ಯುವತಿಗೆ ಕಿರುಕುಳ ನೀಡಿದ ಕಾಮುಕನಿಗೆ ಎಸ್ಕೇಪ್‌ ಆಗಲು ಸಹಕರಿಸಿದ್ದ ಪ್ರೇಯಸಿ ವಿಚಾರಣೆ

ಸುದ್ದಗುಂಟೆಪಾಳ್ಯದಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪಿ ಸಂತೋಷ್‌ ಡೇನಿಯಲ್‌ರನ್ನು ಪೊಲೀಸರು 6 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ತಲೆಮರೆಸಿಕೊಳ್ಳಲು ಸಹಕರಿಸಿದ ಪ್ರೇಯಸಿಯನ್ನು ಸಹ ವಶಕ್ಕೆ ಪಡೆಯಲಾಗಿದೆ.

Lover who helped bf who harassed a young woman escape is being questioned rav

ಬೆಂಗಳೂರು (ಏ.15) : ಇತ್ತೀಚೆಗೆ ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪದಡಿ ಬಂಧನವಾಗಿರುವ ಆರೋಪಿ ಸಂತೋಷ್‌ ಡೇನಿಯಲ್‌ (26)ನನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು 6 ದಿನ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಭಾನುವಾರ ಕೇರಳದಲ್ಲಿ ಆರೋಪಿ ಸಂತೋಷ್‌ನನ್ನು ಬಂಧಿಸಿದ್ದ ಪೊಲೀಸರು, ಸೋಮವಾರ ಮುಂಜಾನೆ ನಗರಕ್ಕೆ ಕರೆತಂದು ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು 6 ದಿನ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

ಕೃತ್ಯ ನಡೆದ ದಿನ ಆರೋಪಿ ಸ್ನೇಹಿತರ ಜತೆಗೆ ಮದ್ಯದ ಪಾರ್ಟಿ ಮಾಡಿ, ದ್ವಿಚಕ್ರ ವಾಹನದಲ್ಲಿ ಮನೆಗೆ ಹೊರಟ್ಟಿದ್ದ. ಆಗ ಭಾರತಿ ಲೇಔಟ್‌ನ 1ನೇ ಕ್ರಾಸ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಯುವತಿಯರನ್ನು ಹಿಂಬಾಲಿಸಿ ಓರ್ವ ಯುವತಿಗೆ ಕಿರುಕುಳ ನೀಡಿದ್ದ. ಯುವತಿಯರು ಜೋರಾಗಿ ಚೀರಿದ್ದರಿಂದ ಸಂತೋಷ್‌ ಪರಾರಿಯಾಗಿದ್ದ.

ಘಟನೆ ಬಳಿಕ ನಗರದಿಂದ ಪರಾರಿಯಾಗಲು ಸಹಕರಿಸಿದ್ದ ಸಂತೋಷ್‌ನ ಪ್ರೇಯಸಿಯನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಗೃಹರಕ್ಷಕ ದಳ ಸಿಬ್ಬಂದಿ ಆಗಿರುವ ಪ್ರೇಯಸಿ ಪ್ರಸ್ತುತ ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಬ್ರೂಕ್‌ಫೀಲ್ಡ್‌ನ ಕಾರು ಶೋ ರೂಮ್‌ನಲ್ಲಿ ಟೆಸ್ಟ್‌ ಡ್ರೈವರ್‌ ಕೆಲಸ ಮಾಡುತ್ತಿದ್ದ ಸಂತೋಷ್‌ ಮತ್ತು ಆಕೆ ಕಳೆದ 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಐದು ವರ್ಷದ ಬಾಲಕಿಯ ಕೊ*ಲೆ ಪ್ರಕರಣ, ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾ*ಚಾರ ಸಾಬೀತು!

ಘಟನೆ ಬಳಿಕವೂ 4 ದಿನ ಕೆಲಸ:

ಏ.3ರ ಮುಂಜಾನೆ ಯುವತಿಗೆ ಕಿರುಕುಳ ನೀಡಿ ಪರಾರಿಯಾಗಿದ್ದ ಸಂತೋಷ್‌ ಬಳಿಕ 4 ದಿನ ಎಂದಿನಂತೆ ಕಾರು ಶೋ ರೂಮ್‌ನಲ್ಲಿ ಕೆಲಸ ಮಾಡಿದ್ದ. ಏ.7ರಂದು ಆರೋಪಿ ದುಷ್ಕೃತ್ಯದ ಸಿಸಿಟಿವಿ ದೃಶ್ಯಾವಳಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದನ್ನು ಗಮನಿಸಿದ್ದ ಪ್ರೇಯಸಿ, ಪ್ರಿಯಕರ ಸಂತೋಷ್‌ಗೆ ಮಾಹಿತಿ ನೀಡಿ ಪೊಲೀಸರು ನಿನ್ನನ್ನು ಬಂಧಿಸಬಹುದು. ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಳು. ಹೀಗಾಗಿ ಆರೋಪಿ ಸಂತೋಷ್‌ ಕೆಲಸಕ್ಕೆ ಗೈರಾಗಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

