Asianet Suvarna News Asianet Suvarna News

ಜಿಎಸ್‌ಟಿ ಅಧಿಕಾರಿಗಳ ಸೋಗಿನಲ್ಲಿ ಚಿನ್ನ ಕದ್ದು ಪರಾರಿಯಾಗಲು ಯತ್ನ: ಸಿನಿಮಾ ಶೈಲಿಯಲ್ಲಿ ದರೋಡೆಕೋರರು ಅರೆಸ್ಟ್!

ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಅಧಿಕಾರಿಗಳ ಸೋಗಿನಲ್ಲಿ ಚಿನ್ನದಂಗಡಿಯಲ್ಲಿ ಹಾಲ್‌ ಮಾರ್ಕ್‌ ಪರಿಶೀಲಿಸುವ ನೆಪದಲ್ಲಿ ಚಿನ್ನಾಭರಣ ದರೋಡೆ ಮಾಡಿ ಪರಾರಿ ಆಗುತ್ತಿದ್ದ ನಾಲ್ವರು ಅಂತಾರಾಜ್ಯ ದರೋಡೆಕೋರರನ್ನು ಚಿನ್ನದಂಗಡಿ ನೌಕರ ಹಾಗೂ ಕೆ.ಆರ್‌.ಪುರ ಠಾಣೆ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ.

Gold robbery in the guise of GST officials Accused arrested in bengaluru rav
Author
First Published Jan 30, 2024, 7:01 AM IST | Last Updated Jan 30, 2024, 7:01 AM IST

ಬೆಂಗಳೂರು (ಜ.30) : ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಅಧಿಕಾರಿಗಳ ಸೋಗಿನಲ್ಲಿ ಚಿನ್ನದಂಗಡಿಯಲ್ಲಿ ಹಾಲ್‌ ಮಾರ್ಕ್‌ ಪರಿಶೀಲಿಸುವ ನೆಪದಲ್ಲಿ ಚಿನ್ನಾಭರಣ ದರೋಡೆ ಮಾಡಿ ಪರಾರಿ ಆಗುತ್ತಿದ್ದ ನಾಲ್ವರು ಅಂತಾರಾಜ್ಯ ದರೋಡೆಕೋರರನ್ನು ಚಿನ್ನದಂಗಡಿ ನೌಕರ ಹಾಗೂ ಕೆ.ಆರ್‌.ಪುರ ಠಾಣೆ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ.

ಕೇರಳದ ಎರ್ನಾಕುಲಂ ಜಿಲ್ಲೆಯ ಸಂಬತ್ ಕುಮಾರ್ ಅಲಿಯಾಸ್ ಸಂಪತ್ (55), ಕೇರಳದ ತ್ರಿಶೂರ್ ಜಿಲ್ಲೆಯ ಜೋಶಿ (54), ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಸಂದೀಪ್ ಶರ್ಮಾ (48) ಮತ್ತು ಅವಿನಾಶ್ ಕುಮಾರ್ (27) ಬಂಧಿತರು. ಆರೋಪಿಗಳಿಂದ ಸುಮಾರು ₹80 ಲಕ್ಷ ಮೌಲ್ಯದ 1.24 ಕೇಜಿ ತೂಕದ ಚಿನ್ನಾಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಇನೋವಾ ಕ್ರಿಸ್ಟಾ ಕಾರು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ರವಿ ಎಂಬಾತ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರ್ತಡೇ ಪಾರ್ಟಿ ವೇಳೆ ಸ್ನೇಹಿತರ ನಡುವೆ ಗಲಾಟೆ, ಕೊಲೆಯಲ್ಲಿ ಅಂತ್ಯ!

ಏನಿದು ಪ್ರಕರಣ?:

