ಬೆಂಗಳೂರು(ಸೆ.19): ವಿದ್ಯಾ​ರ್ಥಿ​ಗಳು ಹಾಗೂ ಪೋಷ​ಕರೇ ಹುಷಾರ್‌... ಮಕ್ಕ​ಳಿ​ಗೆ ಜೆಲ್ಲಿ ಅಥವಾ ಪೆಪ್ಪ​ರ್‌​ಮೆಂಟ್‌ ಹವ್ಯಾಸ ಬಿಡಿಸಿ... ಇದ​ರಲ್ಲಿ ಡ್ರಗ್ಸ್‌ ಇರ​ಲೂ​ಬ​ಹು​ದು... ಹೌದು.. ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ವಿದೇಶದಿಂದ ಜೆಲ್ಲಿ ಪೆಪ್ಪರ್‌ಮೆಂಟ್‌ ರೂಪದ ಡ್ರಗ್ಸ್‌ ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕೊತ್ತನೂರು ನಿವಾಸಿ ಜಾನ್‌ ನಿಕೋಲಸ್‌ (21) ಮತ್ತು ಜೆ.ಪಿ.ನಗರದ ಇರ್ಫಾನ್‌ ಶೇಖ್‌ (29) ಬಂಧಿತರು. ಆರೋಪಿಗಳಿಂದ ನಾಲ್ಕು ಲಕ್ಷ ಮೌಲ್ಯದ 226 ಗ್ರಾಂ ಟಿಎಚ್‌ಸಿ (ಟೆಟ್ರಾ ಹೈಡ್ರೋ ಕೆನ್ನಾಬಿನೋಲ್‌), 15.5 ಗ್ರಾಂ ಎಕ್ಸ್‌ಫಿಲ್ಸ್‌ ಮಾತ್ರೆ, 27 ಎಲ್‌ಎಸ್‌ಡಿ ಸ್ಟ್ರಿಫ್ಸ್‌ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಕಾರು, ಮೊಬೈಲ್‌ ಜಪ್ತಿ ಮಾಡಲಾಗಿದೆ. ಪ್ರಮುಖ ಆರೋಪಿ ಅಶ್ವಿನ್‌ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಇರ್ಫಾನ್‌ ಶೇಖ್‌ ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಎಂಬಿಎ ವ್ಯಾಸಂಗ ಮಾಡಿದ್ದು, ನಿಕೋಲಸ್‌ ದ್ವಿತೀಯ ಪಿಯುಸಿ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾನೆ. ಆರೋಪಿಗಳಿಬ್ಬರು ಪೋಷಕರ ಜತೆ ನೆಲೆಸಿದ್ದರು.

ಪಬ್‌ನಲ್ಲಿ ಪ್ರಮುಖ ಆರೋಪಿ ಪರಿಚಯ!:

ಕಾಲೇಜು ವ್ಯಾಸಂಗ ಮಾಡುತ್ತಿದ್ದಾಗಲೇ ಆರೋಪಿಗಳು ಮದ್ಯದ ಚಟಕ್ಕೆ ಬಿದ್ದಿದ್ದರು. ವಾರದ ಕೊನೆ ದಿನ ಪಬ್‌ ಹಾಗೂ ಬಾರ್‌ಗಳಿಗೆ ಹೋಗುವ ಹವ್ಯಾಸ ಬೆಳೆಸಿಕೊಂಡಿದ್ದರು. ಆರೋಪಿಗಳು ಎರಡು ವರ್ಷದ ಹಿಂದೆ ಎಂ.ಜಿ.ರಸ್ತೆಯಲ್ಲಿರುವ ಪಬ್‌ಗೆ ಹೋಗಿದ್ದಾಗ ತಮಿಳುನಾಡು ಮೂಲದ ಅಶ್ವಿನ್‌ ಎಂಬಾತನ ಪರಿಚಯವಾಗಿತ್ತು.

ಡ್ರಗ್ ಮಾಫಿಯಾ ಕಿಂಗ್‌ಪಿನ್‌ ಶೇಖ್‌ನನ್ನು ಹಿಡಿಯಲು ಸಿಸಿಬಿ ಮಾಸ್ಟರ್ ಪ್ಲಾನ್

ಜಾನ್‌ ನಿಕೋಲಸ್‌ ಮತ್ತು ಇರ್ಫಾನ್‌ನನ್ನು ಆರೋಪಿ ಅಶ್ವಿನ್‌ ರೇವ್‌ ಪಾರ್ಟಿಗೆ ಕರೆದೊಯ್ಯುವುದನ್ನು ಕಲಿಸಿದ್ದ. ರೇವ್‌ ಪಾರ್ಟಿಯಲ್ಲಿ ಹಂತ-ಹಂತವಾಗಿ ಆರೋಪಿಗಳಿಗೆ ಮಾದಕ ದ್ರವ್ಯದ ನಶೆ ತೋರಿಸಿ ಚಟಕ್ಕೆ ಬೀಳಿಸಿದ್ದ. ಮಾದಕ ವಸ್ತು ಮಾರಾಟ ಮಾಡಿದರೆ, ಸುಲಭವಾಗಿ ಹಣ ಸಂಪಾದನೆ ಮಾಡಬಹುದು ಎಂದು ಹೇಳಿದ್ದ. ಹಣದ ಆಸೆಗೆ ಬಿದ್ದ ಆರೋಪಿಗಳು ಮಾದಕ ದ್ರವ್ಯ ಮಾರಾಟದ ದಂಧೆಗೆ ಇಳಿದಿದ್ದರು. ನಂತರ ಇರ್ಫಾನ್‌ ಮತ್ತು ನಿಕೋಲಸ್‌ ಪಾರ್ಟಿಗಳಿಗೆ ಹೋಗುತ್ತಿದ್ದಾಗಲೇ ಅಶ್ವಿನ್‌ ಮೂಲಕ ಡ್ರಗ್ಸ್‌ ಖರೀದಿಸುವರ ಸಂಪರ್ಕ ಬೆಳೆಸಿಕೊಂಡಿದ್ದರು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಡಾರ್ಕ್ನೆಟ್‌ನಿಂದ ಖರೀದಿ:

