ರಾಯಚೂರು ನಗರದ ಜಾಕಿರ್ ಹುಸೇನ್ ಸರ್ಕಲ್ ಬಳಿ ಇಂದು (ಮೇ 18, 2025) ಬೆಳಗಿನ ಜಾವ 4:30ರ ಸುಮಾರಿಗೆ ಇಡ್ಲಿ ಬಂಡಿ ಇಡುವ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ರಾಯಚೂರು (ಮೇ.18): ರಾಯಚೂರು ನಗರದ ಜಾಕಿರ್ ಹುಸೇನ್ ಸರ್ಕಲ್ ಬಳಿ ಇಂದು (ಮೇ 18, 2025) ಬೆಳಗಿನ ಜಾವ 4:30ರ ಸುಮಾರಿಗೆ ಇಡ್ಲಿ ಬಂಡಿ ಇಡುವ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾದ ಯುವಕನನ್ನು ಸಾದಿಕ್ (27) ಎಂದು ಗುರುತಿಸಲಾಗಿದೆ. ಆರೋಪಿ ಕರೀಮ್, ಸಾದಿಕ್‌ಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ. ಚಾಕು ಇರಿತದಿಂದ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಸಾದಿಕ್‌ನನ್ನು ಕೂಡಲೇ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾದಿಕ್ ಮೃತಪಟ್ಟಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಇಂದು ಬೆಳಗಿನ ಜಾವ ಸಾದಿಕ್ ಮತ್ತು ಕರೀಮ್ ನಡುವೆ ಇಡ್ಲಿ ಬಂಡಿ ವಿಷಯಕ್ಕೆ ಸಂಬಂಧಿಸಿದಂತೆ ತೀವ್ರ ವಾಗ್ವಾದ ನಡೆದಿದೆ. ವಾಗ್ವಾದ ತಾರಕಕ್ಕೇರಿದಾಗ ಕರೀಮ್, ಸಾದಿಕ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಉಗ್ರ ಸಂಘಟನೆಯ ಸ್ಲೀಪರ್‌ಸೆಲ್‌ನ ಭಾಗವಾಗಿದ್ದ ಇಬ್ಬರು ಶಂಕಿತ ಐಸಿಸ್‌ ಉಗ್ರರ ಬಂಧನ...

ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿ ಕರೀಮ್‌ನನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ಕುರಿತು ಮತ್ತಷ್ಟು ವಿವರಗಳಿಗಾಗಿ ಪೊಲೀಸ್ ತನಿಖೆಯನ್ನು ಕಾಯಲಾಗುತ್ತಿದೆ.
ರಾಯಚೂರು ನಗರದಲ್ಲಿ ಈ ರೀತಿಯ ಘಟನೆ ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದ್ದು, ಪೊಲೀಸರು ಸ್ಥಳದಲ್ಲಿ ಭದ್ರತೆಯನ್ನು ಒದಗಿಸಿದ್ದಾರೆ.