ಮದ್ದೂರು[ಫೆ.27]: ಮಹಿಳೆಯನ್ನು ಕೊಂದ ಮಂಗಳಮುಖಿಯನ್ನು ಗ್ರಾಮಸ್ಥರು ಬಡಿದುಕೊಂದ ಘಟನೆ ತಾಲೂಕಿನ ಹಾಗಲಹಳ್ಳಿಯಲ್ಲಿ ಬುಧವಾರ ನಡೆದಿದೆ. ಹಾಗಲಹಳ್ಳಿಯ ನಿವಾಸಿ ಕೃಷ್ಣ ಜನರ ಥಳಿತದಿಂದ ಮೃತಪಟ್ಟಮಂಗಳಮುಖಿ. ಇದೇ ಗ್ರಾಮದ ಪಾಪೇಗೌಡ ಎಂಬುವರ ಪತ್ನಿ ಶೋಭಾರನ್ನು ಕೃಷ್ಣ ಕೊಲೆ ಮಾಡಿದ್ದ ಎಂಬ ಆರೋಪ ಕೇಳಿಬಂದಿದೆ.

ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಶೋಭಾಳ ಬಳಿ ಕೃಷ್ಣ 50 ಸಾವಿರ ರು. ಸಾಲ ಪಡೆದಿದ್ದು, ಬಡ್ಡಿ ಸಮೇತ ಸಾಲವನ್ನು ಮರಳಿಸುವಂತೆ ಶೋಭಾ ಒತ್ತಡ ಹಾಕಿದ್ದಾರೆ. ಇದರಿಂದ ಕುಪಿತಗೊಂಡ ಕೃಷ್ಣ, ಶೋಭಾರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ. ಇದರಂತೆ ಬುಧವಾರ ಶೋಭಾರ ಮನೆಗೆ ಆಗಮಿಸಿದ್ದು, ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಕೊನೆಗೆ ಮನೆಯಲ್ಲಿ ನೀರಿನಲ್ಲಿ ಶೋಭಾರನ್ನು ಮುಳುಗಿಸಿ, ಆಕೆಯ ಉಸಿರುಗಟ್ಟಿಸಿ ಕೃಷ್ಣ ಕೊಲೆ ಮಾಡಿದ್ದಾರೆ. ಬಳಿಕ ಆಕೆಯ ಮೈಮೇಲಿದ್ದ ಮಾಂಗಲ್ಯ ಸರ, ಓಲೆ ಇತರೆ ಒಡವೆಗಳನ್ನು ಅಪರಿಸಿ ಪರಾರಿಯಾಗಲು ಯತ್ನಿಸಿದ್ದು, ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಕೂಡಲೇ ಕೃಷ್ಣನನ್ನು ಹಿಡಿದು ಗ್ರಾಮಸ್ಥರು ಥಳಿಸಿ, ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಕೃಷ್ಣನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.