ಮಂಗಳೂರು ನೈತಿಕ ಪೊಲೀಸ್ ಗಿರಿ ಪ್ರಕರಣ: ಐವರು ಹಿಂದೂ ಕಾರ್ಯಕರ್ತರು ಅರೆಸ್ಟ್!
ಹಿಂದೂ ಸಂಘಟನೆಗೆ ಸೇರಿದ ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಮತ್ತು ತಲಪಾಡಿ ಭಾಗದ ಹಿಂದೂ ಕಾರ್ಯಕರ್ತರನ್ನ ಬಂಧಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳ ದೂರಿನಡಿ ಎಫ್ಐಆರ್ ದಾಖಲಾಗಿತ್ತು.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು(ಜೂ.02): ಸೋಮೇಶ್ವರ ಬೀಚ್‌ನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧಿಸಿ ಉಳ್ಳಾಲ ಪೊಲೀಸರು ಅಪ್ರಾಪ್ತ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಹಿಂದೂ ಸಂಘಟನೆಯ ಕಾರ್ಯಕರ್ತರಾಗಿದ್ದು, ಇವರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.
ನೈತಿಕ ಪೊಲೀಸ್ ಗಿರಿ ಕೇಸ್‌ನಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಉಳ್ಳಾಲದ ಬಸ್ತಿಪಡ್ಪು ನಿವಾಸಿ ಯತೀಶ್, ತಲಪಾಡಿ ನಿವಾಸಿಗಳಾದ ಸಚಿನ್ ಮತ್ತು ಸುಹಾನ್, ಅಖಿಲ್ ಸೇರಿ ಓರ್ವ ಅಪ್ರಾಪ್ತ ಬಂಧನವಾಗಿದೆ. ಆರೋಪಿಗಳ ವಿರುದ್ದ ಐಪಿಸಿ 307ನಡಿ ಕೊಲೆ ಯತ್ನ ಹಾಗೂ ಗಲಭೆ ಸೃಷ್ಟಿ ಆರೋಪದಡಿ ಪ್ರಕರಣ ದಾಖಲಾಗಿದೆ.
Mangaluru; ಮತ್ತೆ ನೈತಿಕ ಪೊಲೀಸ್ ಗಿರಿ, ಮರಕ್ಕೆ ಕಟ್ಟಿ ಕಾರ್ಮಿಕನಿಗೆ ಥಳಿತ
ಮತ್ತಷ್ಟು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರೋ ಪೊಲೀಸರು, ಸದ್ಯ ಮೂರು ಪ್ರತ್ಯೇಕ ತಂಡದಿಂದ ತನಿಖೆ ಮುಂದುವರೆಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳ ದೂರಿನಡಿ ಎಫ್ಐಆರ್ ದಾಖಲಾಗಿತ್ತು. ಮಂಗಳೂರು ಹೊರವಲಯದ ಸೋಮೇಶ್ವರ ಬೀಚ್ ನಲ್ಲಿ ನಡೆದಿದ್ದ ಘಟನೆ ಇದಾಗಿದ್ದು, ಕೇರಳ ಮೂಲದ ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲಾಗಿತ್ತು. ಜಾಫರ್ ಶರೀಫ್, ಮುಜೀಬ್ ಮತ್ತು ಆಶೀಕ್ ಮೇಲೆ ಹಲ್ಲೆ ನಡೆಸಲಾಗಿತ್ತು. ಮೂವರು ವಿದ್ಯಾರ್ಥಿನಿಯರು ಹಾಗೂ ಮೂವರು ವಿದ್ಯಾರ್ಥಿಗಳ ಮೇಲೆ ತಂಡ ದಾಳಿ ನಡೆಸಿತ್ತು. ಮೂವರು ಯುವಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂದು ತಂಡವೊಂದು ಹಿಂಬಾಲಿಸಿ ಹಿಂದೂ ವಿದ್ಯಾರ್ಥಿನಿಯರ ಜೊತೆ ಬಂದಿದ್ದ ಕಾರಣಕ್ಕೆ ನೈತಿಕ ಪೊಲೀಸ್ ಗಿರಿ ನಡೆಸಿತ್ತು. ಕೇರಳದ ಕಣ್ಣೂರಿನ ಯುವಕರು ಹಾಗೂ ಕಾಸರಗೋಡಿನ ಯುವತಿಯರು ಎನ್ನಲಾಗಿದೆ. ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಉಳ್ಳಾಲ ಠಾಣೆಗೆ ಬಿಜೆಪಿ, ವಿಎಚ್‌ಪಿ ನಾಯಕರ ಭೇಟಿ
ಅಮಾಯಕರ ಬಂಧನ ಆರೋಪಿಸಿ ಉಳ್ಳಾಲ ಠಾಣೆಗೆ ಬಿಜೆಪಿ ಮತ್ತು ಹಿಂದೂ ಸಂಘಟನೆಯ ಪ್ರಮುಖರು ಭೇಟಿ ನೀಡಿದರು. ಉಳ್ಳಾಲ ಠಾಣೆಗೆ ಆಗಮಿಸಿದ ಬಿಜೆಪಿ ನಾಯಕ ಸತೀಶ್ ಕುಂಪಲ ಹಾಗೂ ವಿಎಚ್ ಪಿ, ಭಜರಂಗದಳ ಪ್ರಮುಖರು ಠಾಣೆಯಲ್ಲಿ ಕಮಿಷನರ್ ಕುಲದೀಪ್ ಜೈನ್ ಭೇಟಿಯಾಗಿದ್ದಾರೆ. ಹಲವು ಅಮಾಯಕ ಹಿಂದೂ ಯುವಕರ ಬಂಧನವಾಗಿದೆ, ತಕ್ಷಣ ಅಮಾಯಕರ ಬಿಡುಗಡೆಗೆ ಒತ್ತಾಯಿಸಿದರು. ಬಳಿಕ ಪ್ರಕರಣದ ಆರೋಪಿಗಳನ್ನಷ್ಟೇ ಬಂಧಿಸುವ ಭರವಸೆ ನೀಡಿದ ಕಮಿಷನರ್ ಕುಲದೀಪ್ ಜೈನ್, ವಶಕ್ಕೆ ಪಡೆದವರು ಕೇಸ್ ನಲ್ಲಿ ಇಲ್ಲದಿದ್ದರೆ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಕಮಿಷನರ್ ಭೇಟಿ ಬಳಿಕ ಬಿಜೆಪಿ ಮುಖಂಡ ಸತೀಶ್ ಕುಂಪಲ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಸರ್ಕಾರ ಬಂದ ಬೆನ್ನಲ್ಲೇ ಉಳ್ಳಾಲದಲ್ಲಿ ಅಹಿತಕರ ಘಟನೆ ನಡೆದಿದೆ.
