Asianet Suvarna News Asianet Suvarna News

Vijayapura: ಕಂಟ್ರೀ ಪಿಸ್ತೂಲ್ ಮಾಫಿಯಾ ಬೇಧಿಸಿದ ಪೊಲೀಸರು: ನಾಲ್ವರ ಬಂಧನ

• ನಾಲ್ಕು ಕಂಟ್ರೀ ಪಿಸ್ತೂಲ್, ಐದು ಜೀವಂತ ಗುಂಡು, ಲಾಂಗ್‌ಗಳು ವಶ
• ಕಂಟ್ರೀ ಪಿಸ್ತೂಲ್ ಇಟ್ಟಿದ್ದ ನಾಲ್ವರು ಮಾಸ್ಟರ್ ಮೈಂಡ್​ಗಳು ಅರೆಸ್ಟ್
• ಚುನಾವಣೆಗೂ ಮುನ್ನ ಆತಂಕ ಸೃಷ್ಟಿಸಿದ ಕಂಟ್ರಿ ಪಿಸ್ತೂಲು ಬಳಕೆ

four arrested for country pistol supply in vijayapura gvd
Author
First Published Sep 23, 2022, 8:17 PM IST

ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಸೆ.23): ಕಂಟ್ರೀ ಪಿಸ್ತೂಲ್ ಮಾಫಿಯಾ ದಂಧೆ ಜಿಲ್ಲೆಗೆ ಹೊಸದಲ್ಲಾ. ಏಷ್ಯಾನೆಟ್ ಸುವರ್ಣ ನ್ಯೂಸ್ (Asianet Suvarna News) ಕೂಡ ಕಂಟ್ರಿ ಪಿಸ್ತೂಲು ದಂಧೆಯ ಮಾಹಿತಿಗಳನ್ನ ಪೊಲೀಸರಿಗೆ ನೀಡುವ ಮೂಲಕ ಗನ್ ದಂಧೆಗೆ ಬ್ರೇಕ್ ಹಾಕಲು ಸಹಕರಿಸಿತ್ತು. ಪೊಲೀಸರು ಸಹ ಮೇಲಿಂದ ಮೇಲೆ ದಾಳಿ ನಡೆಸಿ ಕಂಟ್ರೀ ಪಿಸ್ತೂಲ್ ದಂಧೆಗೆ ತಕ್ಕ ಮಟ್ಟಿಗೆ ಬ್ರೇಕ್ ಹಾಕಿದ್ದರು. ಇಷ್ಟರ ಮಧ್ಯೆ ಮತ್ತೇ ನೆರೆಯ ಮಹಾರಾಷ್ಟ್ರ, ಮಧ್ಯಪ್ರದೇಶ  ಹಾಗೂ ಇತರೆ ಉತ್ತರ ಭಾಗದ ರಾಜ್ಯಗಳಿಂದ ವಿಜಯಪುರ ಜಿಲ್ಲೆಗೆ ಕಂಟ್ರೀ ಪಿಸ್ತೂಲ್ ರವಾನೆಯಾಗುತ್ತಿವೆ. 

ಇಲ್ಲಿಯೇ ಅವುಗಳನ್ನು ಸಂಗ್ರಹಿಸಲಾಗುತ್ತದೆ. ಸಾಗಾಟ ಮಾಡಲಾಗುತ್ತದೆ ಜೊತೆಗೆ ಮಾರಾಟವೂ ನಡೆದಿದೆ ಎಂಬ ಮಾಹಿತಿ ಜಿಲ್ಲಾ ಪೊಲೀಸರು ಕಿವಿಗೆ ಬಿದ್ದಿತ್ತು. ತಡ ಮಾಡದ ಎಸ್ಪಿ ಆನಂದಕುಮಾರ ಜಿಲ್ಲೆಯ ಎಲ್ಲಾ ಪೊಲೀಸ್ ಆಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು. ಆಯಾ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಕಂಟ್ರೀ ಪಿಸ್ತೂಲ್ ಮಾಫಿಯಾದ್ದ ಮೇಲೆ ಕಣ್ಣಿಡಲು ಸೂಚನೆ ನೀಡಿದ್ದರು. ಪರಿಣಾಮ ನಿನ್ನೆ (ಗುರುವಾರ) ಸಾಯಂಕಾಲ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೇ ಕಂಟ್ರೀ ಪಿಸ್ತೂಲ್ ಮಾಫಿಯಾದ ನಾಲ್ಕು ಮಿಕಗಳು ಖಾಕಿ ಖೆಡ್ಡಾಕ್ಕೆ ಬಿದ್ದಿವೆ.

ಆರೋಪಿಗೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಹಾಕಿ ಫೋಟೋಗೆ ಪೋಸು; ವಿಜಯಪುರ ಪೊಲೀಸರ ಎಡವಟ್ಟು!

ಗಾಂಧಿಚೌಕ ಸಿಪಿಐ ನಡೆಸಿದ ಕಾರ್ಯಾಚರಣೆ: ಗಾಂಧಿಚೌಕ್ ಸಿಪಿಐ ಸಿದ್ದೇಶ್ ಹಾಗೂ ಇತರೆ ಸಿಬ್ಬಂದಿ ನಗರದ ಜಮಖಂಡಿ ರಸ್ತೆಯ ಬಳಿ ಗಸ್ತು ತಿರುಗುವಾಗ ಅನುಮಾನಾಸ್ಪದವಾಗಿ ಕೆಲವರು ಕಂಡು ಬಂದಿದ್ದಾರೆ. ಅವರನ್ನು ಕರೆದು ವಿಚಾರಣೆಗೆ ಒಳಪಡಿಸಬೇಕೆನ್ನುವಷ್ಟರಲ್ಲಿ ಅವರು ಓಟ ಕಿತ್ತಿದ್ದಾರೆ. ಅವರ ಬೆನ್ನತ್ತಿದ್ದ ಖಾಕಿ ಪಡೆ ಅವರನ್ನು ಹಿಡಿದು ವಿಚಾರಣೆ ಮಾಡಿದಾಗ ಕಂಟ್ರೀ ಪಿಸ್ತೂಲ್ ಇಟ್ಟಿದ್ದು ಕಂಡು ಬಂದಿದೆ. ನಗರದ ರಾಮನಗರ ನಿವಾಸಿಗಳಾದ ಕಿರಣ ರೂಗಿ ಹಾಗೂ ಕಿರಣ ಗಾಯಕವಾಡ ಖಾಕಿ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇವರ ಬಳಿ ಮಧ್ಯಪ್ರದೇಶದಿಂದ ತರಿಸಿದ್ದ 3 ಕಂಟ್ರೀ ಪಿಸ್ತೂಲ್‌ಗಳು ಹಾಗೂ 4 ಜೀವಂತ ಗುಂಡುಗಳು ಸಿಕ್ಕಿವೆ. ಇಬ್ಬರನ್ನು ಬಂಧಿಸಿ ಮೂರು ಕಂಟ್ರೀ ಪಿಸ್ತೂಲ್ ನಾಲ್ಕು ಜೀವಂತ ಗುಂಡುಗಳು ಹಾಗೂ ಇವರು  ಬಳಕೆ ಮಾಡಿದ ಆಟೋವನ್ನು ವಶಕ್ಕೆ ಪಡೆದಿದ್ದಾರೆ ಪೊಲೀಸರು.

