ಬೆಂಗಳೂರು(ಜೂ.01): ಪತ್ನಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎಂಬ ಕಾರಣಕ್ಕೆ ಚಾಲಕನೋರ್ವ ಸ್ನೇಹಿತನನ್ನು ಹತ್ಯೆ ಮಾಡಿರುವ ಘಟನೆ ಡಿ.ಜೆ.ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಪಿಎನ್‌ಟಿ ಕಾಲನಿ ನಿವಾಸಿ ಸುಭಾನ್‌ (30) ಕೊಲೆಯಾದ ವ್ಯಕ್ತಿ. ಪ್ರಮುಖ ಆರೋಪಿ ತಬ್ರೇಜ್‌ ಹಾಗೂ ಆತನ ಜತೆಗಿದ್ದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿವಾಹಿತ ಮಹಿಳೆ ಜೊತೆ ಲವ್: ಬಾವಿಯಲ್ಲಿ 9 ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್!

ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಸುಭಾನ್‌ಗೆ ಪಿಎನ್‌ಟಿ ಕಾಲನಿ ನಿವಾಸಿ ತಬ್ರೇಜ್‌ ಜತೆ ಸ್ನೇಹ ಬೆಳೆದಿತ್ತು. ಆಗಾಗ್ಗೆ ಸುಭಾನ್‌, ತಬ್ರೇಜ್‌ ಮನೆಗೆ ಹೋಗಿ ಬರುತ್ತಿದ್ದ. ಈ ವೇಳೆ ತಬ್ರೇಜ್‌ ಪತ್ನಿಯ ಪರಿಚಯವಾಗಿದ್ದು, ಇಬ್ಬರ ನಡುವಿನ ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ತಬ್ರೇಜ್‌ ಮನೆಯಲ್ಲಿ ಇಲ್ಲದ ವೇಳೆ ಆತನ ಪತ್ನಿಯನ್ನು ಸುಭಾನ್‌ ಭೇಟಿಯಾಗುತ್ತಿದ್ದ. ಈ ವಿಚಾರ ಸ್ಥಳೀಯರ ಮೂಲಕ ತಬ್ರೇಜ್‌ಗೆ ಕಿವಿಗೆ ಬಿದ್ದಿತ್ತು. ಪತ್ನಿ ಹಾಗೂ ಸುಭಾನ್‌ಗೆ ತಬ್ರೇಜ್‌ ಎಚ್ಚರಿಕೆ ನೀಡಿದ್ದ. ಪತಿಗೆ ವಿಷಯ ತಿಳಿಯುತ್ತಿದ್ದಂತೆ, ಎಂಟು ತಿಂಗಳ ಹಿಂದೆ ತಬ್ರೇಜ್‌ನ ಪತ್ನಿ, ಸುಭಾನ್‌ ಜತೆ ಮನೆ ಬಿಟ್ಟು ಹೋಗಿದ್ದಳು. ಕೆಲ ದಿನಗಳ ಹಿಂದೆಯಷ್ಟೇ ತಬ್ರೇಜ್‌ನ ಪತ್ನಿ ಮನೆಗೆ ವಾಪಸ್‌ ಬಂದಿದ್ದಳು.

ವಿವಾಹವಾಗಲು ನಿರಾಕರಿಸಿದ ಪ್ರೇಯಸಿಯ ದೋಸೆ ತವಾದಲ್ಲಿ ಹೊಡೆದು ​ಹತ್ಯೆ ಮಾಡಿದ!

ಇದೇ ವಿಚಾರವಾಗಿ ಸುಭಾನ್‌ ಹಾಗೂ ತಬ್ರೇಜ್‌ ನಡುವೆ ಗಲಾಟೆ ನಡೆದಿತ್ತು. ಇದಾದ ಬಳಿಕ ಪುನಃ ಸುಭಾನ್‌ ಜತೆ ಪತ್ನಿ ಮನೆ ಬಿಟ್ಟು ಹೋಗಲು ಮುಂದಾಗಿದ್ದ ವಿಚಾರ, ತಬ್ರೇಜ್‌ಗೆ ಗೊತ್ತಾಗಿತ್ತು. ಇದರಿಂದ ಕೋಪಗೊಂಡ ತಬ್ರೇಜ್‌, ಮತ್ತೊಬ್ಬನ ಜತೆಗೂಡಿ ಶನಿವಾರ ರಾತ್ರಿ ಸುಭಾನ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದ. ಬಳಿಕ ಶವವನ್ನು ಡಿ.ಜೆ.ಹಳ್ಳಿಯ ಶ್ಯಾಂಪುರ ಗೇಟ್‌ ಸಮೀಪ ಚರಂಡಿಯಲ್ಲಿ ತಂದು ಎಸೆದು ಆರೋಪಿಗಳು ಪರಾರಿ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.