Govindegowda house theft case: ಮಾಜಿ ಸಚಿವ ಗೋವಿಂದೇಗೌಡರ ಮನೆಯಲ್ಲಿ ಕಳ್ಳತನ ಮಾಡಿದ್ದ ನೇಪಾಳ ಮೂಲದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಚ್ಚರಿಯೆಂದರೆ, ಎರಡು ತಿಂಗಳು ಪೊಲೀಸ್ ಠಾಣೆ ಆವರಣದಲ್ಲೇ ನಿಂತಿದ್ದ ಕಾರಿನ ಸ್ಟೆಪ್ನಿ ಜಾಗದಲ್ಲಿ ಸುಮಾರು 600 ಗ್ರಾಂ ಚಿನ್ನ, ಬೆಳ್ಳಿ ಹಾಗೂ ನಗದು ಪತ್ತೆ

ಚಿಕ್ಕಮಗಳೂರು (ನ.6): ಕೊಪ್ಪ ತಾಲೂಕು ಹರಂದೂರು ಗ್ರಾಮದಲ್ಲಿರುವ ಮಲೆನಾಡ ಗಾಂಧಿ ಮಾಜಿ ಸಚಿವ ದಿ. ಗೋವಿಂದೇಗೌಡರವರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಅಚ್ಚರಿ ಘಟನೆ ನಡೆದಿದೆ. 2 ತಿಂಗಳು ಪೊಲೀಸ್ ಸ್ಟೇಷನ್ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಕಾರಿನಲ್ಲೇ ಅರ್ಧ ಕೆಜಿ ಚಿನ್ನ ಪತ್ತೆಯಾಗಿದೆ.

ಕೆಲಸಕ್ಕೆ ಸೇರಿದ ಹದಿನೈದು ದಿನದಲ್ಲೇ ಕಳ್ಳತನ:

ಹೌದು. ಕಳ್ಳತನ ನಡೆಯುವ ಹದಿನೈದು ದಿನದ ಹಿಂದೆಯಷ್ಟೇ ನೇಪಾಳ ಮೂಲದ ಮೂವರು ಗೋವಿಂದೇಗೌಡರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಕೆಲಸಕ್ಕೆ ಸೇರಿ ಕೇವಲ ಹದಿನೈದು ದಿನದಲ್ಲಿ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದ ಗ್ಯಾಂಗ್. ಈ ಬಗ್ಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಚುರುಕು ಕಾರ್ಯಾಚರಣೆ ನಡೆಸಿದ ಪೊಲೀಸರು, ಮಹಾರಾಷ್ಟ್ರದ ಬಳಿ ಎರಡು ಕಾರಿನ ಸಮೇತ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಎರಡು ತಿಂಗಳು ಕಾರಿನಲ್ಲೇ ಇದ್ದ ಅರ್ಧ ಕೆಜಿ ಚಿನ್ನ!

ಪೊಲೀಸ್ ಸೀಜ್ ಮಾಡಿದ್ದ ಕಾರುಗಳನ್ನ ಪೊಲೀಸ್ ಠಾಣೆಯ ಕಾಂಪೌಂಡ್‌ನಲ್ಲಿ ನಿಲ್ಲಿಸಲಾಗಿತ್ತು. ಇತ್ತು ಆರೋಪಿಗಳ ವಿಚಾರಣೆ ನಡೆಸಿದ್ದ ಪೊಲೀಸರು. ವಿಚಾರಣೆ ವೇಳೆ ಚಿನ್ನ ನಗದು ಹಣ ಇರುವ ಬಗ್ಗೆ ಮೊದಲು ಬಾಯಿಬಿಟ್ಟಿರಲಿಲ್ಲ ಖದೀಮರು. ಪೊಲೀಸರು ತೀವ್ರ ವಿಚಾರಣೆ ಬಳಿಕ ಕಾರಿನಲ್ಲಿರುವ ಬಗ್ಗೆ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಎರಡು ತಿಂಗಳ ಕಾಂಪೌಂಡ್‌ ಒಳಗೆ ನಿಂತಿದ್ದ ಕಾರಿನಲ್ಲೇ ಚಿನ್ನಾಭರಣ, ಹಣ ಇಟ್ಟಿರುವುದಾಗಿ ಒಪ್ಪಿಕೊಂಡ ಖದೀಮರು. ಪೊಲೀಸರು ಕಾರು ಪರಿಶೀಲನೆ ನಡೆಸಿದಾಗ ಕಾರಿನ ಸ್ಟೆಪ್ನಿ ಜಾಗದಲ್ಲಿ 600 ಗ್ರಾಂ ಚಿನ್ನ, 600 ಗ್ರಾಂ ಬೆಳ್ಳಿ, 3 ಲಕ್ಷ 41 ಸಾವಿರ ರೂಪಾಯಿಯ ದುಡ್ಡಿನ ಚೀಲ ಪತ್ತೆಯಾಗಿದೆ. 

ಈ ಪ್ರಕರಣದಿಂದಾಗಿ ಮಲೆನಾಡ ಪ್ರದೇಶದಲ್ಲಿ ಆಘಾತ ಮೂಡಿಸಿದೆ. ಮನೆ ಕೆಲಸದವರ ಹಿನ್ನೆಲೆ ಪರಿಶೀಲಿಸದೆ ಕೆಲಸಕ್ಕೆ ಸೇರಿಸಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಈ ಪ್ರಕರಣ ತಾಜಾ ನಿದರ್ಶನವಾಗಿದೆ.