ಧಾರವಾಡ(ಸೆ.16): ಈ ಹಿಂದೊಮ್ಮೆ ಗಾಂಜಾ ಮಾರಾಟ ಮಾಡುತ್ತಿದ್ದಾಗಲೇ ಸಿಕ್ಕು ಬಿದ್ದು ಸೇವೆಯಿಂದ ವಜಾ ಆಗಿದ್ದ ಪೊಲೀಸ್‌ ಕಾನ್‌ಸ್ಟೇಬಲ್‌ ಮತ್ತೆ ಅದೇ ವ್ಯವಹಾರದಲ್ಲಿ ತೊಡಗಿದ್ದಾಗ ಉಪ ನಗರ ಪೊಲೀಸ್‌ರ ಕೈಗೆ ಸಿಕ್ಕು ಬಿದ್ದಿದ್ದಾನೆ. ಇದಲ್ಲದೇ ಇನ್ನೂ ನಾಲ್ವರು ಯುವಕರು ಸಹ ಗಾಂಜಾ ವ್ಯವಹಾರ ಮಾಡುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರಿನಲ್ಲಿ ಪೊಲೀಸ್‌ ಕಾನಸ್ಟೇಬಲ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಮೂಲತಃ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕು ಕನದಾಳ ಗ್ರಾಮದ ಸದ್ಯ ಮುರುಘಾಮಠದ ನಿವಾಸಿ ಸಂಜೀವ್‌ ಪಾಟೀಲ ಗಾಂಜಾ ಮಾರಾಟ ಮಾಡುತ್ತಿದ್ದಾಗ ಮಾಹಿತಿ ಮೇರೆಗೆ ಬಂಧಿಸಿ ಆತನಿಂದ 283 ಗ್ರಾಂ ಗಾಂಜಾ ಹಾಗೂ ಒಂದು ಮೊಬೈಲ್‌ ಜಪ್ತಿ ಮಾಡಿದ್ದಾರೆ. ನಂತರ ಆತನಿಗೆ ಕೊರೋನಾ ಪರೀಕ್ಷೆ ಮಾಡಿಸಲಾಗಿದ್ದು, ಪಾಸಿಟಿವ್‌ ದೃಢಪಟ್ಟಿದೆ.

ಹುಬ್ಬಳ್ಳಿ: ಪೊಲೀಸರ ಭರ್ಜರಿ ಕಾರ್ಯಾಚರಣೆ, ಲಕ್ಷಾಂತರ ರೂ. ಮೌಲ್ಯದ ಗಾಂಜಾ ಜಪ್ತಿ

ಇದಲ್ಲದೇ, ಗಾಂಜಾ ಮಾರುತ್ತಿದ್ದ ಯುವಕರ ಗುಂಪೊಂದನ್ನು ಬಂಧಿಸಿರುವ ಉಪನಗರ ಠಾಣೆ ಪೊಲೀಸರು 1.75 ಕೆಜಿ ಗಾಂಜಾ, ನಾಲ್ಕು ಮೊಬೈಲ್‌ ಹಾಗೂ 2 ಬೈಕ್‌ ವಶಕ್ಕೆ ಪಡೆದಿದ್ದಾರೆ. ನಾರಾಯಣಪುರ ನಿವಾಸಿ ಸಮೀವುಲ್ಲಾ ಹುಬ್ಬಳ್ಳಿ, ಜಡಸನ್‌ ಮೀರಜಕರ, ಗರಗ ಗ್ರಾಮದ ಮಂಜುನಾಥ ಜತ್ಲಿ, ದಾನೇಶ್ವರ ನಗರದ ಸಂಗಮೇಶ ಅಂಗಡಿ ಬಂಧಿತ ಆರೋಪಿಗಳು. ಈ ಎಲ್ಲರ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ ಎಂದು ಠಾಣೆ ಇನಸ್ಪೆಕ್ಟರ್‌ ಎಲಿಗಾರ ತಿಳಿಸಿದ್ದಾರೆ.