ಹೊಸ ಸಿಮ್‌, ಮೊಬೈಲ್‌, ಹಣ ನೀಡಿದ್ದ ಪ್ರೇಯಸಿ:

ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಸಂತೋಷ್‌ ತನ್ನ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡಿದ್ದ. ಆತನ ಪ್ರೇಯಸಿ ಏ.8ರಂದು ಆತನಿಗೆ ಹೊಸ ಮೊಬೈಲ್‌ ಕೊಡಿಸಿದ್ದಳು. ತನ್ನ ಹೆಸರಿನಲ್ಲಿ ಹೊಸ ಸಿಮ್‌ ಖರೀದಿಸಿ ನೀಡಿದ್ದಳು. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡು ಪೊಲೀಸರು ಹುಡುಕಾಡುತ್ತಿರುವ ವಿಚಾರ ಗೊತ್ತಾಗಿ ಸಂತೋಷ್‌ ಹಾಗೂ ಆತನ ಪ್ರೇಯಸಿ ಏ.8ರ ಮಧ್ಯಾಹ್ನ ಬಸ್‌ನಲ್ಲಿ ಹೊಸೂರು ಮಾರ್ಗವಾಗಿ ತಮಿಳುನಾಡಿನ ಸೇಲಂಗೆ ಹೋಗಿದ್ದರು. ಬಳಿಕ ಪೊಲೀಸರ ತಂಡ ತಮಿಳುನಾಡಿನಲ್ಲಿಯೂ ಹುಡುಕಾಡುತ್ತಿರುವ ವಿಚಾರ ಗೊತ್ತಾಗಿ ಕೇರಳದ ಕಾಝಿಕೋಡ್‌ಗೆ ಪ್ರಯಾಣ ಬೆಳೆಸಿದ್ದರು. ಬಳಿಕ ಪರಿಚಿತರ ಸಹಾಯ ಪಡೆದು ಸ್ಥಳೀಯ ಹೋಟೆಲ್‌ವೊಂದರಲ್ಲಿ ತಲೆಮರೆಸಿಕೊಂಡಿದ್ದರು.

ಕೆರೆ ಭದ್ರತೆ ವೇಳೆ ಪ್ರೇಮಾಂಕುರ:

ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ ಹೋಂ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ ಪ್ರೇಯಸಿಯನ್ನು ಮೂರು ವರ್ಷಗಳ ಹಿಂದೆ ಬೆಳ್ಳಂದೂರು ಕೆರೆ ಭದ್ರತೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ವೇಳೆ ಆರೋಪಿ ಸಂತೋಷ್‌ಗೆ ಆಕೆಯ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮಗುವಿನ ಅತ್ಯಾ*ಚಾರ ಕೊಲೆ: ಆರೋಪಿ ಎನ್‌ಕೌಂಟಗೆ ಬಲಿ!

ತಾಯಿಗೆ ಕರೆ ಮಾಡಿದ್ದ ಆರೋಪಿ:

ಈ ನಡುವೆ ಆರೋಪಿ ಸಂತೋಷ್‌ ಹೊಸ ಸಿಮ್‌ ಬಳಸಿ ಬೆಂಗಳೂರಿನ ತಿಲಕನಗರದ ಗುಲ್ಬರ್ಗಾ ಕಾಲೋನಿಯಲ್ಲಿರುವ ತಾಯಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದ. ಮತ್ತೊಂದೆಡೆ ಪೊಲೀಸರ ತಂಡವೊಂದು ಜಾಡು ಹಿಡಿದು ಕೇರಳಕ್ಕೆ ತೆರಳಿ ಹೋಟೆಲ್‌ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ವೇಳೆ ಆರೋಪಿಯ ಜತೆಗಿದ್ದ ಪ್ರೇಯಸಿಯನ್ನು ವಶಕ್ಕೆ ಪಡೆದು ಇಬ್ಬರನ್ನೂ ನಗರಕ್ಕೆ ಕರೆತಂದಿದ್ದಾರೆ.

Latest Videos
Follow Us:
Download App:
  • android
  • ios