ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಜ್ಯುವೆಲರಿ ಶಾಪ್‌ಗಳ ಮತ್ತು ಅವುಗಳ ಮಾಲೀಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಬೆಂಗಳೂರು (ಫೆ.01): ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಜ್ಯುವೆಲರಿ ಶಾಪ್‌ಗಳ ಮತ್ತು ಅವುಗಳ ಮಾಲೀಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆಯಿಂದ ತಡರಾತ್ರಿವರೆಗೆ ನಗರದ 25ಕ್ಕೂ ಹೆಚ್ಚು ಜ್ಯುವೆಲರಿ ಶಾಪ್‌ಗಳ ಮತ್ತು ಅವುಗಳ ಮಾಲೀಕರ ಮನೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಪರಿಶೀಲನೆ ವೇಳೆ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಜಯನಗರ, ಶಂಕರಪುರ, ಬಸವನಗುಡಿ, ಯಶವಂತಪುರ, ಚಿಕ್ಕಪೇಟೆ ಸೇರಿದಂತೆ ನಗರದ ವಿವಿಧೆಡೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ತೆರಿಗೆ ವಂಚನೆ ಮಾಡಲಾಗಿದೆ ಎಂಬ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ದಾಖಲಾತಿ ಪರಿಶೀಲನೆ ವೇಳೆ ತೆರಿಗೆ ಪಾವತಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಅಲ್ಲದೇ, ವ್ಯವಹಾರದಲ್ಲಿನ ನಡೆಸಿರುವ ಹಣಕಾಸು ವಹಿವಾಟಿನಲ್ಲಿಯೂ ವ್ಯತ್ಯಾಸ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರಿಗಳಿಂದ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ. ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡುವಂತೆಯೂ ಸೂಚಿಸಲಾಗಿದೆ ಎಂದು ಹೇಳಲಾಗಿದೆ.

ರಾಜಸ್ಥಾನದಿಂದ ಗಾಂಜಾ ತಂದು ಮಾರಲೆತ್ನ: ನಗರದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ನಾಲ್ವರನ್ನು ಸಿ.ಟಿ.ಮಾರ್ಕೆಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಭರತ್‌ ಕುಮಾರ್‌, ರಾಕೇಶ್‌ ಕುಮಾರ್‌ ಅಲಿಯಾಸ್‌ ಸುನೀಲ್‌ ಪ್ರಜಾಪತ್‌, ಅನಿಲ್‌ ಸಿಂಗ್‌ ಹಾಗೂ ಮುಖೇಶ್‌ ಅಲಿಯಾಸ್‌ ಪುಷ್ಪಾಲ್‌ ಬಂಧಿತರಾಗಿದ್ದು, ಆರೋಪಿಗಳಿಂದ 4.250 ಕೇಜಿ ಗಾಂಜಾ, ಬೈಕ್‌ಗಳು ಹಾಗೂ ಹಣ ಸೇರಿ ಒಟ್ಟು .2 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಬಳೆಪೇಟೆ ಸರ್ಕಲ್‌ ಬಳಿ ಗಾಂಜಾ ಮಾರಾಟಕ್ಕೆ ಕೆಲವರು ಯತ್ನಿಸಿದ್ದರು. 

ಮೂರೂವರೆ ವರ್ಷದ ಬಾಲಕಿ ರೇಪ್‌, ಹತ್ಯೆ: ತಾಯಿಯ ಪ್ರಿಯತಮನಿಂದಲೇ ಕೃತ್ಯ

ಆಗ ಅನುಮಾನದ ಮೇರೆಗೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಮಾರಾಟ ಬಯಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಈ ನಾಲ್ವರು ರಾಜಸ್ಥಾನ ರಾಜ್ಯದವರಾಗಿದ್ದು, ಬಳೇಪಟ್ಟೆವ್ಯಾಪ್ತಿ ಅಂಗಡಿಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ಹಣದಾಸೆಗೆ ಗಾಂಜಾ ಮಾರಾಟಕ್ಕಿಳಿದಿದ್ದ ಇವರು, ತಮ್ಮೂರಿನಿಂದ ರೈಲಿನಲ್ಲಿ ಗಾಂಜಾ ತಂದು ನಗರದಲ್ಲಿ ಮಾರಲು ಮುಂದಾಗಿದ್ದರು. ಅಷ್ಟರಲ್ಲಿ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.