Asianet Suvarna News Asianet Suvarna News

Belagavi: ಸಿಸಿ ಕ್ಯಾಮೆರಾ ಇಲ್ಲದ್ದಕ್ಕೆ ಅಪರಾಧ ಕೃತ್ಯ ಹೆಚ್ಚಳ

ಪಟ್ಟಣದಲ್ಲಿ ಬಹುತೇಕ ವೃತ್ತ (ಸರ್ಕಲ್‌) ಹಾಗೂ ಪ್ರದೇಶದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸದೇ ಇರುವುದರಿಂದ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಅಪರಾಧ ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ.

Increase in crime due to lack of CC camera in Belagavi district gvd
Author
First Published Oct 10, 2022, 9:43 PM IST

ವಿಶೇಷ ವರದಿ

ಅಥಣಿ (ಅ.10): ಪಟ್ಟಣದಲ್ಲಿ ಬಹುತೇಕ ವೃತ್ತ (ಸರ್ಕಲ್‌) ಹಾಗೂ ಪ್ರದೇಶದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸದೇ ಇರುವುದರಿಂದ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಅಪರಾಧ ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇಷ್ಟಾದರೂ ಪಟ್ಟಣದಲ್ಲಿ ಅಧಿಕಾರಿಗಳು ಸಿಸಿ ಕ್ಯಾಮೆರಾ ಅಳವಡಿಕೆಗೆ ಹಿಂದೇಟು ಹಾಕುತ್ತಿರುವುದು ಸಾರ್ವಜನಿಕರ ಭದ್ರತೆ ಬಗ್ಗೆ ಮತ್ತಷ್ಟುಅನುಮಾನ ಹುಟ್ಟಿಸುವಂತಿದೆ. 1834ರಲ್ಲಿ ಸ್ಥಾಪನೆಗೊಂಡ ಅಥಣಿ ಪುರಸಭೆ ರಾಜ್ಯದ ಮೊಟ್ಟಮೊದಲ ಪುರಸಭೆಯಾಗಿದೆ. 27 ವಾರ್ಡ್‌ಗಳನ್ನು ಹೊಂದಿರುವ ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ 1.20 ಲಕ್ಷ ಜನಸಂಖ್ಯೆ ಹೊಂದಿದೆ. 

ಅಲ್ಲದೇ ಪಟ್ಟಣದ ಪ್ರಮುಖ ವೃತ್ತಗಳಲ್ಲಿ, ಮುಖ್ಯ ಬೀದಿಯಲ್ಲಿ ಮತ್ತು ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸದೆ ಇರುವುದರಿಂದ ಪಟ್ಟಣದಲ್ಲಿ ದಿನೇದಿನೇ ಕಳ್ಳತನ ಪ್ರಕರಣಗಳು, ಕಾನೂನುಬಾಹಿರವಾದ ನಿಯಮ ಉಲ್ಲಂಘನೆಗಳು, ಶರವೇಗದಲ್ಲಿ ಬರುತ್ತಿರುವ ವಾಹನಗಳಿಂದ ಅಪಘಾತ ಸೇರಿದಂತೆ ಘಟನೆಗಳು ನಡೆಯುತ್ತಿವೆ. ಆದರೂ ಪುರಸಭೆ ಮಾತ್ರ ತಮಗೆ ಏನೂ ಸಂಬಂಧವಿಲ್ಲ ಎಂಬಂತೆ ಮೌನವಹಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಅದರಲ್ಲೂ ಅಂಬೇಡ್ಕರ್‌ ವೃತ್ತ, ಬಸವೇಶ್ವರ, ಶಿವಯೋಗಿ, ಚೆನ್ನಮ್ಮ ವೃತ್ತ, ಬಸ್‌ ನಿಲ್ದಾಣ ಹಾಗೂ ಮಾರುಕಟ್ಟೆಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಇಲ್ಲದೇ ಇರುವುದು ಅಪರಾಧಿ ಕೃತ್ಯ ನಡೆಸುವವರಿಗೆ ಹೆಚ್ಚು ಅನುಕೂಲವಾದಂತಾಗಿದೆ.