ತುಮಕೂರಿನಲ್ಲಿ 70 ವರ್ಷದ ವೃದ್ಧೆಯ ಸಾಮೂಹಿಕ ಅತ್ಯಾಚಾರ, ವೃದ್ಧೆಯ ಅಳಿಯನ ಸ್ನೇಹಿತರಿಂದಲೇ ಕೃತ್ಯ!
ಕಾಲೇಜಿನ ಅನ್ಯಕೋಮಿನ ವಿದ್ಯಾರ್ಥಿಗಳು ಸೋಮೇಶ್ವರ ಬೀಚ್ ಗೆ ಬಂದಿದ್ದಾರೆ. ಪರಮಪವಿತ್ರ ಕ್ಷೇತ್ರದಲ್ಲಿ ಅಶ್ಲೀಲವಾಗಿ ವರ್ತಿಸಿದಾಗ ಸ್ಥಳೀಯ ಯುವಕರು ಪ್ರಶ್ನೆ ಮಾಡಿದ್ದಾರೆ. ಇದು ತಪ್ಪಾದರೂ ದೇವರ ಕ್ಷೇತ್ರದ ಬಳಿ ಅಶ್ಲೀಲ ವರ್ತನೆ ಕಂಡು ಆಕ್ರೋಶ ಸಹಜ. ಏನೇ ಆದರೂ ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸಲಿ. ಇಂಥ ಘಟನೆಗಳಿಗೆ ಆಸ್ಪದ ನೀಡೋದು ಬೇಡ.ಅಮಾಯಕರ ಬಂಧನ ಸರಿಯಲ್ಲ, ಅಮಾಯಕರನ್ನ ಬಿಡ್ತೇವೆ ಅಂದಿದ್ದಾರೆ. ಯುವಕರು ನಮ್ಮ ಕಾರ್ಯಕರ್ತರಾ ಅಥವಾ ಅಲ್ಲವಾ ಅನ್ನೋದು ಪ್ರಶ್ನೆ ಅಲ್ಲ. ಅವರ ಕುಟುಂಬದವರು ಬಂದು ಹೇಳಿದಾಗ ನಾವು ಠಾಣೆಗೆ ಬಂದಿದ್ದೇವೆ ಎಂದಿದ್ದಾರೆ.
ಉಳ್ಳಾಲ ಠಾಣೆಯಲ್ಲೇ ಕಮಿಷನರ್ ಮೊಕ್ಕಾಂ!
ಪ್ರಕರಣ ಗಂಭೀರತೆ ಪಡೆದ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣೆಗೆ ಮಂಗಳೂರು ಕಮಿಷನ್ ಕುಲದೀಪ್ ಜೈನ್ ಭೇಟಿ ನೀಡಿದ್ದಾರೆ. ಸಿಸಿಬಿ ಎಸಿಪಿ ಪಿ.ಎ ಹೆಗ್ಡೆ ಹಾಗೂ ಉಳ್ಳಾಲ ಇನ್ಸ್ಪೆಕ್ಟರ್ ರಿಂದ ಮಾಹಿತಿ ಪಡೆದ ಕಮಿಷನರ್, ಬಂಧಿತ ಐವರು ಆರೋಪಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪ್ರಕರಣ ಗಂಭೀರತೆ ಪಡೆದ ಹಿನ್ನೆಲೆ ಠಾಣೆಯಲ್ಲೇ ಕಮಿಷನರ್ ಮೊಕ್ಕಾಂ ಹೂಡಿದ್ದರು. ಆ ಬಳಿಕ ಮಾತನಾಡಿದ ಅವರು, ಎಫ್ಐಆರ್ ದಾಖಲಿಸಿ ಅಪ್ರಾಪ್ತ ಸೇರಿ ಐದು ಜನರನ್ನ ಬಂಧಿಸಿದ್ದೇವೆ. ಮೂರು ತಂಡ ರಚಿಸಿ ಇನ್ನಷ್ಟು ಜನ ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೀತಾ ಇದೆ. ಹುಡುಗ-ಹುಡುಗಿ ಮಾತನಾಡುವಾಗ ಕೆಲವರು ಹೋಗಿ ಅವರನ್ನ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಹುಡುಗರ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯ ಅಂತ ಆಗಿಲ್ಲ, ಆದರೆ ಮೂವರಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಕಾಲೇಜು ವಿದ್ಯಾರ್ಥಿಗಳಾಗಿದ್ದು, ಮೂವರು ಹುಡುಗರು ಕೇರಳ ರಾಜ್ಯದವರು ಎಂದು ಮಾಹಿತಿ ನೀಡಿದ್ದಾರೆ.