ಪಿಸ್ತೂಲು, ಲಾಂಗ್ ಸಮೇತ ಸಿಕ್ಕಿಬಿದ್ದ ಕ್ರಿಮಿನಲ್ಸ್: ಇನ್ನು ಮತ್ತೊಂದೆಡೆ ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೊಲ್ಲಾಪುರ ಬೈ ಪಾಸ್ ಬಳಿ ಕಾರಿನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ಪರಿಶೀಲನೆ ಮಾಡಿದಾಗ ಅವರ ಬಳಿ ಒಂದು ಕಂಟ್ರೀ ಪಿಸ್ತೂಲ್ ಒಂದು ಜೀವಂತ ಗುಂಡು ಒಂದು ಲಾಂಗ್ ಹಾಗೂ ಒಂದು ಚಿನ್ನದ ಸರ, ಅವರ ಬಳಿಯಿದ್ದ ಕಾರನ್ನು ವಶಕ್ಕೆ ಪಡೆದು ಅವರನ್ನು ಬಂಧಿಸಿದ್ದಾರೆ. ವಿಜಯಪುರ ತಾಲೂಕಿನ ಹಂಚಿನಾಳ ತಾಂಡಾದ ಸುರೇಶ ರಾಠೋಡ್ ಹಾಗೂ ವಿಜಯ ರಾಠೋಡ್ ಎಂದು ಬಂಧಿತರನ್ನು ಗುರುತಿಸಲಾಗಿದೆ ಎಂದು ಎಸ್ಪಿ ಆನಂದಕುಮಾರ ಮಾಹಿತಿ ನೀಡಿದ್ದಾರೆ.

ಮಧ್ಯಪ್ರದೇಶದಿಂದ ತಂದ ಕಂಟ್ರಿ ಪಿಸ್ತೂಲುಗಳು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ನಾಲ್ವರು ಕಂಟ್ರೀ ಪಿಸ್ತೂಲ್ ಸಂಗ್ರಹಿಸಿಟ್ಟಿದ್ದವರು ಪೊಲೀಸರ ಅತಿಥಿಯಾಗಿದ್ದಾರೆ. ನಾಲ್ವರನ್ನು ತೀವ್ರವಾಗಿ ವಿಚಾರಣೆ ನಡೆಸಿದ ಖಾಕಿ ಪಡೆ ಕಂಟ್ರೀ ಪಿಸ್ತೂಲ್ ಮೂಲದ ಬಗ್ಗೆ ಮಾಹಿತಿ ಪಡೆದಿದ್ದಾರೆ‌‌. ಮಧ್ಯಪ್ರದೇಶದಿಂದ ಕಂಟ್ರೀ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಇವರು ತರಿಸಿಕೊಂಡಿದ್ದಾರೆ. ಇಲ್ಲಿಂದ ಬೇರೆ ಕಡೆಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಹಾಗು ಕಂಟ್ರೀ ಪಿಸ್ತೂಲ್ ಜೊತೆಗಿಟ್ಟುಕೊಂಡು ಅಪರಾಧೀಯ ಕೃತ್ಯಗಳನ್ನು ಮಾಡಲು ಬಳಕೆ ಮಾಡುತ್ತಿರೋದಾಗಿ ಹೇಳಿದ್ದಾರೆ. ಸದ್ಯ ನಾಲ್ವರು ಆರೋಪಿತರ ಮೇಲೆ ಭಾರತೀಯ ಆಯುಧ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸಿದ್ದಾರೆ ಪೊಲೀಸರು. ಮಧ್ಯಪ್ರದೇಶದಿಂದ ಹೇಗೆಲ್ಲಾ ಕಂಟ್ರೀ ಪಿಸ್ತೂಲ್ ಇಲ್ಲಿಗೆ ರವಾನೆಯಾಗತ್ತದೆ, ಹೇಗೆಲ್ಲಾ ಮಾರಾಟವಾಗುತ್ತದೆ ಯಾರೆಲ್ಲಾ ಇದರಲ್ಲಿ ಶಾಮೀಲಾಗಿದ್ದಾರೆ ಎಂಬುದರ ಕುರಿತು ಹೆಚ್ಚಿನ ತನಿಖೆಯನ್ನೂ ಮಾಡುತ್ತಿದ್ದಾರೆ.

