ಕುಖ್ಯಾತ ದಂತಚೋರ ವೀರಪ್ಪನ್‌ನಿಗೆ ಮಾಂಬಟ್ಟಿಯಾನ್ ಎಂಬ ಕೊಲೆಗಾರನೇ ಗುರುವಾಗಿದ್ದ. ೧೯೫೭ರಲ್ಲಿ ಹಲವು ಕೊಲೆಗಳನ್ನು ಮಾಡಿ ತಲೆಮರೆಸಿಕೊಂಡಿದ್ದ ಮಾಂಬಟ್ಟಿಯಾನ್‌ನನ್ನು ಸರ್ಕಾರ ಬಹುಮಾನ ಘೋಷಿಸಿ ಹಿಡಿದಿತ್ತು. ಇದರಿಂದ ಪ್ರೇರಿತನಾದ ವೀರಪ್ಪನ್, ಮಾಂಬಟ್ಟಿಯಾನ್‌ನನ್ನೇ ಆದರ್ಶವಾಗಿಟ್ಟುಕೊಂಡು ಅಪರಾಧ ಜಗತ್ತಿನಲ್ಲಿ ಕುಖ್ಯಾತಿ ಗಳಿಸಿದ.
ತಮಿಳುನಾಡು ಸತ್ಯಮಂಗಲದ ದಟ್ಟ ಕಾಡಿನಲ್ಲಿ ಅಡಗಿ ಕುಳಿತು, ಸರ್ಕಾರ ಹಾಗೂ ಸಮಾಜಕ್ಕೆ ಕಂಟಕನಾಗಿದ್ದವನು ವೀರಪ್ಪನ್. 1952ರಲ್ಲಿ ಜನಿಸಿದ್ದ ವೀರಪ್ಪನ್ (Veerappan) 2004ರಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಆದರೆ, ಬದುಕಿರುವಷ್ಟೂ ದಿನಗಳು ಆತ ಮಾಡಿದ ಅಪರಾಧಗಳು, ಕೊಲೆಗಳು, ಆಸ್ತಿಪಾಸ್ತಿ ನಷ್ಟಗಳು ಅಸಂಖ್ಯಾತ ಎಂಬುದು ಬಹುತೇಕರಿಗೆ ಗೊತ್ತು. ಡಾ ರಾಜ್‌ಕುಮಾರ್ ಅವರನ್ನು ಅಪಹರಿಸಿ ಕರ್ನಾಟಕ ಸರ್ಕಾರಕ್ಕೆ ಕೂಡ ತಲನೋವಾಗಿದ್ದ ವೀರಪ್ಪನ್. ಇಂಥ ವೀರಪ್ಪನ ಬಗ್ಗೆ ಒಂದು ಅಚ್ಚರಿಯ ಸಂಗತಿ ಇದೀಗ ಬಹಿರಂಗವಾಗಿದೆ. ಅದೇನು ನೋಡಿ...
ಹೌದು, ಕುಖ್ಯಾತ ಕೊಲೆಗಾರ, ದಂತಚೋರ, ಪಾತಕಿ ವೀರಪ್ಪನ್ ಮಾಡಿರುವ ಕೊಲೆಗಳು ಬಹಳಷ್ಟು. ಇಂಥ ವೀರಪ್ಪನ್ ಯಾರನ್ನು ತನ್ನ ಗುರು ಎಂದುಕೊಂಡಿದ್ದ ಗೊತ್ತೇ? ಸಾಮಾನ್ಯವಾಗಿ ಒಳ್ಳೆಯ ವಿದ್ಯೆಬುದ್ಧಿ ಕಲಿಯಲು ಗುರುಗಳನ್ನು ಆಶ್ರಯಿಸುತ್ತಾರೆ, ಅವಲಂಬಿಸುತ್ತಾರೆ ಹಾಗೂ ಹಿಂಬಾಲಿಸಿ ಫಾಲೋಮಾಡುತ್ತಾರೆ. ಆದರೆ, ವೀರಪ್ಪನ್ ತಾನು ಮಾಡುತ್ತಿದ್ದ ಕೆಟ್ಟ ಕೆಲಸಕ್ಕೆ ಕೂಡ ಒಬ್ಬ ಗುರುಗಳನ್ನು ಆರಾಧಿಸುತ್ತ ಪ್ರೇರಣೆ ಪಡೆದಿದ್ದ ಎನ್ನಲಾಗಿದೆ.