ಅಶ್ವಿನ್‌ಗೆ ಗೋವಾದಲ್ಲಿರುವ ಅಂತಾರಾಷ್ಟ್ರೀಯ ಡ್ರಗ್‌ ಪೆಡ್ಲರ್‌ಗಳ ಒಡನಾಟವಿದೆ. ಡಾರ್ಕ್ನೆಟ್‌ ವೆಬ್‌ ಮೂಲಕ ವಿದೇಶದಿಂದ ಜೆಲ್ಲಿ, ಪೆಪ್ಪರ್‌ಮೆಂಟ್‌ ರೂಪದಲ್ಲಿರುವ ಟಿಎಚ್‌ಸಿ (ಟೆಟ್ರಾ ಹೈಡ್ರೋ ಕೆನ್ನಾಬಿನೋಲ್‌), ಎಲ್‌ಎಸ್‌ಡಿ ಸ್ಟ್ರಿಫ್ಸ್‌, ಎಕ್ಸ್‌ಫಿಲ್ಸ್‌ ಮಾತ್ರೆ ಸೇರಿದಂತೆ ಇನ್ನಿತರ ಡ್ರಗ್ಸ್‌ಗಳನ್ನು ಖರೀದಿಸುತ್ತಿದ್ದ. ತಮಿಳುನಾಡಿನಲ್ಲಿದ್ದುಕೊಂಡೇ ಇರ್ಫಾನ್‌ ಮತ್ತು ನಿಕೋಲಸ್‌ಗೆ ಸರಬರಾಜು ಮಾಡುತ್ತಿದ್ದ.

ಆರೋಪಿಗಳಿಗೆ ಸಾಫ್ಟ್‌ವೇರ್‌ ಇಂಜಿನಿಯರ್‌, ಕಾಲೇಜು ವಿದ್ಯಾರ್ಥಿಗಳು ಕಾಯಂ ಗ್ರಾಹಕರಿದ್ದಾರೆ. ವ್ಯಾಟ್ಸ್‌ಆ್ಯಪ್‌ ಮೂಲಕ ಸಂಪರ್ಕಿಸುವ ಗ್ರಾಹಕರಿಗೆ ಕಾರಿನಲ್ಲಿ ತಂದು ಕೊಟ್ಟು ಹೋಗುತ್ತಿದ್ದರು. ಪಾರ್ಟಿಗಳಿಗೆ ಪೂರೈಕೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿಸಲಾಗಿದೆ. ಶಾಲಾ ಮಕ್ಕಳಿಗೂ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದರೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇಂತಹ ಜೆಲ್ಲಿ, ಪೆಪ್ಪರ್‌ಮೆಂಟ್‌ ಬಗ್ಗೆ ಪೋಷಕರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.

ಅನುಮಾನ ಬರದಿರಲು ಪೆಪ್ಪರ್‌ಮೆಂಟ್‌ ರೂಪ!

ವಿದೇಶದಲ್ಲಿ ಮರಿಜುವಾನಾ ಎನ್ನಲಾಗುವ ಗಾಂಜಾ ಹೂವಿನ ರಸದಿಂದ ಟಿಎಚ್‌ಸಿ ಡ್ರಗ್ಸ್‌ ತಯಾರಿಸಲಾಗುತ್ತಿದೆ. ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ ಜೆಲ್ಲಿ ಪೆಪ್ಪರ್‌ಮೆಂಟ್‌ನಲ್ಲಿ ಬೆರೆಸಿ ಪೂರೈಕೆ ಮಾಡುತ್ತಿದ್ದರು. ಒಮ್ಮೆ ಟಿಎಚ್‌ಸಿ ಸೇವಿಸಿದರೆ ಮೂರು ಗಂಟೆವರೆಗೂ ನಶೆ ಇರುತ್ತದೆ. ಇದನ್ನು ಅಶ್ವಿನ್‌ನಿಂದ ಟಿಎಚ್‌ಸಿ ಡ್ರಗ್ಸ್‌ ಬೆರೆಸಿದ 1 ಜೆಲ್ಲಿ ಪೆಪ್ಪರ್‌ಮೆಂಟ್‌ನ್ನು 1700 ಗೆ ಖರೀದಿಸುತ್ತಿದ್ದರು. ನಗರದಲ್ಲಿ ಎರಡು ಸಾವಿರದಿಂದ 2500ವರೆಗೆ ಮಾರಾಟ ಮಾಡುತ್ತಿದ್ದರು.