ಅತ್ತೆಗೆ ಗುಂಡು ಹಾರಿಸಲು ಹೋಗಿ ಜೈಲು ಕಂಬಿ ಎಣಿಸುತ್ತಿರುವ ಭೂಪ..!
ಹೆಂಡತಿಯ ತಾಯಿಯತ್ತ ಗುಂಡು ಹಾರಿಸಲು ಹೋಗಿ ಆರೋಪಿಯನ್ನು ಬಂಧಿಸಲಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಗಂಡ - ಹೆಂಡತಿಯ ನಡುವಿನ ಜಗಳದಿಂದ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಹೆಣ್ಣು ಕೊಟ್ಟ ಅತ್ತೆ - ಮಾವನನ್ನು ದೇವರು ಅಂತಾರೆ. ಆದರೆ, ಇಲ್ಲೊಬ್ಬ ಭೂಪ ಹೆಣ್ಣು ಕೊಟ್ಟ ಅತ್ತೆಯನ್ನೇ ಕೊಲೆ ಮಾಡಲು ಹೋಗಿ ಈಗ ಜೈಲಿನ ಕಂಬಿ ಎಣಿಸುವಂತಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ದಿನವೇ ಈ ಘಟನೆ ನಡೆದಿದೆ ಎಂದು ಪೊಲೀಸರು ಮಂಗಳವಾರ ಮಾಹಿತಿ ನೀಡಿದ್ದಾರೆ.
ಅತ್ತೆಗೆ ಗುಂಡು ಹಾರಿಸಿ ಹತ್ಯೆಗೆ ಯತ್ನ ಮಾಡಿದ ಆರೋಪದ ಮೇಲೆ 32 ವರ್ಷದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ನೈರುತ್ಯ ದೆಹಲಿಯ ಸಾಗರ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಆರೋಪಿ ಗೌರವ್ ತನ್ನ ಅತ್ತೆಗೆ ಗುಂಡಿಟ್ಟು ಕೊಲ್ಲಲು ಹೋಗಿದ್ದ, ಆದರೆ ಆ ಗುಂಡು ಮಿಸ್ ಆಗಿ ಆರೋಪಿಯ ಅತ್ತೆಯ ಹಿಂದಿದ್ದ ಗೋಡೆಗೆ ಹೊಡೆಯಿತು ಎಂದೂ ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 15 ರ ಸಂಜೆ 7 ಗಂಟೆ ವೇಳೆಗೆ ಸಾಗರ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದು, ಆರೋಪಿಯನ್ನು ಅದೇ ದಿನ ಬಂಧಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಮುಕೇಶ್ ಅಂಬಾನಿಗೆ ಬೆದರಿಕೆ ಹಾಕಿದ್ದ ವ್ಯಕ್ತಿ ಬಂಧನ, ಆಗಸ್ಟ್ 30ರವರೆಗೆ ಪೊಲೀಸ್ ಕಸ್ಟಡಿಗೆ
ವ್ಯಕ್ತಿಯೊಬ್ಬರು ತನ್ನ ಅತ್ತೆಗೆ ಗುಂಡು ಹಾರಿಸಿದ್ದಾರೆ, ಆದರೆ ಆಕೆಗೆ ಯಾವ ಗಾಯಗಳೂ ಆಗಿಲ್ಲ ಎಂಬ ಬಗ್ಗೆ ನಮಗೆ ದೂರವಾಣಿಯ ಮೂಲಕ ಮಾಹಿತಿ ತಿಳಿದುಬಂತು. ಈ ಬಗ್ಗೆ ವಿಚಾರಣೆ ನಡೆಸಿದಾಗ ಆರೋಪಿ ಗೌರವ್ 31 ವರ್ಷದ ರುಚಿಕಾರನ್ನು ಮದುವೆಯಾಗಿದ್ದರು. ಆದರೆ ಕೆಲ ತಿಂಗಳಿಂದ ಈ ದಂಪತಿಯ ನಡುವಿನ ಸಂಬಂಧದಲ್ಲಿ ಬಿರುಕು ಏರ್ಪಟ್ಟಿತ್ತು ಎಂದು ನಮಗೆ ತಿಳಿದುಬಂದಿದೆ ಎಂದೂ ದೆಹಲಿಯ ನೈರುತ್ಯ ಡಿಸಿಪಿ ಮನೋಜ್ ಸಿ ತಿಳಿಸಿದ್ದಾರೆ. ಅಲ್ಲದೆ, ಒಂದು ವಾರದ ಹಿಂದೆ ಗಂಡನ ಮನೆ ಬಿಟ್ಟು ಹೋದ ಪತ್ನಿ ತನ್ನ ತಾಯಿ ಸರಿತಾ ಜೊತೆಯಲ್ಲಿ ವಾಸಿಸುತ್ತಿದ್ದರು ಎಂದೂ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಹಿನ್ನೆಲೆ ಸೋಮವಾರ ಸಂಜೆ ಗೌರವ್ ತನ್ನ ಅತ್ತೆ - ಮಾವನ ಮನೆಗೆ ಹೋಗಿ, ಅತ್ತೆಯನ್ನು ಗುರಿಯಾಗಿಸಿ ಪಿಸ್ತೂಲ್‌ನಲ್ಲಿ ಗುಂಡು ಹಾರಿಸಿದ, ಆದರೆ ಅದೃಷ್ಟವಶಾತ್ ಆಕೆಗೆ ಗುಂಡು ತಗುಲಲಿಲ್ಲ ಎಂದೂ ಅವರು ಮಾಹಿತಿ ನೀಡಿದರು. ಇನ್ನು, ಅತ್ತೆಯತ್ತ ಗುಂಡು ಹಾರಿಸಿದ ಬಳಿಕ ತನ್ನ ಹೆಂಡತಿಯನ್ನು ಆತ ತನ್ನ ಜತೆ ಕರೆದುಕೊಂಡು ಹೋದ ಎಂದೂ ದೆಹಲಿ ಪೊಲೀಸರು ತಿಳಿಸಿದ್ದಾರೆ. ಇನ್ನು, ಆರೋಪಿ ಗೌರವ್ ವಿರುದ್ಧ ಐಪಿಸಿ ಸೆಕ್ಷನ್ 307 ರಡಿ ಹತ್ಯೆಗೆ ಯತ್ನ ಕೇಸ್ ದಾಖಲಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದೂ ದೆಹಲಿಯ ನೈರುತ್ಯ ಡಿಸಿಪಿ ಮನೋಜ್. ಸಿ ಮಾಹಿತಿ ನೀಡಿದ್ದಾರೆ.
ಮೇಲ್ಜಾತಿಯವರ ನೀರಿನ ಮಡಿಕೆ ಮುಟ್ಟಿದ್ದಕ್ಕೆ ದಲಿತ ವಿದ್ಯಾರ್ಥಿಯ ಹಲ್ಲೆ: ಬಾಲಕ ಸಾವು
ಅತ್ತೆಯತ್ತ ಗುಂಡು ಹಾರಿಸುವ ಮೊದಲು ಆತ ಗುಂಡು ಹಾರಿಸುವುದಾಗಿ ಆಕೆಯ ಬಳಿ ಪಿಸ್ತೂಲ್ ಇಟ್ಟು ಬೆದರಿಕೆ ಹಾಕಿದ್ದಾನೆ. ನಂತರ, ಅತ್ತೆಯ ಬಳಿ ಗುಂಡು ಹಾರಿಸಿದ್ದಾನೆ. ಆದರೆ ಆ ಗುಂಡು ಗೋಡೆಯ ಬಳಿ ಬಿದ್ದಿದೆ ಎಂದೂ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಆತ ಉದ್ದೇಶಪೂರ್ವಕವಾಗಿ ಅತ್ತೆಯನ್ನು ಕೊಲೆ ಮಾಡಲು ಗುಂಡು ಹಾರಿಸಿದರೋ ಅಥವಾ ಕೇವಲ ಬೆದರಿಕೆ ಹಾಕಲು ಗುಂಡು ಹಾರಿಸಿದರೋ ಎಂಬುದು ತಿಳಿದುಬಂದಿಲ್ಲ ಎನ್ನಲಾಗಿದೆ.
ಒಟ್ಟಾರೆ ಗಂಡ - ಹೆಂಡತಿಯ ಜಗಳಕ್ಕೆ ಅತ್ತೆಯ ಕಡೆ ಗುಂಡು ಹಾರಿಸಲು ಹೋಗಿ ಈಗ ಆರೋಪಿ ಜೈಲಿನ ಕಂಬಿ ಎಣಿಸುವಂತಾಗಿದೆ ಅನ್ನೋದಂತೂ ಸತ್ಯ.