ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಚಿನ್ನಾಭರಣ ಅಂಗಡಿಯ ದರೋಡೆ ವೇಳೆ ಸಾಕ್ಷಿಯನ್ನು ನಾಶಮಾಡಲು ಹೋಟೆಲ್ ಮಾಲೀಕ ಮಾದಪ್ಪನವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.
ಮಳವಳ್ಳಿ (ಆ.18): ಚಿನ್ನಾಭರಣ ಅಂಗಡಿಯ ದರೋಡೆಯನ್ನು ನೋಡಿದವನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಭಾನುವಾರ ಮುಂಜಾನೆ ಸಂಭವಿಸಿದೆ.
ಹೋಟೆಲ್ ಮಾಲೀಕ ಮಾದಪ್ಪ (೭೨) ಕೊಲೆಯಾದವರು. ಮಹಾಲಕ್ಷ್ಮೀ ಜುವೆಲ್ಲರ್ಸ್ ಆ್ಯಂಡ್ ಬ್ಯಾಂಕರ್ಸ್‌ಗೆ ಭಾನುವಾರ ನಸುಕಿನ ಜಾವ ೨ರ ಸಮಯಕ್ಕೆ ದರೋಡೆಕೋರರು 12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ದೋಚಿ ಪರಾರಿಯಾಗುವಾಗ ಶಬ್ಧವಾಗಿದೆ. ಆಗ ಹೋಟೆಲ್‌ನಿಂದ ಹೊರಬಂದು ಮಾದಪ್ಪ, ದರೋಡೆಕೋರರನ್ನು ನೋಡಿದ್ದಾರೆ. ಹೀಗಾಗಿ, ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಹೇಗೆ ನಡೆಯಿತು?
ದುಷ್ಕರ್ಮಿಗಳು ಬಂದಿದ್ದಾರೆ. ಅಂಗಡಿ ಬಾಗಿಲನ್ನು ಗ್ಯಾಸ್ ಕಟ್ಟರ್‌ನಿಂದ ಕತ್ತರಿಸಿ ಒಳನುಗ್ಗಿದ ದರೋಡೆಕೋರರು ₹12 ಲಕ್ಷ ಮೌಲ್ಯದ 100 ಗ್ರಾಂ ಚಿನ್ನ, 2 ಕೆ.ಜಿ. ಬೆಳ್ಳಿ ದೋಚಿ ಪರಾರಿಯಾಗುವ ವೇಳೆ ಶಬ್ಧವಾಗಿದೆ. ಇದೇ ಸಮಯಕ್ಕೆ ಮಹದೇಶ್ವರ ಹೋಟೆಲ್ ಮಾಲೀಕ ಮಾದಪ್ಪ ನಸುಕಿನ ಜಾವ ಎದ್ದಿದ್ದಾರೆ. ಶಬ್ಧ ಕೇಳಿ ಮಾದಪ್ಪ ಹೊರಗೆ ಬಂದಾಗ ದರೋಡೆಕೋರರನ್ನು ನೋಡಿದ್ದಾರೆ. ಇದರಿಂದ ಗಾಬರಿಗೊಂಡ ದರೋಡೆಕೋರರು ಮಾದಪ್ಪ ಅವರ ಮೇಲೆ ಹಲ್ಲೆ ನಡೆಸಿ, ಸ್ಥಳದಲ್ಲೇ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
