ಕಾಂಗ್ರೆಸ್ ಅಧಿಕಾರಕ್ಕೆ ಬಂದ 3 ದಿನದಲ್ಲಿ ಸಾಲಬಾಧೆಗೆ ಇಬ್ಬರು ರೈತರ ಆತ್ಮಹತ್ಯೆ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೂರೇ ದಿನದಲ್ಲಿ ಸಾಲಬಾಧೆಯನ್ನು ತಾಳಲಾರದೇ ಮೈಸೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಒಂದೇ ದಿನ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯಾದಗಿರಿ (ಮೇ 23): ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ 3 ದಿನಗಳ ನಂತರ ಮಂಗಳವಾರ ಒಂದೇ ದಿನ ಸಾಲಬಾಧೆಯನ್ನು ತಾಳಲಾರದೇ ಮೈಸೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ರೈತನನ್ನು ಯಾಲಕ್ಕಿಗೌಡ (62) ಎಂದು ಗುರುತಿಸಲಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಉಡುವೆಪುರದಲ್ಲಿ ಘಟನೆ ನಡೆದಿದೆ. ಕಳೆದ ಎರಡು ವರ್ಷದಿಂದ ಉಂಟಾಗುತ್ತಿದ್ದ ಬೆಳೆಹಾನಿಯಿಂದ ತಾವು ಮಾಡಿಕೊಂಡಿದ್ದ ಸಾಲವನ್ನು ಕಟ್ಟಲಾಗದೇ ತೀವ್ರ ಹತಾಶೆಗೊಂಡಿದ್ದರು. ಜೊತೆಗೆ, ಸಾಲಗಾರರು ಮನೆಯ ಬಳಿ ಬಂದು ಸಾಲವನ್ನು ಕೇಳುತ್ತಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಯಾಲಕ್ಕಿಗೌಡ ಕೃಷಿ ಚಟುವಟಿಕೆಗಾಗಿ ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿಯ ಐಓಬಿ ಬ್ಯಾಂಕಿನಲ್ಲಿ ಟ2 ಲಕ್ಷ ರೂ. ಹಾಗೂ ಗ್ರಾಮದಲ್ಲಿ ಖಾಸಗಿಯಾಗಿ 2 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದರು. ಆದರೆ, ಸಾಲ ತೀರಿಸಲಾಗದೇ ಈಗ ಲೋಕವನ್ನೇ ಬಿಟ್ಟು ಹೋಗಿದ್ದಾರೆ.
ಮಲಗಿದ್ದಾಗ ಹಾವು ಕಚ್ಚಿದೆ ಅಂದ್ರೂ ಆಸ್ಪತ್ರೆಗೆ ಸೇರಿಸಲಿಲ್ಲ: ಎದ್ದೇಳುವಷ್ಟರಲ್ಲಿ ಹೆಣವಾಗಿದ್ದ ಮಗಳು
ಕೈಕೊಟ್ಟ ಹೊಗೆಸೊಪ್ಪು, ಶುಂಠಿ ಬೆಳೆ: ಮೃತ ಯಾಲಕ್ಕಿಗೌಡ ತಮ್ಮ ಜಮೀನಿನಲ್ಲಿ ವಾಣಿಜ್ಯ ಬೆಳೆಗಳಾದ ಹೊಗೆಸೊಪ್ಪು, ಶುಂಠಿ ಬೆಳೆ ಬೆಳೆದಿದ್ದರು. ಆದರೆ, ಬೆಳೆ ನಷ್ಟ ಉಂಟಾಗಿದ್ದರಿಂದ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಸಾಲಬಾಧೆಯನ್ನು ತಾಳಲಾರದೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುಣಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಯಾದಗಿರಿಯಲ್ಲೂ ರೈತ ಅಮರಣ್ಣ ಸಾವು: ಮತ್ತೊಂದೆಡೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕನ್ನೆಳ್ಳಿ ಗ್ರಾಮದಲ್ಲಿ ಘಟನೆ ಸಾಲಬಾಧೆಯಿಂದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಮೃತ ರೈತನನ್ನು ಕನ್ನೆಳ್ಳಿ ಗ್ರಾಮದ ಅಮರಣ್ಣ ಕುಂಬಾರ (60) ಎಂದು ಗುರುತಿಸಲಾಗಿದೆ. ಬ್ಯಾಂಕ್ ಹಾಗೂ ಖಾಸಗಿ ಸೇರಿದಂತೆ ಸುಮಾರು 10 ಲಕ್ಷ ರೂ. ಸಾಲ ಮಾಡಿದ್ದ ರೈತ ಅಮರಣ್ಣ, ಸಾಲ ತೀರಿಸಲಾಗದೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
8 ಎಕರೆ ಭೂಮಿಯನ್ನು ಸಾಲಕ್ಕೆ ಬರೆದುಕೊಟ್ಟಿದ್ದ: ರೈತ ಅಮರಣ್ಣ ಕಳೆದ ಎರಡು ವರ್ಷಗಳಿಂದ ಉಳುಮೆ ಮಾಡಿದ್ದ ಯಾವುದೇ ಬೆಳೆಗಳು ಸರಿಯಾಗಿ ಬೆಳೆಯದ ಹಿನ್ನೆಲೆಯಲ್ಲಿ ಜಮೀನಿನ ಮೇಲೆ ವ್ಯಾಂಕ್‌ಗಳಲ್ಲಿ ಮಾಡಿದ್ದ ಸಾಲ ತೀರಿಸಲು ಪರದಾಡುತ್ತಿದ್ದನು. ನಂತರ, ತನ್ನ 8 ಎಕರೆ ಜಮೀನನ್ನು ಖಾಸಗಿಯವರಿಗೆ ಸಾಲಕ್ಕೆ ಬರೆದು ಕೊಟ್ಟಿದ್ದನು. ಇನ್ನು ಪತ್ನಿ ಮತ್ತು ಮಕ್ಕಳಿಗೆ ಈ ಬಗ್ಗೆ ಮಾಹಿತಿಯೂ ಇರಲಿಲ್ಲ. ಆದರೆ, ಜಮೀನು ತನ್ನ ಕೈಬಿಟ್ಟು ಹೋಗುವ ಭಯದಲ್ಲಿ ಮನೆಯಲ್ಲಿ ಯಾರು ಇಲ್ಲದಿದ್ದಾಗ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಸುರಪುರ ಪಿಎಸ್ಐ ಕೃಷ್ಣ ಸುಬೇದಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಘಟನೆ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಅಯ್ಯೋ.. ನನ್ನ ಮದುವೆಯಾಗಲಿಲ್ಲ ಅಂತ ವಿಷ ಕುಡಿದು ಸತ್ತೇ ಹೋದ ಯುವಕ!
ಮಂಡ್ಯ ಟ್ರ್ಯಾಕ್ಟರ್ ಚಾಲಕ ಸಾವು: ಇನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹೊಸದೊಡ್ಡಿಯಲ್ಲಿ ಟ್ರ್ಯಾಕ್ಟರ್ ಚಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಹೊಸದೊಡ್ಡಿ ಗ್ರಾಮದ ನಿವಾಸಿ ರಘು (36) ಮೃತ ವ್ಯಕ್ತಿಯಾಗಿದ್ದಾನೆ. ಬೆಂಗಳೂರಿನ ಅಗ್ರಹಾರದಲ್ಲಿ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದನು. ಇಂದು ಬೆಳಿಗ್ಗೆ ಹೊಸದೊಡ್ಡಿಯ ರಸ್ತೆಯಲ್ಲಿ ಅನುಮಾನಾಸ್ಪದ ಶವವಾಗಿ ಪತ್ತೆಯಾಗಿದೆ. ಈ ಘಟನೆ ಕುರಿತು ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.