ನಿವೃತ್ತ ಡಿಜಿಪಿ ಓಂಪ್ರಕಾಶ್‌ರನ್ನು ಪತ್ನಿ ಪಲ್ಲವಿ ಕೊಲೆಗೈದಿದ್ದಾರೆ. ನಿರಂತರ ಕಿರುಕುಳ ಹಾಗೂ ಜೀವ ಬೆದರಿಕೆಯಿಂದ ಬೇಸತ್ತು, ಆತ್ಮರಕ್ಷಣೆಗಾಗಿ ಕೊಲೆ ಮಾಡಿದ್ದಾಗಿ ಪಲ್ಲವಿ ಒಪ್ಪಿಕೊಂಡಿದ್ದಾರೆ. ಖಾರದಪುಡಿ, ಎಣ್ಣೆ ಸುರಿದಿ, ಕೈಕಾಲು ಕಟ್ಟಿ, ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಮಗಳ ಪಾತ್ರದ ಬಗ್ಗೆ ತನಿಖೆ ಮುಂದುವರೆದಿದೆ.
ಬೆಂಗಳೂರು (ಏ.20): ಕರ್ನಾಟಕ ರಾಜ್ಯದ ನಿವೃತ್ತ ಡಿಜಿ, ಐಜಿಪಿ ಓಂ ಪ್ರಕಾಶ್ ಕೊಲೆ ರಹಸ್ಯ ಕೊನೆಗೂ ರಿವೀಲ್ ಆಗಿದೆ. ಈ ಬಗ್ಗೆ ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಅವರೇ ಪೊಲೀಸರ ವಿಚಾರಣೆ ವೇಳೆ ಕೊಲೆ ರಹಸ್ಯವನ್ನು ಬಾಯಿ ಬಿಟ್ಟಿದ್ದಾರೆ. ಈ ವೇಳೆ ತಲೆಗೆ ಗನ್ ಪಾಯಿಂಟ್, ಖಾರದ ಪುಡಿ, ಅಡುಗೆ ಎಣ್ಣೆ, ಹಗ್ಗ, ಚಾಕು ಹಾಗೂ ಕೊಲೆ ನಡೆದ ಘಟನೆಯ ಇಂಚಿಂಚು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ನಿವೃತ್ತ ಡಿಜಿಪಿ ಓಂಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದಿದ್ದ ಕೊಲೆ ಆರೋಪಿ ಪಲ್ಲವಿ ಅವರು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಈ ವೇಳೆ ಕೊಲೆಯ ಕುರಿತಾದ ಹಲವು ಸ್ಪೋಟಕ ಮಾಹಿತಿಗಳು ಹೊರಬಿದ್ದಿವೆ. ಕಳೆದ ಒಂದು ವಾರದಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪದೇ ಪದೇ ಗನ್ ತಂದು ನನಗೆ ಮತ್ತು ನನ್ನ ಮಗಳಿಗೆ ಶೂಟ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದರು. ಇದರಿಂದ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತಾಗಿತ್ತು. ನಾನು ಮತ್ತು ಮಗಳು ಇವರ ಕಾಟದಿಂದ ತುಂಬಾ ಬೇಸತ್ತು ಹೋಗಿದ್ದೆವು.
ಅದೇ ರೀತಿ ಇಂದು ಬೆಳಗ್ಗೆಯಿಂದಲೂ ಬೇರೆ ಬೇರೆ ವಿಚಾರಕ್ಕೆ ಮನೆಯಲ್ಲಿ ಜಗಳ ಶುರುವಾಗಿತ್ತು. ಮಧ್ಯಾಹ್ನ ಜಗಳ ವಿಕೋಪಕ್ಕೆ ಹೋದಾಗ ನಮ್ಮನ್ನೇ ಕೊಲೆ ಮಾಡಲು ಗಂಡ ಓಂ ಪ್ರಕಾಶ್ ಪ್ರಯತ್ನ ಮಾಡಿದರು. ಆಗ ಅದರಿಂದ ತಪ್ಪಿಸಿಕೊಳ್ಳಲು ತುಂಬಾ ಪರದಾಡಿದ್ದೇವೆ. ನಮ್ಮನ್ನು ಉಳಿಸಿಕೊಳ್ಳಲು ನಾವು ಹೋರಾಟ ಮಾಡಿದ್ದೀವಿ. ನಾವು ಬದುಕುಳಿಯಬೇಕೆಂದರೆ ಅವರನ್ನೇ ಕೊಲೆ ಮಾಡುವುದು ಉತ್ತಮ ಎಂಬ ತೀರ್ಮಾನಕ್ಕೆ ಬಂದೆವು. ನಂತರ, ಓಂ ಪ್ರಕಾಶ್ ಮೇಲೆ ಖಾರದ ಪುಡಿ ಹಾಕಲಾಯಿತು. ನಂತರ, ಅವರು ಓಡಾಡಲು ಆಗದಂತೆ ಅಡುಗೆ ಎಣ್ಣೆಯನ್ನು ಸುರಿಯಲಾಯಿತು.
