ಬೆಂಗಳೂರಿನಲ್ಲಿ ಜಿಮ್ ಟ್ರೈನರ್ ಆಗಿದ್ದ 26 ವರ್ಷದ ಕಿರಣ್, ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ಮನನೊಂದು ನೇಣಿಗೆ ಶರಣಾಗಿದ್ದಾರೆ.
ಬೆಂಗಳೂರು (ಫೆ.8): ಪ್ರೀತಿ ಎಂಬ ಎರಡಕ್ಷರದ ನಂಬಿಕೆಯೇ ಅವನ ಪಾಲಿಗೆ ಮೃತ್ಯುಪಾಶವಾಯಿತು. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಯುವತಿ ಕೈಕೊಟ್ಟಳು ಎಂಬ ನೋವಿನಲ್ಲೇ ಜಿಮ್ ಟ್ರೈನರ್ ಒಬ್ಬರು ಬದುಕಿಗೆ ವಿದಾಯ ಹೇಳಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕ
ಮೃತ ಯುವಕನನ್ನು 26 ವರ್ಷದ ಕಿರಣ್ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದ ಕಿರಣ್, ಕಳೆದ ಮೂರು ವರ್ಷಗಳಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಇಬ್ಬರ ನಡುವೆ ಗಾಢವಾದ ಸಂಬಂಧವಿತ್ತು. ಆದರೆ, ಇತ್ತೀಚೆಗೆ ಆ ಯುವತಿಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ತಾನು ಪ್ರೀತಿಸಿದ ಹುಡುಗಿ ಇನ್ನೊಬ್ಬನ ಪಾಲಾಗುತ್ತಿದ್ದಾಳೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಕಿರಣ್ ತೀವ್ರವಾಗಿ ನೊಂದಿದ್ದ ಎನ್ನಲಾಗಿದೆ.
ಕೊಠಡಿಯ ಬಾಗಿಲು ತೆರೆದಾಗ ಕಾದಿತ್ತು ಶಾಕ್
ಯುವತಿಗೆ ಮದುವೆ ನಿಶ್ಚಯವಾದ ವಿಷಯ ತಿಳಿದ ನಂತರ ಕಿರಣ್ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಯುವತಿ ಕೈಕೊಟ್ಟಳಲ್ಲ ಅಂತಾ ಮನನೊಂದು ಮನೆಗೆ ಬಂದವನೇ ರೂಮ್ ಒಳಗೆ ಹೋಗಿ ಡೂರ್ ಲಾಕ್ ಮಾಡಿಕೊಂಡಿದ್ದಾನೆ. ಇತ್ತ ಎಷ್ಟು ಹೊತ್ತಾದರೂ ಕಿರಣ್ ಬಾಗಿಲು ತೆಗೆಯದಿದ್ದಾಗ ಸಂಶಯಗೊಂಡ ಮನೆಯವರು ಬಾಗಿಲು ಮುರಿದು ಒಳಗೆ ಹೋದಾಗ, ಕಿರಣ್ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿರುವುದು ಕಂಡು ಶಾಕ್ ಆಗಿದ್ದಾರೆ. ಕುಟುಂಬಸ್ಥರಿಗೆ ಈ ದೃಶ್ಯ ನೋಡಿ ಆಕಾಶ ಕಳಚಿಬಿದ್ದಂತಾಗಿದೆ, ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೋಲಿಸರು
ವಿಷಯ ತಿಳಿಯುತ್ತಿದ್ದಂತೆಯೇ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸದೃಢ ದೇಹ ಹೊಂದಿದ್ದ, ನೂರಾರು ಮಂದಿಗೆ ಜಿಮ್ ತರಬೇತಿ ನೀಡುತ್ತಿದ್ದ ಯುವಕನೊಬ್ಬ ಪ್ರೇಮ ವೈಫಲ್ಯಕ್ಕಾಗಿ ಇಂತಹ ನಿರ್ಧಾರ ಕೈಗೊಂಡಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಗಮನಿಸಿ:
ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ದುಡುಕಿನಿಂದ ಆ8ಹತ್ಯೆಯ ನಿರ್ಧಾರ ತೆಗೆದುಕೊಳ್ಳುವುದರಿಂದ ಸಮಸ್ಯೆಗೆ ಯಾವುದೇ ಪರಿಹಾರ ಸಿಗಲ್ಲ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ ಸ್ವಯಂಹಾನಿ ಮಾಡಿಕೊಳ್ಳುವ ಯೋಚನೆ/ಮನೋವ್ಯಥೆ ಅನುಭವಿಸುತ್ತಿದ್ದರೆ ಅಥವಾ ಸಂಕಷ್ಟದ ಸ್ಥಿತಿಯಲ್ಲಿದ್ದರೆ, ದಯವಿಟ್ಟು ಯಾರೊಂದಿಗಾದರೂ ಮಾತನಾಡಿ, ಅದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಕರ್ನಾಟಕದಲ್ಲಿ ಸಹಾಯ ಮತ್ತು ಸಮಾಲೋಚನೆಗಾಗಿ ಕೆಳಗಿನ ಸೇವೆಗಳು ಲಭ್ಯವಿವೆ: 24×7 ಮಾನಸಿಕ ಆರೋಗ್ಯ ಸಹಾಯವಾಣಿ ಟೆಲಿ-ಮಾನಸ್ (Tele-MANAS): 14416 ಅಥವಾ 1800-89-14416 (ರಾಷ್ಟ್ರೀಯ ಟೆಲಿ-ಮಾನಸಿಕ ಆರೋಗ್ಯ ಸೇವೆ). ಇದೆ ಸಂಪರ್ಕಿಸಿ.



