ಬೆಂಗಳೂರು(ಫೆ.12): ಎಟಿಎಂಗೆ ತುಂಬಿಸಬೇಕಿದ್ದ 64 ಲಕ್ಷ ದೋಚಿ ಪರಾರಿಯಾಗಿದ್ದ ಖಾಸಗಿ ಏಜೆನ್ಸಿ ವಾಹನ ಚಾಲಕ ಯೋಗೇಶ್‌, ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆಯಲ್ಲಿ ಪೊಲೀಸ್‌ ಠಾಣೆ ಪಕ್ಕದಲ್ಲೇ ಆರು ದಿನಗಳ ಕಾಲ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

ಫೆ.2ರಂದು ರಾಜಾಜಿನಗರದ ನವರಂಗ್‌ ಬಳಿ ಆಕ್ಸಿಸ್‌ ಬ್ಯಾಂಕ್‌ ಎಟಿಎಂಗೆ ಹಣ ತುಂಬಲು ಬಂದಾಗ ಎಟಿಎಂ ಘಟಕಗಳಿಗೆ ಹಣ ಪೂರೈಸುವ ಗುತ್ತಿಗೆ ಸಂಸ್ಥೆ ಸೆಕ್ಯುರ್‌ ಆ್ಯಂಡ್‌ ವ್ಯಾಲ್ಯುವ್‌ ಏಜೆನ್ಸಿ ವಾಹನ ಚಾಲಕ ಯೋಗೇಶ್‌ ಹಣ ದೋಚಿದ್ದ. ಅಂದು ಪ್ರಿಯತಮೆ ಜತೆ ನಗರ ತೊರೆದ ಆರೋಪಿ, ಸಂಬಂಧಿಕನ ಸಹಾಯದಿಂದ ಎಚ್‌.ಡಿ.ಕೋಟೆಯಲ್ಲಿ ಪೊಲೀಸ್‌ ಠಾಣೆ ಪಕ್ಕದಲ್ಲೇ ನೆಲೆಸಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆತನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಟು ಎಚ್‌.ಡಿ.ಕೋಟೆ:

ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಯೋಗೇಶ್‌, ದೊಡ್ಡಬಿದರಕಲ್ಲಿನಲ್ಲಿ ಪತ್ನಿ ಮತ್ತು ಮಕ್ಕಳ ಜತೆ ನೆಲೆಸಿದ್ದ. ಅದೇ ಏರಿಯಾದಲ್ಲೇ ತನ್ನ ಪ್ರಿಯತಮೆ ಸೋದರ ಅತ್ತೆ ಮಗಳಿಗೆ ಸಹ ಆತ ಮನೆ ಮಾಡಿಕೊಟ್ಟಿದ್ದ. ಫೆ.2ರಂದು ಎಟಿಎಂ ಹಣ ಕದ್ದ ಬಳಿಕ ಯೋಗೇಶ್‌, ಮನೆಗೆ ತೆರಳಿ .50 ಸಾವಿರ ನೀಡಿ, ನಾನು ಕೆಲದಿನಗಳು ಮನೆಗೆ ಬರುವುದಿಲ್ಲ ಎಂದು ಹೇಳಿ ಬಂದಿದ್ದ.

ಎಟಿಎಂಗೆ ತುಂಬಬೇಕಿದ್ದ 64 ಲಕ್ಷ ಕದ್ದು ಪ್ರಿಯತಮೆಯೊಂದಿಗೆ ಚಾಲಕ ಪರಾರಿ..!

ಅನಂತರ ಪ್ರಿಯತಮೆ ಜತೆ ಬಸ್ಸಿನಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ, ಮರುದಿನ ಶ್ರೀರಂಗಪಟ್ಟಣಕ್ಕೆ ಹೋಗಿದ್ದ. ಅಲ್ಲಿ ಸೋದರ ಸಂಬಂಧಿಯಾದ ವಕೀಲನನ್ನು ಸಂಪರ್ಕಿಸಿದ ಯೋಗೇಶ್‌, ತನಗೆ ಜಾಮೀನು ಕೊಡಿಸುವಂತೆ ಮನವಿ ಮಾಡಿ 15 ಲಕ್ಷ ಕೊಟ್ಟಿದ್ದ. ಕೊನೆಗೆ ಫೆ.4ರಂದು ಸಂಬಂಧಿಕನ ಸಹಾಯದಿಂದ ಎಚ್‌.ಡಿ.ಕೋಟೆ ಪಟ್ಟಣದಲ್ಲಿ ಆತನಿಗೆ ಬಾಡಿಗೆ ಮನೆ ಸಿಕ್ಕಿತು ಎಂದು ಪೊಲೀಸರು ತಿಳಿಸಿದ್ದಾರೆ.

ಯೋಗೇಶ್‌ ಬೆನ್ನಹತ್ತಿದ್ದ ಇನ್ಸ್‌ಪೆಕ್ಟರ್‌ ಸಂಜೀವೇಗೌಡ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಲತಾ ನೇತೃತ್ವದ ತಂಡವು, ಆರೋಪಿಯ ಸಂಬಂಧಿಕರ ಮೊಬೈಲ್‌ ಕರೆಗಳನ್ನು ಪರಿಶೀಲಿಸಿತು. ಆಗ ಆರೋಪಿ ಎಚ್‌.ಡಿ.ಕೋಟೆಯಲ್ಲಿರುವುದು ತಿಳಿಯಿತು ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅತ್ತೆ ಮಗಳ ಜತೆ 2ನೇ ಮದುವೆ

ತನ್ನ ಸೋದರ ಅತ್ತೆ ಮಗಳನ್ನು ಯೋಗೇಶ್‌ ಪ್ರೀತಿಸುತ್ತಿದ್ದ. ಆದರೆ ಕುಟುಂಬದವರ ಒಪ್ಪಿಗೆ ಸಿಗದ ಕಾರಣಕ್ಕೆ ಬಲವಂತವಾಗಿ ಬೇರೆ ಯುವತಿ ಜತೆ ಆತನ ವಿವಾಹವಾಗಿತ್ತು. ಇದೇ ರೀತಿ ಆತನ ಅತ್ತೆ ಮಗಳಿಗೂ ಮತ್ತೊಬ್ಬನ ಜತೆ ಮದುವೆ ಆಗಿತ್ತು. ಆದರೆ, ಮದುವೆ ಬಳಿಕವು ಅತ್ತೆ ಮಗಳ ಜತೆ ಸಂಪರ್ಕ ಮುಂದುವರೆಸಿದ್ದ ಯೋಗೇಶ್‌, 2013ರಲ್ಲಿ ತಿರುಪತಿಗೆ ಕರೆದೊಯ್ದು ಆಕೆಯೊಂದಿಗೆ ಎರಡನೇ ಮದುವೆಯಾಗಿದ್ದ. ಇದಾದ ಬಳಿಕ ಆಕೆ ಮೊದಲ ಗಂಡನಿಗೆ ವಿಚ್ಚೇದನ ಕೊಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

36 ಲಕ್ಷ ಜಪ್ತಿ

ಆರೋಪಿ ಕದ್ದಿದ್ದ 64 ಲಕ್ಷ ಹಣದಲ್ಲಿ 36 ಲಕ್ಷ ಜಪ್ತಿ ಮಾಡಲಾಗಿದೆ. ಇನ್ನುಳಿದ ಹಣದಲ್ಲಿ ವಕೀಲರು ಸೇರಿದಂತೆ ತನ್ನ ಪರಿಚಿತರಿಗೆ ಕೊಟ್ಟಿರುವುದಾಗಿ ಆರೋಪಿ ಹೇಳಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.