ವೀರಪ್ಪನ್‌ಗೆ ಕೂಡ ಗುರುಗಳು ಇದ್ರು ಅಂದ್ರೆ ಯಾರೂ ಕೂಡ ನಂಬಲಿಕ್ಕೇ ಅಸಾಧ್ಯ. ತಮಿಳುನಾಡಿನ ಮೆಟ್ಟೂರು ಡ್ಯಾಮ್‌ಗೆ ಹತ್ತಿರ ಇರುವಂಥ ಮೆಚೂರಿ ಗ್ರಾಮದಲ್ಲಿ ಅಯ್ಯನ್ ದೊರೈ ಅಲಿಯಾಸ್ ಮಾಂಬಟ್ಟಿಯಾನ್ ಅನ್ನೋ ವ್ಯಕ್ತಿಯೊಬ್ಬನಿದ್ದ. ಈತನೇ ವೀರಪ್ಪನ್‌ಗೆ ಬಹಳಷ್ಟು ಸ್ಪೂರ್ತಿಯಾಗಿದ್ದನಂತೆ. ಅದು ಹೇಗೆ ಗೊತ್ತಾ? ಆತನ ತಂದೆಯ ಪ್ರಾಣ ತೆಗೆದ ಕಿಡಿಗೇಡಿಗಳ ಪ್ರಾಣವನ್ನು ತೆಗೆದು ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ. 1957, ಮೇ 30ರ ಒಂದೇ ದಿನದಲ್ಲಿ ಬಹಳಷ್ಟು ಜನರ ಜೀವ ತೆಗೆದು ತಾನು ತಲೆಮರೆಸಿಕೊಂಡಿದ್ದ.
ಈ ಘಟನೆಯಿಂದ ಅಂದು ಇಡೀ ತಮಿಳುನಾಡು ಸರ್ಕಾರ ದಿಗ್ಭ್ರಮೆಗೆ ಒಳಗಾಗಿತ್ತು. ಆತನ ಪತ್ತೆಗೆ ಆಗ ವಿಶೇಷ ತನಿಖಾ ದಳ ಕೂಡ ರಚನೆ ಮಾಡಿತ್ತು ತಮಿಳುನಾಡು ಸರ್ಕಾರ. ಆದರೆ, ಆತ ಯಾರಿಗೂ ಸಿಗಲೇ ಇಲ್ಲ. ಕೊನೆಗೆ ಅನಿವಾರ್ಯವಾಗಿ ಅಂದು ಆತನನ್ನು ಯಾರು ಹುಡುಕಿಕೊಡುತ್ತಾರೋ ಅವ್ರಿಗೆ 5000 ರೂಪಾಯಿ ನಗದು, 5 ಎಕರೆ ಜಮೀನು ಹಾಗೂ ಹೊಗೇನಕಲ್‌ನಲ್ಲಿ ಮೀನು ಹಿಡಿಯೋ ಲೈಸೆನ್ಸು ಹಾಗೂ ಜೊತೆಗೊಂದು ಬಂದೂಕನ್ನು ಕೂಡ ಸರ್ಕಾರ ಬಹುಮಾನ ಕೊಡುವುದಾಗಿ ತಮಿಳುನಾಡು ಸರ್ಕಾರ ಘೋಷಣೆ ಮಾಡಿತ್ತು.
ಕೊನೆಗೆ, ಬಹುಮಾನದ ಆಸೆಗೆ ಆ ಮಾಂಬಟ್ಟಿಯಾನ್ ಎಂಬವನನ್ನು ಯಾರೋ ಒಬ್ಬ ಸರ್ಕಾರಕ್ಕೆ ಹಿಡಿದುಕೊಟ್ಟ. ಹೀಗಾಗಿ ದಂತಚೋರ, ಕುಖ್ಯಾತ ರೌಡಿ ವೀರಪ್ಪನ್ ಆ ಮಾಂಬಟ್ಟಿಯಾನ್ ನನ್ನು ತನ್ನ ರೋಲ್ ಮಾಡೆಲ್ ಮಾಡಿಕೊಂಡುಬಿಟ್ಟಿದ್ದ. ಆತನೇ ನನ್ನ ಗುರು ಎಂದು ಕಂಡಕಂಡವರೊಡನೆ ಹೇಳುತ್ತಿದ್ದನಂತೆ ವೀರಪ್ಪನ್. ಜೀವನದಲ್ಲಿ ಕೂಡ ಆತನಂತೆ ಬಹಳಷ್ಟು ಕೊಲೆ ಮಾಡಿ, ಸರ್ಕಾರದ ಕಣ್ಣಿಗೇ ಮಣ್ಣೆರಚಿ ಹಲವು ವರ್ಷಗಳ ಕಾಲ ಸಮಾಜಕ್ಕೆ ಕಂಟಕನಾಗಿದ್ದ ವೀರಪ್ಪನ್.