ಕೆ.ಆರ್.ಪುರದ ಭಟ್ಟರಹಳ್ಳಿ ಆರ್‌ಎಂಎಸ್ ಕಾಲೋನಿಯಲ್ಲಿ ಮೋಹನ್ ಲಾಲ್‌ ಮಾಲೀಕತ್ವದ ಮಹಾಲಕ್ಷ್ಮಿ ಜುವೆಲ್ಲರಿ ಅಂಗಡಿ ಇದೆ. ಈ ಅಂಗಡಿಯಲ್ಲಿ ಮಾಲೀಕರ ತಮ್ಮ ತೇಜುರಾಮ್‌, ಕೆಲಸಗಾರರಾದ ಹೇಮರಾಜ್‌, ಮಹೇಂದರ್‌, ವಿಷ್ಣು, ಕುಸ್ವಾಲ್‌ ಕೆಲಸ ಮಾಡುತ್ತಾರೆ. ಜ.27ರಂದು ಮಧ್ಯಾಹ್ನ 1ರ ಸುಮಾರಿಗೆ ನಾಲ್ವರು ಅಪರಿಚಿತರು ಅಂಗಡಿಗೆ ಬಂದು, ‘ನಾವು ಬ್ಯುರೋ ಆಫ್‌ ಇಂಡಿಯನ್‌ ಸ್ಟಾಂಡರ್ಡ್‌(ಬಿಐಎಸ್‌) ಮತ್ತು ಜಿಎಸ್‌ಟಿ ಅಧಿಕಾರಿಗಳು. ಚೆನ್ನೈನಿಂದ ಬಂದಿದ್ದೇವೆ’ ಎಂದು ಪರಿಚಯಿಸಿಕೊಂಡಿದ್ದಾರೆ. ‘ಚಿನ್ನಾಭರಣಗಳ ಹಾಲ್‌ ಮಾರ್ಕ್‌ ಮತ್ತು ಜಿಎಸ್‌ಟಿ ಪರಿಶೀಲಿಸಬೇಕು. ಈಗಾಗಲೇ ಬೆಂಗಳೂರಿನಲ್ಲಿ ನಾಲ್ಕೈದು ಚಿನ್ನದಂಗಡಿಗಳಲ್ಲಿ ಪರಿಶೀಲನೆ ನಡೆಸಿದ್ದೇವೆ’ ಎಂದು ಹೇಳಿದ್ದಾರೆ.

ಚಿನ್ನಾಭರಣ ಬ್ಯಾಗ್‌ಗೆ ತುಂಬಿದರು:

ಇವರು ಜಿಎಸ್‌ಟಿ ಅಧಿಕಾರಿಗಳೇ ಇರಬೇಕು ಎಂದು ಅಂಗಡಿ ಕೆಲಸಗಾರರು ನಂಬಿ ಟ್ರೈಗಳಲ್ಲಿ ಇದ್ದ ಚಿನ್ನಾಭರಣಗಳನ್ನು ಎತ್ತಿ ಮುಂದಿಟ್ಟಿದ್ದಾರೆ. ಬಳಿಕ ದುಷ್ಕರ್ಮಿಗಳು ಆ ಚಿನ್ನಾಭರಣಗಳನ್ನು ತೂಕ ಮಾಡಿದಾಗ 1 ಕೆ.ಜಿ. 248 ಗ್ರಾಂ ತೂಕ ಬಂದಿದೆ. ತರುವಾಯ ಆ ಚಿನ್ನಾಭರಣಗಳನ್ನು ಪೇಪರ್‌ ಕವರ್‌ಗೆ ಹಾಕಿದ್ದಾರೆ. ‘ಈ ಚಿನ್ನಾಭರಣಗಳನ್ನು ಚೆನ್ನೈ ಕಚೇರಿ ತೆಗೆದುಕೊಂಡು ಹೋಗುತ್ತೇವೆ. ಆರೇಳು ದಿನಗಳ ಬಳಿಕ ರಶೀದಿ ಬಿಲ್ಲುಗಳನ್ನು ಕಚೇರಿಗೆ ತಂದು ಬಳಿಕ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿ’ ಎಂದಿದ್ದಾರೆ. ಬಿಐಎಸ್‌ ಹೆಸರಿನ ಮನೋಗ್ರಾಮ್‌ ಇರುವ ಲೆಟರ್‌ ಹೆಡ್‌ನಲ್ಲಿ ಚಿನ್ನಾಭರಣಗಳ ವಿವರ ದಾಖಲಿಸಿ, ಅದಕ್ಕೆ ತೇಜುರಾಮ್‌ ಸಹಿ ಪಡೆದು, ಚಿನ್ನಾಭರಣಗಳನ್ನು ಬ್ಯಾಗ್‌ಗೆ ತುಂಬಿಕೊಂಡಿದ್ದಾರೆ.

ಡಿವಿಆರ್‌ ಬಿಚ್ಚಿಸಿ ಬ್ಯಾಗ್‌ ಹಾಕಿಕೊಂಡರು:

ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಇರುವುದನ್ನು ಗಮನಿಸಿರುವ ದುಷ್ಕರ್ಮಿಗಳು, ‘ಇದು ರಹಸ್ಯ ಕಾರ್ಯಾಚರಣೆ. ಸಿಸಿಟಿವಿ ಕ್ಯಾಮೆರಾದ ಡಿಜಿಟಲ್‌ ವಿಡಿಯೋ ರೆಕಾರ್ಡರ್‌ (ಡಿವಿಆರ್‌) ಕೊಡಿ, ಅದಕ್ಕೆ ಕೋಡ್‌ ನಂಬರ್‌ ಬರೆಯಬೇಕು ಎಂದಿದ್ದಾರೆ. ಅದರಂತೆ ತೇಜುರಾಮ್‌ ಸೂಚನೆ ಮೇರೆಗೆ ಅಂಗಡಿ ಸಿಬ್ಬಂದಿ ಡಿವಿಆರ್‌ ಬಿಚ್ಚಿಕೊಟ್ಟಿದ್ದಾರೆ. ಬಳಿಕ ದುಷ್ಕರ್ಮಿಗಳು ಅದಕ್ಕೆ ಯಾವುದೇ ಕೋಡ್‌ ನಂಬರ್‌ ಬರೆಯದೆ ಬ್ಯಾಗ್‌ ಹಾಕಿಕೊಂಡಿದ್ದಾರೆ.

ಈ ವೇಳೆ ಅಂಗಡಿ ಸಿಬ್ಬಂದಿಗೆ ಕೊಂಚ ಅನುಮಾನ ಬಂದು, ಗುರುತಿನ ಚೀಟಿ ತೋರಿಸಿ ಎಂದಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಅಂಗಡಿ ಸಿಬ್ಬಂದಿಯನ್ನು ಹೆದರಿಸಿ ತರಾತುರಿಯಲ್ಲಿ ಅಂಗಡಿಯಿಂದ ಹೊರಗೆ ಬಂದು ರಸ್ತೆ ಬದಿ ನಿಂತಿದ್ದ ಇನೋವಾ ಕ್ರಿಸ್ಟಾ ಕಾರು ಹತ್ತಿ ಪ್ರಯಾಣ ಬೆಳೆಸಿದ್ದಾರೆ. ಇವರ ವರ್ತನೆಯಿಂದ ಮತ್ತಷ್ಟು ಅನುಮಾನಗೊಂಡ ಕೆಲಸಗಾರ ಹೇಮರಾಜ್‌, ದ್ವಿಚಕ್ರ ವಾಹನದಲ್ಲಿ ಆ ಕಾರನ್ನು ಹಿಂಬಾಲಿಸಲು ಮುಂದಾಗಿದ್ದಾನೆ. ಕೆ.ಆರ್‌.ಪುರದ ಸಂತೆ ಮೈದಾನದ ಸ್ಕೈವಾಕ್‌ ಕಡೆ ಕಾರು ಹೋಗುವಾಗ, ಹೇಮರಾಜ್‌ ದ್ವಿಚಕ್ರ ವಾಹನದಲ್ಲಿ ಕಾರು ಪಕ್ಕಕ್ಕೆ ತೆರಳಿ ಕಾರನ್ನು ನಿಲ್ಲಿಸುವಂತೆ ಜೋರಾಗಿ ಕೂಗಿದ್ದಾರೆ.

ಕಾರು ಹಿಂಬಾಲಿಸಿದ್ದಕ್ಕೆ ಆವಾಜ್‌:

ಈ ವೇಳೆ ಕಾರು ನಿಲ್ಲಿಸಿ, ದುಷ್ಕರ್ಮಿಯೊಬ್ಬ ಕೆಳಗೆ ಇಳಿದು, ‘ಕಾರನ್ನು ಏಕೆ ಹಿಂಬಾಲಿಸುತ್ತಿರುವೆ. ಚೆನ್ನೈ ಕಚೇರಿಗೆ ಬಂದು ಭೇಟಿ ಮಾಡಿ. ಕಾರನ್ನು ಹಿಂಬಾಲಿಸಬೇಡ’ ಎಂದು ಹೇಮರಾಜ್‌ಗೆ ಏರು ದನಿಯಲ್ಲಿ ಆವಾಜ್‌ ಹಾಕಿ ಮತ್ತೆ ಕಾರು ಏರಿದ್ದಾನೆ. ಕಾರು ಕೆ.ಆರ್‌.ಪುರ ಪೊಲೀಸ್‌ ಠಾಣೆ ರಸ್ತೆಯಲ್ಲಿ ಸಂಚರಿಸಿ, ಟಿ.ಸಿ.ಪಾಳ್ಯದ ಕಡೆಗೆ ತಿರುಗಿದೆ. ಆದರೂ ಹೇಮರಾಜ್‌ ವೇಗವಾಗಿ ಹಿಂಬಾಲಿಸಿ ದ್ವಿಚಕ್ರ ವಾಹನವನ್ನು ಕಾರಿಗೆ ಅಡ್ಡಲಾಗಿ ನಿಲ್ಲಿಸಿದ್ದಾನೆ. ಈ ವೇಳೆ ದುಷ್ಕರ್ಮಿಗಳು ಆ ಕಾರಿನ ಚಾಲಕನಿಗೆ ಹೇಮರಾಜ್‌ಗೆ ಗುದ್ದಿಕೊಂಡು ಮುಂದೆ ಹೋಗುವಂತೆ ಸೂಚಿಸಿದ್ದಾರೆ.ಬೆನ್ನಟ್ಟಿ ವಶಕ್ಕೆ ಪಡೆದರು