ಇದನ್ನೂ ಓದಿ: ನಿವೃತ್ತ ಡಿಜಿ, ಐಜಿಪಿ ಓಂ ಪ್ರಕಾಶ್ ಕೊಲೆ ಕೇಸಲ್ಲಿ ಟ್ವಿಸ್ಟ್; 2 ಚಾಕು, ಖಾರದ ಪುಡಿ, 'ರಾಕ್ಷಸನ ಅಂತ್ಯ'
ನಂತರ ಓಂ ಪ್ರಕಾಶ್ ಕೈ-ಕಾಲು ಕಟ್ಟಿ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಚುಚ್ಚಲಾಯಿತು ಎಂದು ಪಲ್ಲವಿ ಒಪ್ಪಿಕೊಂಡಿದ್ದಾರೆ. ನಂತರ ತೀವ್ರ ರಕ್ತಸ್ರಾವದಿಂದ ಓಂ ಪ್ರಕಾಶ್ ಸಾವನ್ನಪ್ಪಿದ್ದಾರೆ. ಈ ಘಟನೆ ಬಗ್ಗೆ ಸಂಜೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪ್ರಕರಣ ದಾಖಲಾದ ಕೂಡಲೇ ಪೊಲೀಸರು ಅರೆಸ್ಟ್ ಪ್ರೋಸೆಸ್ ಮಾಡಿದ್ದಾರೆ ಎಂದು ಪಲ್ಲವಿ ಅವರು ಹೇಳಿದ್ದಾರೆ. ಇನ್ನು ಕೊಲೆ ಪ್ರಕರಣದಲ್ಲಿ ಓಂ ಪ್ರಕಾಶ್ ಅವರ ಮಗಳ ಪಾತ್ರದ ಬಗ್ಗೆ ಇನ್ನೂ ವಿಚಾರಣೆ ಮಾಡಬೇಕಿದೆ. ಪಲ್ಲವಿ ಹಾಗೂ ಕೃತಿ ಅವರನ್ನು ವಶಕ್ಕೆ ಪಡೆದು ಡಿಸಿಪಿ ಸಾ.ರಾ ಫಾತೀಮಾ ವಿಚಾರಣೆ ನಡೆಸುತ್ತಿದ್ದಾರೆ. ನಾಳೆ ಓಂ ಪ್ರಕಾಶ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಆಗಲೂ ಕೆಲವು ಸತ್ಯಾಂಶ ಹೊರಬೀಳಲಿವೆ.
ಘಟನಾ ಸ್ಥಳದಲ್ಲಿ ಚಾಕು, ಬಾಟಲ್:
ಇನ್ನು ಓಂ ಪ್ರಕಾಶ್ ಘಟನಾ ಸ್ಥಳದಲ್ಲಿ ಚಾಕು ಇದ್ದುದು ಅದರಿಂದಲೇ ಚುಚ್ಚಿ ಸಾಯಿಸಲಾಗಿದೆ ಎಂಬುದು ಕಂಡುಬಂದಿದೆ. ಆದರೆ, ಪಕ್ಕದಲ್ಲಿದ್ದ ಬಾಟಲಿ ಅಡುಗೆ ಎಣ್ಣೆಯದ್ದು ಎಂಬುದು ಖಚಿತವಾಗುತ್ತಿದೆ. ಆದರೆ, ಎರಡು ಚಾಕು ಸಿಕ್ಕಿರುವ ಬಗ್ಗೆ ಇನ್ನೂ ಸತ್ಯಾಂಶ ತಿಳಿದುಬಂದಿಲ್ಲ. ಇದರಲ್ಲಿ ಮಗಳು ಕೃತಿ ಪಾತ್ರವಿದೆಯೋ ಇಲ್ಲವೋ ಎಂಬುದನ್ನು ಖಚಿತ ಮಾಡಬೇಕಿದೆ. ಸದ್ಯ ಚಾಕುಗಳು ಹಾಗೂ ಬಾಟಲಿ ಮೇಲೆ ಇರೋ ಫಿಂಗರ್ ಫ್ರಿಂಟ್ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕೋಟ್ಯಾಧಿಪತಿ ಮಂಗಳಮುಖಿ ತನುಶ್ರೀ ಮದುವೆಯಾಗಿ 3 ತಿಂಗಳಿಗೆ ಕೊಲೆ!