ಮತ್ತೆ ಶುರುವಾಗಿರೋ ಕ್ರಿಮಿನಲ್ಸ್ ಆಕ್ಟಿವಿಟಿ: ಕಂಟ್ರೀ ಪಿಸ್ತೂಲ್ ಮಾಫಿಯಾವನ್ನು ಬೇಧಿಸಿ ನಾಲ್ವರನ್ನು ಅರೆಸ್ಟ್ ಮಾಡಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂದಿನ ಯುವ ಜನರೇ ಹೆಚ್ಚು ಕ್ರೈಂ ಆ್ಯಕ್ಟಿವಿಟೀಸ್‌ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದನ್ನು ತಡೆಯೋ ಕೆಲಸವಾಗಬೇಕಿದೆ. ಪೊಲೀಸರು ಸಹ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕಂಟ್ರೀ ಪಿಸ್ತೂಲ್ ಮಾಫಿಯಾವನ್ನು ಬೇರು ಸಮೇತ ಕಿತ್ತು ಹಾಕೋ ಕೆಲಸವನ್ನು ಮಾಡಬೇಕೆಂದು ಮನವಿ ಮಾಡಿದ್ದಾರೆ. 

ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣ; ಗುಮ್ಮಟನಗರಿಯ ಓರ್ವ ಶಿಕ್ಷಕ ಬಂಧನ!

ಚುನಾವಣೆಗೂ ಮುನ್ನ ಆತಂಕ ಸೃಷ್ಟಿಸಿದ ಕಂಟ್ರಿ ಪಿಸ್ತೂಲು ಬಳಕೆ: ಸದ್ಯ ಕಂಟ್ರೀ ಪಿಸ್ತೂಲ್ ಇಟ್ಟುಕೊಂಡಿದ್ದ ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರು ಮಾಡಲಾಗಿದ್ದು ಎಲ್ಲಾ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳೆದ ಸುಮಾರು ತಿಂಗಳಿನಿಂದ ಕಂಟ್ರೀ ಪಿಸ್ತೂಲ್ ಮಾಫಿಯಾದ ಸದ್ದು ಅಡಗಿತ್ತು. ಆದರೆ ಇದೀಗಾ ಮತ್ತೇ ಕಂಟ್ರೀ ಪಿಸ್ತೂಲ್ ಮಾಫಿಯಾ ಗರಿಗೆದರಿದೆ. ನಗರದ ಭಾಗದಲ್ಲಿ ಈ ಮಾಫಿಯಾ ಗರಿಗೆದರಿದ್ದು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ನಗರದಲ್ಲಿ ಮಹಾನಗರ ಪಾಲಿಕೆಯ ಚುನಾವಣೆ ನಡೆಯಲಿವೆ ಬಳಿಕ ವಿಧಾನಸಭಾ ಚುನಾವಣೆಗಳು ಬರಲಿದೆ. ಇಂಥ ವೇಳೆಯಲ್ಲಿ ಜಿಲ್ಲೆಯಲ್ಲಿ ಕಂಟ್ರೀ ಪಿಸ್ತೂಲ್ ಹರಿದಾಡುತ್ತಿರೋದಕ್ಕೆ ಪೊಲೀಸ್ ಇಲಾಖೆ ತಡೆ ಹಾಕುತ್ತಿದೆ. ಜೊತೆಗೆ ಇನ್ನಷ್ಟು ಪರಿಣಾಮಕಾರಿಯಾಗಿ ಅನ್ಯ ರಾಜ್ಯಗಳಿಂದ ಕಂಟ್ರೀ ಪಿಸ್ತೂಲ್ ರವಾನೆಯಾಗೋದನ್ನು ತಡೆಯಬೇಕಿದೆ.

Follow Us:
Download App:
  • android
  • ios