Breaking: ನಾಲ್ವರು ಐಸಿಸ್ ಸಹಚರರ ಬಂಧಿಸಿದ ಗುಜರಾತ್ ಎಟಿಎಸ್ : ಮತ್ತೊಬ್ಬ ಆತಂಕವಾದಿಗಾಗಿ ಶೋಧ
ಗುಜರಾತ್ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕರಾವಳಿ ಪಟ್ಟಣವಾದ ಪೋರಬಂದರ್‌ನಲ್ಲಿ ಐಸಿಸ್ ಮಾಡ್ಯೂಲ್ ಅನ್ನು ಯಶಸ್ವಿಯಾಗಿ ಭೇದಿಸಿದೆ.
ಪೋರಬಂದರ್ (ಗುಜರಾತ್) (ಜೂನ್ 10, 2023): ದೇಶದಲ್ಲಿ ಉಗ್ರ ಚಟುವಟಿಕೆಗಳು ಆಗಾಗ್ಗೆ ವರದಿಯಾಗುತ್ತಲೇ ದೆ. ಹಾಗೂ, ಪೊಲೀಸರು, ಸೇನೆ ಸಹ ಅನೇಕ ಉಗ್ರರನ್ನು ಬಂಧಿಸುತ್ತಲೇ ಇರುತ್ತಾರೆ. ಇನ್ನೊಂದೆಡೆ, ದೇಶದಲ್ಲಿ ಐಸಿಸ್ ಉಗ್ರರ ಉಪಟಳವೂ ಹೆಚ್ಚಾಗಿದೆ.
ಇದೇ ರೀತಿ, ಗುಜರಾತ್ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕರಾವಳಿ ಪಟ್ಟಣವಾದ ಪೋರಬಂದರ್‌ನಲ್ಲಿ ಐಸಿಸ್ ಮಾಡ್ಯೂಲ್ ಅನ್ನು ಯಶಸ್ವಿಯಾಗಿ ಭೇದಿಸಿದೆ. ಸೂರತ್‌ನ ಸುಮೇರಾ ಎಂಬ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಶಂಕಿತನನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಇದನ್ನು ಓದಿ: ಸಿರಿಯಾದಲ್ಲಿ ಮತ್ತೆ ಐಸಿಸ್ ಅಟ್ಟಹಾಸ: ಕುರಿಗಾಹಿಗಳು ಸೇರಿ ಕನಿಷ್ಠ 31 ಜನರ ಹತ್ಯೆ
ಬಂಧಿತ ಆರೋಪಿಗಳನ್ನು ಉಬೈದ್ ನಾಸಿರ್ ಮಿರ್, ಹನಾನ್ ಹಯಾತ್ ಶಾಲ್, ಮೊಹಮ್ಮದ್ ಹಾಜಿಮ್ ಶಾ (ಮೂವರೂ ಕಾಶ್ಮೀರದವರು) ಮತ್ತು ಸುಮೇರಾ ಬಾನು (ಸೂರತ್‌ನವರು) ಎಂದು ಗುರುತಿಸಲಾಗಿದೆ. ಈ ಮಧ್ಯೆ, ಸೂರತ್ ನಿವಾಸಿ ಜುಬೈರ್ ಅಹ್ಮದ್ ಮುನ್ಷಿಗಾಗಿ ಎಟಿಎಸ್ ಇನ್ನೂ ಹುಡುಕಾಟ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ISIS ಜೊತೆ ಲಿಂಕ್
ವರದಿಗಳ ಪ್ರಕಾರ, ಬಂಧಿತ ನಾಲ್ವರು ಐಸಿಸ್ ಸಕ್ರಿಯ ಗುಂಪಿನ ಸದಸ್ಯರು. ನಾಲ್ವರೂ ತಮ್ಮ ಹ್ಯಾಂಡ್ಲರ್ ಅಬು ಹಮ್ಜಾನ ಸಹಾಯದಿಂದ ಇಸ್ಲಾಮಿಕ್ ಸ್ಟೇಟ್ ಆಫ್ ಖೊರಾಸನ್ ಪ್ರಾವಿನ್ಸ್ (ISKP) ಗೆ ಸೇರಲು ಸಮುದ್ರದ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ದಾಳಿಯ ಸಮಯದಲ್ಲಿ ATS ಅನೇಕ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡಿದೆ ಮತ್ತು ISKP ಯ ಚಾಕುಗಳನ್ನು ಅವರ ಬಳಿ ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಂಗಳೂರು, ಕೊಯಮತ್ತೂರು ಬಾಂಬ್ ಸ್ಫೋಟ ಕೇಸ್: ಐಸಿಸ್ ಕೈವಾಡದ ಬಗ್ಗೆ ತನಿಖೆ
ಇನ್ನು, ಬಂಧಿತ ವ್ಯಕ್ತಿಗಳು ಐಸಿಸ್ ಉಗ್ರಗಾಮಿ ಘಟಕದ ಭಾಗವಾಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಕಳೆದ ಒಂದು ವರ್ಷದಿಂದ ಅವರು ಪರಸ್ಪರ ಸಂಪರ್ಕದಲ್ಲಿದ್ದು, ಉಗ್ರ ಸಂಘಟನೆ ಸೇರಲು ಪರಾರಿಯಾಗಲು ಯೋಜನೆ ರೂಪಿಸಿದ್ದರು. ಅವರ ಮೂಲಭೂತೀಕರಣವು ಪಾಕಿಸ್ತಾನದ ಗಡಿಯುದ್ದಕ್ಕೂ ಇರುವ ಹ್ಯಾಂಡ್ಲರ್‌ಗಳ ಪ್ರಭಾವದ ಅಡಿಯಲ್ಲಿ ಸಂಭವಿಸಿದೆ ಎಂದೂ ತಿಳಿದುಬಂದಿದೆ.
ಮುಂದುವರಿದ ಕಾರ್ಯಾಚರಣೆ
ಡಿಐಜಿ ದೀಪನ್ ಭದ್ರನ್ ಮತ್ತು ಎಸ್ಪಿ ಸುನೀಲ್ ಜೋಶಿ ನೇತೃತ್ವದಲ್ಲಿ ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ ನಡೆಯುತ್ತಲೇ ಇದೆ. ಈ ಎಟಿಎಸ್ ತಂಡ ಶಂಕಿತರ ಚಟುವಟಿಕೆಗಳನ್ನು ಹಾಗೂ ಅವರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಬಿಜೆಪಿಯ ಪ್ರಮುಖ ರಾಜಕೀಯ ನಾಯಕನ ಹತ್ಯೆಗೆ ಸ್ಕೆಚ್: ರಷ್ಯಾದಲ್ಲಿ ಐಸಿಸ್ ಉಗ್ರ ವಶಕ್ಕೆ