ಯುವತಿಯರ ಸ್ನಾನದ ದೃಶ್ಯ ಸೆರೆ ಹಿಡಿಯುತ್ತಿದ್ದವನಿಗೆ ಧರ್ಮದೇಟು: ಕಾಮುಕನ ಬಂಧನ
ಮಹಿಳಾ ಪೇಯಿಂಗ್ ಗೆಸ್ಟ್‌ನ (ಪಿಜಿ) ಸ್ನಾನಗೃಹದಲ್ಲಿ ಯುವತಿಯರು ಸ್ನಾನ ಮಾಡುವಾಗ ಕಿಟಕಿಯಲ್ಲಿ ಮೊಬೈಲ್ ಇರಿಸಿ ವಿಡಿಯೋ ಸೆರೆ ಹಿಡಿಯುತ್ತಿದ್ದ ಕಾಮುಕನೊಬ್ಬನನ್ನು ಮಹದೇವಪುರ ಠಾಣೆ ಪೊಲಿಸರು ಬಂಧಿಸಿದ್ದಾರೆ.
ಬೆಂಗಳೂರು (ಜೂ.26): ಮಹಿಳಾ ಪೇಯಿಂಗ್ ಗೆಸ್ಟ್‌ನ (ಪಿಜಿ) ಸ್ನಾನಗೃಹದಲ್ಲಿ ಯುವತಿಯರು ಸ್ನಾನ ಮಾಡುವಾಗ ಕಿಟಕಿಯಲ್ಲಿ ಮೊಬೈಲ್ ಇರಿಸಿ ವಿಡಿಯೋ ಸೆರೆ ಹಿಡಿಯುತ್ತಿದ್ದ ಕಾಮುಕನೊಬ್ಬನನ್ನು ಮಹದೇವಪುರ ಠಾಣೆ ಪೊಲಿಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು ನಿವಾಸಿ ಅಶೋಕ್ (25) ಬಂಧಿತ. ಆರೋಪಿ ಅಶೋಕ್ ನಗರದ ಖಾಸಗಿ ಬ್ಯಾಂಕ್‌ವೊಂದರ ಕ್ರೆಡಿಟ್ ಕಾಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ.
ಹೂಡಿಯ ತಿಗಳರಪಾಳ್ಯದ ಪುರುಷರ ಪಿಜಿಯೊಂದರಲ್ಲಿ ಉಳಿದುಕೊಂಡಿದ್ದ. ಈ ಪಿಜಿಯ ಪಕ್ಕದಲ್ಲೇ ಮಹಿಳಾ ಪಿಜಿ ಇದೆ. ಜೂ.21ರಂದು ಯುವತಿಯೊಬ್ಬಳು ಸ್ನಾನಗೃಹದಲ್ಲಿ ಸ್ನಾನ ಮಾಡುವಾಗ ಯಾರೋ ವ್ಯಕ್ತಿ ಕಿಟಕಿಯಲ್ಲಿ ಮೊಬೈಲ್ ಇರಿಸಿ ವಿಡಿಯೋ ಸೆರೆ ಹಿಡಿಯುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣ ಜೋರಾಗಿ ಕೂಗಿದಾಗ ಪಿಜಿ ಮಹಿಳೆಯರು ಹಾಗೂ ಸ್ಥಳೀಯರು ಆರೋಪಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಆರೋಪಿಯ ಮೊಬೈಲ್ ಪಡೆದು ಪರಿಶೀಲಿಸಿದಾಗ ಮಹಿಳೆಯರು ಸ್ನಾನ ಮಾಡುವ ಏಳು ಖಾಸಗಿ ವಿಡಿಯೋಗಳು ಪತ್ತೆಯಾಗಿವೆ. ಬಳಿಕ ಸ್ಥಳೀಯರು ಆರೋಪಿಗೆ ಧರ್ಮದೇಟು ಕೊಟ್ಟು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿಯು ಕಳೆದ 3-4 ತಿಂಗಳಿಂದ ಯುವತಿಯರ ಸ್ನಾನದ ವಿಡಿಯೋಗಳನ್ನು ಸೆರೆ ಹಿಡಿಯುವ ಕೆಲಸ ಮಾಡುತ್ತಿದ್ದ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.
ಪತ್ನಿ ಮೇಲಿನ ಅನುಮಾನಕ್ಕೆ ಮಕ್ಕಳನ್ನ ಸುತ್ತಿಗೆಯಿಂದ ಹೊಡೆದು ಕೊಂದ ತಂದೆಯ ಬಂಧನ
ಆರೋಪಿಯ ಹೆಚ್ಚಿನ ವಿಚಾರಣೆ ಬಳಿಕ ಈ ವಿಡಿಯೋಗಳನ್ನು ಯಾವ ಉದ್ದೇಶಕ್ಕೆ ಸೆರೆ ಹಿಡಿಯುತ್ತಿದ್ದ? ಈ ವಿಡಿಯೋಗಳನ್ನು ಮುಂದಿಟ್ಟು ಯಾರಿಗಾದರೂ ಬ್ಲ್ಯಾಕ್‌ಮೇಲ್ ಮಾಡಿದ್ದಾನೆಯೇ ಎಂಬುದು ಸೇರಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.