ಕಾರು ಚಾಲಕ ಹೇಮರಾಜ್‌ ಮೇಲೆ ಕಾರು ಹತ್ತಿಸಲು ಮುಂದಾದಾಗ, ಹೇಮರಾಜ್‌ ಪಕ್ಕಕ್ಕೆ ಜಿಗಿದಿದ್ದಾನೆ. ಈ ವೇಳೆ ಕಾರಿನ ಚಕ್ರ ಹೇಮರಾಜ್‌ ಕಾಲಿನ ಮೇಲೆ ಉರುಳಿದ ಪರಿಣಾಮ ಗಾಯಗೊಂಡಿದ್ದಾನೆ. ಬಳಿಕ ಕಿರಿದಾದ ರಸ್ತೆ ಎದುರಾದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಕಾರನ್ನು ನಿಲ್ಲಿಸಿ, ಕೆಳಗೆ ಇಳಿದು ಪರಾರಿಯಾಗಲು ಮುಂದಾಗಿದ್ದಾರೆ. ಅಷ್ಟರಲ್ಲಿ ಸ್ಥಳೀಯರು ಹಾಗೂ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆ ವೇಳೆ ಆರೋಪಿ ರವಿ ಎಂಬಾತ ತಪ್ಪಿಕೊಂಡಿದ್ದಾನೆ. ಆತನ ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ. ಈ ಸಂಬಂಧ ಕೆ.ಆರ್‌.ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.-ಬಾಕ್ಸ್-

ಒಂದು ತಾಸು ಅಂಗಡಿಯಲ್ಲಿದ್ದರು!

ದುಷ್ಕರ್ಮಿಗಳು ಜಿಎಸ್‌ಟಿ ಅಧಿಕಾರಿಗಳ ಸೋಗಿನಲ್ಲಿ ಸುಮಾರು ಒಂದು ತಾಸು ಚಿನ್ನದಂಗಡಿಯಲ್ಲಿದ್ದರು. ಆದರೂ ಅಂಗಡಿ ಸಿಬ್ಬಂದಿಗೆ ಅನುಮಾನ ಬಂದಿಲ್ಲ. ಸಿಸಿಟಿವಿ ಕ್ಯಾಮೆರಾ ಡಿವಿಆರ್‌ ಪಡೆದು ಬ್ಯಾಗ್‌ಗೆ ಹಾಕಿಕೊಂಡಾಗ ಸಣ್ಣ ಅನುಮಾನ ಬಂದಿದೆ. ಬಳಿಕ ಅವಸರದಲ್ಲಿ ಅಂಗಡಿಯಿಂದ ಹೊರಗೆ ಬಂದು ಕಾರು ಏರಿ ಹೊರಟಾಗ ಅನುಮಾನ ಬಲವಾಗಿ ಹೇಮರಾಜ್‌ ದ್ವಿಚಕ್ರ ವಾಹನದಲ್ಲಿ ಕಾರನ್ನು ಹಿಂಬಾಲಿಸಲು ಮುಂದಾಗಿದ್ದಾನೆ.-ಬಾಕ್ಸ್-

ಕಾರಿಗೆ ನಕಲಿ ನಂಬರ್‌ ಪ್ಲೇಟ್‌

ದುಷ್ಕರ್ಮಿಗಳು ದರೋಡೆಗೆ ಬಳಸಿಕೊಂಡಿದ್ದ ಇನೋವಾ ಕ್ರಿಸ್ಟಾ ಕಾರಿಗೆ ನಕಲಿ ಸಂಖ್ಯೆಯ ನೋಂದಣಿ ಫಲಕ ಅಳವಡಿಸಿದ್ದಾರೆ. ಕಾರ್ಯಾಚರಣೆ ವೇಳೆ ಪರಾರಿಯಾಗಿರುವ ಆರೋಪಿ ರವಿ ಈ ದರೋಡೆಯ ಪ್ರಮುಖ ಸೂತ್ರಧಾರ ಎನ್ನಲಾಗಿದೆ. ಆತನ ಬಂಧನದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಬೆನ್ನು ಹತ್ತಿದ ‘ಕೋಬ್ರಾ’ ಕಾನ್‌ಸ್ಟೇಬಲ್‌!