ಯಡಿಯೂರಪ್ಪರನ್ನು ಕರ್ಕೊಂಡು ತಿರುಗಾಡಿದರೆ ಸಿಎಂ ಬೊಮ್ಮಾಯಿ ಅವರೇ ನೀವು ಲಗಾ ಒಗಿತೀರಿ: ಯತ್ನಾಳ್‌

ಪೊಲೀಸ್‌, ಪುರಸಭೆ ಅಲರ್ಟ್‌ ಇರಬೇಕು: ಪ್ರತಿ ಭಾನುವಾರ ಅಥಣಿ ಪಟ್ಟಣದಲ್ಲಿ ಸಂತೆ ಜರುಗುವುದರಿಂದ ಮುಖ್ಯ ಬೀದಿಯಲ್ಲಿ, ತರಕಾರಿ ಮಾರುಕಟ್ಟೆಯಲ್ಲಿ, ಮಹಾತ್ಮ ಗಾಂಧೀಜಿ ಮಾರುಕಟ್ಟೆಸೇರಿದಂತೆ ಎಪಿಎಂಸಿ ಆವರಣದಲ್ಲಿ ಜಾನುವಾರುಗಳ ಸಂತೆಗೆ ಗ್ರಾಮೀಣ ಪ್ರದೇಶಗಳಿಂದ ಸಾಕಷ್ಟುಜನರು ಬರುತ್ತಾರೆ. ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಒಬ್ಬಂಟಿಯಾಗಿ ತಿರುಗಾಡುವ ಮಹಿಳೆಯರು ಮತ್ತು ಸಾರ್ವಜನಿಕರು ಒಂದಿಲ್ಲ ಒಂದು ಸಮಸ್ಯೆಗೆ ಒಳಗಾಗುತ್ತಾರೆ. ಪ್ರಮುಖವಾಗಿ ತರಕಾರಿ ಮಾರುಕಟ್ಟೆಯಲ್ಲಿ ಬೆಲೆ ಬಾಳುವ ಮೊಬೈಲ್‌ ಮತ್ತು ಹಣ ಕಳ್ಳತನವಾಗುತ್ತದೆ. ಪಾರ್ಕಿಂಗ್‌ ಸಮಸ್ಯೆ ಇರುವುದರಿಂದ ರಸ್ತೆಬದಿಗೆ ನಿಲ್ಲಿಸಲಾಗಿರುವ ದ್ವಿಚಕ್ರ ವಾಹನಗಳು ಮಾಯವಾಗುತ್ತವೆ. 

ಜಾನುವಾರುಗಳ ಮಾರುಕಟ್ಟೆಯಲ್ಲಿ ರೈತಾಪಿ ಜನರ ತೋಟಗಳಿಂದ ಕದ್ದು ತಂದ ಜಾನುವಾರುಗಳನ್ನು ಮಾರಾಟ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಲದೆ ತಮ್ಮ ಜಾನುವಾರುಗಳನ್ನು ಮಾರಲು ಬರುವ ರೈತರಿಗೆ ದಲ್ಲಾಳಿಗಳು ಮತ್ತು ಮೋಸಗಾರರು ನಕಲಿ ನೋಟುಗಳನ್ನು ನೀಡಿ ಮುಗ್ಧ ರೈತರಿಗೆ ಮೋಸ ಗೊಳಿಸುತ್ತಿದ್ದಾರೆ. ಇತ್ತೀಚಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನರ್ಸ್‌ ವೇಷದಲ್ಲಿ ಬಂದ ಕಳ್ಳಿಯೊಬ್ಬಳು ಹಸುಗೂಸನ್ನು ಕಳ್ಳತನ ಮಾಡಿದ ಪ್ರಕರಣ ಸಾರ್ವಜನಿಕ ವಲಯದಲ್ಲಿ ಮತ್ತಷ್ಟುಆತಂಕ ಮೂಡಿಸಿತ್ತು. ಪೊಲೀಸರ ಚಾಣಕ್ಷತನದ ಕಾರ್ಯಾಚರಣೆಯಿಂದ ಕೇವಲ ಎರಡು ಗಂಟೆಯಲ್ಲಿ ಮಗು ಮತ್ತು ಕಳ್ಳಿಯನ್ನು ಪತ್ತೆಹಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. ಆದರೆ ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ಪೊಲೀಸ್‌ ಇಲಾಖೆ ಮತ್ತು ಪುರಸಭೆ ಆಡಳಿತ ಜಾಗೃತಿ ವಹಿಸಬೇಕಾದ ಅವಶ್ಯಕತೆ ಇದೆ.

