್ಯಾ ತನಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿತು. ಯಾವಾಗ ವಂಚನೆ ಬಗ್ಗೆ ರಾಜೇಶ್‌ಗೆ ಗೊತ್ತಾಯಿತು. ಆಗ ರಾಗ ಬದಲಿಸಿದ ಸಂಧ್ಯಾ ಪವಿತ್ರಾ ನಾಗರಾಜ್ ರಾಜೇಶ್‌ರನ್ನು ಬೆದರಿಸಲು ಮುಂದಾಗಿದ್ದಾರೆ. ಹಣ ವಾಪಸ್ ಕೇಳಿದ್ದಕ್ಕೆ ಮನೆಗೆ ಹೆಂಗಸರನ್ನು ಕರೆದುಕೊಂಡು ಬಂದು ಜಗಳ ಮಾಡುವುದಾಗಿ ಮತ್ತು ಕೈ-ಕಾಲು ಮುರಿಯುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ಎಲ್ಲಾ ಘಟನೆಗಳಿಂದ ಬೇಸತ್ತ ರಾಜೇಶ್, ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ BNS ಕಾಯ್ದೆಯ ಸೆಕ್ಷನ್ 318(4) ಮತ್ತು 351(2) ಅಡಿಯಲ್ಲಿ ಸಂಧ್ಯಾ ಪವಿತ್ರ ನಾಗರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಹಿಂದೆಯೂ ರಾಜ್ಯದ ಹಲವು ಜಿಲ್ಲೆಗಳ ಯುವಕರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಸಂದ್ಯಾ ಪವಿತ್ರಾ ನಾಗರಾಜ, ಅಲ್ಲದೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ, ಸಿದ್ದರಾಮಯ್ಯರೊಂದಿ ಫೋಟೊ ತೆಗೆಸಿಕೊಂಡು ಕಾಂಗ್ರೆಸ್ ನಾಯಕರ ಹೆಸರೇಳಿಕೊಂಡು ಲಕ್ಷ ಲಕ್ಷ ವಂಚಿಸಿದ್ದ ಪ್ರಕರಣಗಳು ದಾಖಲಾಗಿದ್ದವು. ಆದರೆ ಪೊಲೀಸರು ಕೇಸ್ ದಾಖಲಿಸಿದರಾದರೂ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗದ ಕಾರಣ ಇದೀಗ ಮತ್ತೆ ವಂಚನೆ ಪ್ರಕರಣ ಬಯಲಿಗೆ ಬಂದಿದೆ. ಪೊಲೀಸರು ಸೂಕ್ತ ಕ್ರಮ ಜರುಗಿಸದೇ ಇದ್ದ ಇನ್ನಷ್ಟು ಅಮಾಯಕ ಜನರು ವಂಚನೆಗೆ ಬಲಿಯಾಗುತ್ತಲೇ ಇರುತ್ತಾರೆ.
