ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಪೆರೋಲ್ ನೀಡಲು ಹೈಕೋರ್ಟ್ ನಕಾರ

ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕುಖ್ಯಾತ ಅಪರಾಧಿ ಉಮೇಶ್ ರೆಡ್ಡಿಗೆ ಪೆರೋಲ್ ನೀಡಲು ಹೈಕೋರ್ಟ್ ನಿರಾಕರಿಸಿದೆ. ಅನಾರೋಗ್ಯದಿಂದ ನರಳುತ್ತಿರುವ ವೃದ್ಧ ತಾಯಿಯ ಆರೈಕೆ ಮಾಡಲು ಹಾಗೂ ಶಿಥಿಲಾವಸ್ಥೆಯಲ್ಲಿರುವ ಮನೆಯನ್ನು ರಿಪೇರಿ ಮಾಡಿಸಲು 30 ದಿನ ಪೆರೋಲ್‌ ನೀಡಬೇಕು ಎಂದು ಕೋರಿ ಉಮೇಶ್‌ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶಿಸಿದೆ.

High Court refuses to grant parole to pervert rapist umesh reddy rav

ಬೆಂಗಳೂರು (ಫೆ.28): ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕುಖ್ಯಾತ ಅಪರಾಧಿ ಉಮೇಶ್ ರೆಡ್ಡಿಗೆ ಪೆರೋಲ್ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಅನಾರೋಗ್ಯದಿಂದ ನರಳುತ್ತಿರುವ ವೃದ್ಧ ತಾಯಿಯ ಆರೈಕೆ ಮಾಡಲು ಹಾಗೂ ಶಿಥಿಲಾವಸ್ಥೆಯಲ್ಲಿರುವ ಮನೆಯನ್ನು ರಿಪೇರಿ ಮಾಡಿಸಲು 30 ದಿನ ಪೆರೋಲ್‌ ನೀಡಬೇಕು ಎಂದು ಕೋರಿ ಉಮೇಶ್‌ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶಿಸಿದೆ.

ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಕೈದಿಗಳಿಗೆ ಪೆರೋಲ್ ನೀಡಬೇಕಾದಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಜೈಲು ಅಧಿಕಾರಿಗಳು ಸಲ್ಲಿಸಿರುವ ದಾಖಲೆಗಳ ಪ್ರಕಾರ ಜೈಲಿನಿಂದ ಹೊರ ಬಂದಲ್ಲಿ ಹಳೆಯ ದ್ವೇಷದಿಂದ ಅರ್ಜಿದಾರನ ಜೀವಕ್ಕೆ ಅಪಾಯವಿದೆ. ಆತನೂ ಹಳೆಯ ದ್ವೇಷವನ್ನು ನೆನಪಿಸಿಕೊಳ್ಳಬಹುದು. ಅರ್ಜಿದಾರನ ತಾಯಿಯನ್ನು ಆತನ ಇಬ್ಬರು ಸಹೋದರರು ಆರೈಕೆ ಮಾಡುತ್ತಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ಮನೆಯ ರಿಪೇರಿ ವಿಚಾರವನ್ನು ಸಹೋದರರು ನೋಡಿಕೊಳ್ಳುತ್ತಾರೆ. ಅರ್ಜಿದಾರನಿಗೆ ಪೆರೋಲ್ ನೀಡಿದಲ್ಲಿ ಮತ್ತೆ ಅಪರಾಧ ಪ್ರವೃತ್ತಿಯನ್ನು ಹೊಂದಬಹುದು ಅಥವಾ ಕಾನೂನು ಸುವ್ಯವಸ್ಥೆಗೆ ಅಪಾಯವನ್ನುಂಟು ಮಾಡಬಹುದು. ಆದ್ದರಿಂದ ಅರ್ಜಿ ಪುರಸ್ಕರಿಸಲಾಗದು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ವಿವರ:

ಮರಡಿ ಸುಬ್ಬಯ್ಯ ಎಂಬುವವರ ಪತ್ನಿಯನ್ನು ಅತ್ಯಾಚಾರ ಹಾಗೂ ಕೊಲೆ ಮಾಡಿದ ಪ್ರಕರಣದಲ್ಲಿ 1998ರ ಮಾ. 2ರಂದು ಉಮೇಶ್‌ ರೆಡ್ಡಿ ಬಂಧನಕ್ಕೆ ಒಳಗಾಗಿದ್ದ. 2006ರಲ್ಲಿ ಆತನಿಗೆ ಅಧೀನ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಗಲ್ಲು ಶಿಕ್ಷೆಯನ್ನು 2009ರಲ್ಲಿ ಹೈಕೋರ್ಟ್‌ ಮತ್ತು 2011ರಲ್ಲಿ ಸುಪ್ರೀಂ ಕೋರ್ಟ್‌ ಪುರಸ್ಕರಿಸಿತ್ತು. ಉಮೇಶ್‌ ರೆಡ್ಡಿ ಕ್ಷಮಾದಾನ ಅರ್ಜಿಯನ್ನು 2011ರಲ್ಲಿ ಕರ್ನಾಟಕ ರಾಜ್ಯಪಾಲರು, ನಂತರ ರಾಷ್ಟ್ರಪತಿಗಳು ತಿರಸ್ಕರಿಸಿದ್ದರು. 

2022ರಲ್ಲಿ ಸುಪ್ರೀಂ ಕೋರ್ಟ್‌ ಗಲ್ಲು ಶಿಕ್ಷೆ ರದ್ದುಪಡಿಸಿ, ಯಾವುದೇ ಕ್ಷಮಾದಾನ ಇಲ್ಲದೆ 30 ವರ್ಷ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕಳೆದ 26 ವರ್ಷಳಿಂದ ಉಮೇಶ್‌ ರೆಡ್ಡಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
84 ವರ್ಷದ ತನ್ನ ತಾಯಿ ಅನಾರೋಗ್ಯದಿಂದ ನರಳುತ್ತಿದ್ದಾರೆ. ಮನೆ ಸಹ ಶಿಥಿಲಾವಸ್ಥೆಯಲ್ಲಿದ್ದು, ತಾಯಿಯ ಕಡೆಯ ದಿನಗಳಲ್ಲಿ ಆಕೆಯೊಂದಿಗೆ ಇರಲು 30 ದಿನ ಪೆರೋಲ್‌ ನೀಡಬೇಕು ಎಂದು ಕೋರಿ ಜೈಲಾಧಿಕಾರಿಗಳಿಗೆ ಉಮೇಶ್‌ ರೆಡ್ಡಿ ಮನವಿ ಪತ್ರ ಸಲ್ಲಿಸಿದ್ದನು. 

30 ವರ್ಷದವರೆಗೆ ಯಾವುದೇ ಕ್ಷಮದಾನ ನೀಡಬಾರದೆಂದು ಸುಪ್ರೀಂ ಕೋರ್ಟ್‌ ಆದೇಶಿರುವುದನ್ನು ಆಧರಿಸಿ, ಉಮೇಶ್‌ ರೆಡ್ಡಿಯ ಮನವಿಯನ್ನು ತಿರಸ್ಕರಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು 2023ರ ಸೆ. 23ರಂದು ಹಿಂಬರಹ ನೀಡಿದ್ದರು. ಇದರಿಂದ ಆತನ ಹೈಕೋರ್ಟ್‌ ಮೊರೆ ಹೋಗಿದ್ದ.

Latest Videos
Follow Us:
Download App:
  • android
  • ios