ಸಾರ್ವಜನಿಕರ ಅಸಮಾಧಾನಕ್ಕೆ ಕಾರಣ: ಅಥಣಿ ಪಟ್ಟಣದಲ್ಲಿ ಆರ್‌ಟಿಒ ಆಫೀಸ್‌ ಮತ್ತು ಡಿವೈಎಸ್ಪಿ ಕಚೇರಿ ಸ್ಥಾಪನೆ ಆಗಿದ್ದರೂ ಕೂಡ ಯಾವುದೇ ಲಂಗು ಲಗಾಮಿಲ್ಲದೆ. ಸಾರಿಗೆಯ ನಿಯಮಗಳನ್ನು ಅನುಸರಿಸದೇ ಅನೇಕ ಗೂಡ್ಸ್‌ ವಾಹನಗಳು, ಓವರ್‌ ಲೋಡ್‌ ಟಿಪ್ಪರ್‌ಗಳು ಶರವೇಗದಲ್ಲಿ ಓಡಾಡುತ್ತಿವೆ. ಅನೇಕ ವ್ಯಾಪಾರಸ್ಥರು ತಮ್ಮ ಅಂಗಡಿಯ ಸಾಮಾನುಗಳನ್ನು ಫುಟ್‌ಪಾತ್‌ ಮೇಲೆ ಇಟ್ಟು ಮಾರಾಟ ಮಾಡುತ್ತಿರುವುದರಿಂದ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಮತ್ತು ಪಾದಚಾರಿಗಳಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇಂತಹ ಅನೇಕ ಸಮಸ್ಯೆಗಳಿಗೆ ಕಡಿವಾಣ ಹಾಕಬೇಕಾದ ಪುರಸಭೆ ಮೌನವಹಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರ ರಕ್ಷಣೆಗೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಇಲಾಖೆಗೆ ನೆರವಾಗುವ ದೃಷ್ಟಿಯಿಂದ ಪುರಸಭೆಯು ಮುಂದಾಗಬೇಕಾಗಿದೆ.

ಅಥಣಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಉದ್ದೇಶ ಹೊಂದಿದ್ದೇವೆ. ಈಗಾಗಲೇ ನಗರೋತ್ಥಾನ 3ನೇ ಹಂತದ ಉಳಿಕೆ ಹಣ .9 ಲಕ್ಷ ಮತ್ತು ಪುರಸಭೆ ಸಾಮಾನ್ಯ ನಿಧಿಯಿಂದ .20 ಲಕ್ಷಗಳ ಬಳಕೆಗಾಗಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೇಲಧಿಕಾರಿಗಳಿಂದ ಅನುಮೋದನೆ ಬಂದಕೂಡಲೇ ಸಿಸಿ ಕ್ಯಾಮೆರಾ ಅಳವಡಿಕೆ ಮತ್ತು ಟ್ರಾಫಿಕ್‌ ಸಿಗ್ನಲ್‌ ಅಳವಡಿಕೆ ಮಾಡಲಾಗುವುದು.
- ಈರಣ್ಣ ದಡ್ಡಿ, ಮುಖ್ಯಾಧಿಕಾರಿ, ಪುರಸಭೆ ಅಥಣಿ.

ಅಥಣಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅವಶ್ಯಕತೆ ಇದೆ. ಇದರಿಂದ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಪೊಲೀಸ್‌ ಇಲಾಖೆ ಸಿಬ್ಬಂದಿಗೆ ಸಾಕಷ್ಟುಅನುಕೂಲ ಆಗಲಿದೆ. ಕಳ್ಳತನ ಯಾವುದೇ ಗಲಾಟೆ ಸೇರಿದಂತೆ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಲಿದೆ. ಈ ಕುರಿತು ಪುರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು
-ಶ್ರೀಪಾದ ಜಲ್ದೆ, ಡಿವೈಎಸ್ಪಿ ಅಥಣಿ ವಲಯ.

Belagavi: ಡಬಲ್ ಮರ್ಡರ್‌ಗೆ ಬೆಚ್ಚಿಬಿದ್ದ ಸುಳೇಭಾವಿ: ಪೊಲೀಸ್ ಬಿಗಿ ಬಂದೋಬಸ್ತ್!

ಅಥಣಿ ಪಟ್ಟಣದಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದ್ದು, ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾ ಇಲ್ಲದೇ ಇರುವುದರಿಂದ ಕಳ್ಳತನ ಪ್ರಕರಣಗಳು, ವಾಹನ ಅಪಘಾತಗಳು ಹೆಚ್ಚಾಗುತ್ತಿವೆ. ಪುರಸಭೆ ಆಡಳಿತ ಮತ್ತು ಪೊಲೀಸ್‌ ಇಲಾಖೆಯ ಸಮನ್ವಯತೆಯಿಂದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದು ಅತಿ ಅವಶ್ಯಕವಾಗಿದೆ.
- ಪ್ರಶಾಂತ ತೋಡಕರ, ಅಧ್ಯಕ್ಷರು ಅಥಣಿ ಜಿಲ್ಲಾ ಹೋರಾಟ ಸಮಿತಿ.

Follow Us:
Download App:
  • android
  • ios