ದುಷ್ಕರ್ಮಿಗಳು ಟಿ.ಸಿ.ಪಾಳ್ಯದ ರಸ್ತೆಯಲ್ಲಿ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಕಾರಿನ ವೇಗವನ್ನು ನೋಡಿದ ಸ್ಥಳೀಯರು, ಕೆ.ಆರ್‌.ಪುರ ಸಂಚಾರ ಠಾಣೆಯ ‘ಕೋಬ್ರಾ’ ಗಸ್ತು ದ್ವಿಚಕ್ರ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ಸ್‌ಟೇಬಲ್‌ ನಾಗರಾಜ್‌ ತಂಬರಹಳ್ಳಿ ಅವರಿಗೆ ಆ ಕಾರಿನ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಎಚ್ಚೆತ್ತ ನಾಗರಾಜ್‌, ಆ ಕಾರನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿದ್ದಾರೆ. ಅಷ್ಟರಲ್ಲಿ ಕಿರಿದಾದ ರಸ್ತೆ ಎದುರಾದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಕಾರನ್ನು ರಸ್ತೆಯಲ್ಲೇ ನಿಲ್ಲಿಸಿ ಇಳಿದು ಓಡಲು ಆರಂಭಿಸಿದ್ದಾರೆ.

ಕಾರಿನ ಬಳಿ ತೆರಳಿರುವ ನಾಗರಾಜ್‌, ವಾಕಿಟಾಕಿಯಲ್ಲಿ ದರೋಡೆ ಹಾಗೂ ಕಾರಿನ ಬಗ್ಗೆ ಮಾಹಿತಿ ಬಂದಿದೆ. ಕಣ್ಣ ಮುಂದೆ ಓಡುತ್ತಿದ್ದ ದುಷ್ಕರ್ಮಿಗಳನ್ನು ನಾಗರಾಜ್‌ ಬೆನ್ನಟ್ಟಿದ್ದಾರೆ. ಅಷ್ಟರಲ್ಲಿ ಕೆ.ಆರ್‌.ಪುರ ಪೊಲೀಸ್‌ ಠಾಣೆಯ ಪೊಲೀಸರು ಅಲ್ಲಿಗೆ ಬಂದಿದ್ದಾರೆ. ಬಳಿಕ ಎಲ್ಲರೂ ಸೇರಿ ಸಿನಿಮೀಯ ಶೈಲಿಯಲ್ಲಿ ದುಷ್ಕರ್ಮಿಗಳನ್ನು ಸುತ್ತುವರೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.-ಬಾಕ್ಸ್‌-

ಅಂಬೇಡ್ಕರ್ ನಾಮಫಲಕ ಸಂಘರ್ಷ: 2 ಕೋಮುಗಳ ನಡುವೆ ಕಲ್ಲು ತೂರಾಟದಲ್ಲಿ ಪೊಲೀಸರಿಗೂ ಏಟು!

ಗ್ಯಾಂಗ್‌ ಕಟ್ಟಿ ದರೋಡೆ

ಬಂಧಿತ ನಾಲ್ವರು ಆರೋಪಿಗಳ ಪೈಕಿ ಕೇರಳ ಮೂಲದ ಆರೋಪಿ ಸಂಬತ್ ಕುಮಾರ್ ವಿರುದ್ಧ ಈ ಹಿಂದೆ ಮಂಡ್ಯ ಮತ್ತು ಕೇರಳದಲ್ಲಿ ದರೋಡೆ ಪ್ರಕರಣ ದಾಖಲಾಗಿದ್ದು, ಜೈಲಿಗೆ ಹೋಗಿ ಬಂದಿದ್ದಾನೆ. ಆರೋಪಿ ದೆಹಲಿಗೆ ಹೋಗಿದ್ದಾಗ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶ ಮೂಲದ ಸಂದೀಪ್‌ ಶರ್ಮಾನ ಪರಿಚಯವಾಗಿತ್ತು. ಹೀಗೆ ಉಳಿದಿಬ್ಬರ ಪರಿಚಯವಾಗಿ ಎಲ್ಲರೂ ಗ್ಯಾಂಗ್‌ ಕಟ್ಟಿಕೊಂಡಿದ್ದರು. ಕೋಲಾರದ ಕೆಜಿಎಫ್‌ನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ರವಿ ಚಿನ್ನದ ಅಂಗಡಿವೊಂದರ ಮಾಲೀಕ ಎಂದು ತಿಳಿದು ಬಂದಿದೆ.

Latest Videos
Follow Us:
Download App:
  • android
  • ios