ಹಿರೇಕೇರೂರು ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ವಿದ್ಯುತ್ ಶಾಕ್‌ನಿಂದ 12 ವರ್ಷದ ಬಾಲಕ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಶಾಲಾ ಆವರಣದ ಮೇಲೆ ಬಿದ್ದ ತೆಂಗಿನ ಮರದಿಂದ ಈ ದುರ್ಘಟನೆ ಸಂಭವಿಸಿದೆ.
ಹಾವೇರಿ (ಜುಲೈ.25): ಹಿರೇಕೇರೂರು ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶುಕ್ರವಾರ ಮಧ್ಯಾಹ್ನ ಮೃತ್ಯುಂಜಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಂಭವಿಸಿದ ದುರಂತದಲ್ಲಿ ವಿದ್ಯುತ್ ಶಾಕ್ ಹೊಡೆದು 12 ವರ್ಷದ ಮಹಮ್ಮದ್ ಶಾ ಗೌಸ್ ರಟ್ಟಿಹಳ್ಳಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜೊತೆಗೆ, ಇಬ್ಬರು ಬಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ವಿದ್ಯುತ್ ಆಘಾತದಿಂದ ನಿಸ್ತೇಜನಾಗಿ ಬಿದ್ದಿದ್ದ ಬಾಲಕನನ್ನು ರಕ್ಷಿಸಲು ಸ್ಥಳೀಯರು ಒಣ ಕಟ್ಟಿಗೆ ಮತ್ತು ಕೋಲುಗಳನ್ನು ಹಿಡಿದು ಹರಸಾಹಸ ಪಡುತ್ತಿರುವುದು ಕಂಡುಬರುತ್ತದೆ. ಶಾಲಾ ಆವರಣದ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿಯ ಮೇಲೆ ಬೃಹತ್ ತೆಂಗಿನ ಮರ ಬಿದ್ದ ಪರಿಣಾಮ, ತಂತಿಗಳು ನೆಲಕ್ಕೆ ತಗುಲಿವೆ. ಇದೇ ವೇಳೆ ಅಲ್ಲಿ ಆಟವಾಡುತ್ತಿದ್ದ ಬಾಲಕರಿಗೆ ವಿದ್ಯುತ್ ಶಾಕ್ ಹೊಡೆದಿದೆ.
ಈ ದುರ್ಘಟನೆ ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ವಿಡಿಯೋ ಸಾರ್ವಜನಿಕರಲ್ಲಿ ಆಘಾತ ಮೂಡಿಸಿದೆ. ವಿದ್ಯುತ್ ತಂತಿಗಳ ನಿರ್ವಹಣೆಯಲ್ಲಿನ ನಿರ್ಲಕ್ಷ್ಯದ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
