ಬೆಳಗಾವಿ: ಹೆದ್ದಾರಿ ದರೋಡೆಕೋರರ ಹೆಡೆಮುರಿ ಕಟ್ಟಿದ ಖಾಕಿ ಪಡೆ..!
ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿನಿಮೀಯ ರೀತಿಯಲ್ಲಿ ಸ್ಕಾರ್ಪಿಯೋ ವಾಹನದಿಂದ ಬೆನ್ನಟ್ಟಿ ಅಡ್ಡಗಟ್ಟಿ ಪ್ಲಾಸ್ಟಿಕ್ ಪಿಸ್ತೂಲ್ ಲೈಟರ್, ತಲವಾರ, ಲಾಂಗ್‌ಗಳನ್ನು ತೋರಿಸಿ ಬೆದರಿಕೆ ಹಾಕಿದ್ದ ದರೋಡೆಕೋರರು
ಬೆಳಗಾವಿ(ಆ.24): ರಾಷ್ಟ್ರೀಯ ಹೆದ್ದಾರಿಯಲ್ಲಿ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿಯ ಕಾರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ ನಾಲ್ಕು ಲಕ್ಷ ರು. ಹಣ ದರೋಡೆ ಮಾಡಿದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಐದು ಜನ ದರೋಡೆಕೋರರನ್ನು ಬಂಧಿಸಿದ್ದಾರೆ.
ಮೂಲತಃ ಹುಕ್ಕೇರಿ ತಾಲೂಕಿನ ಗುಟಗುದ್ದಿ ಗ್ರಾಮದ ಸದ್ಯ ಇಲ್ಲಿನ ಶಿವಾಜಿ ನಗರದ ನಿವಾಸಿ ಲಗಮಪ್ಪಾ ಮಲ್ಲಪ್ಪ ಕೊಳ್ಯಾನಾಯಿಕ (30) ಬೆಳಗಾವಿ ತಾಲೂಕಿನ ಮುತ್ಯಾನಟ್ಟಿಗ್ರಾಮದ ದುರ್ಗಮ್ಮಾ ಗಲ್ಲಿಯ ಪ್ರಕಾಶ ಅಲಿಯಾಸ್ ಪಿಕೆ ಗುಜ್ಜಪ್ಪಾ ಗೋರವ (26), ಮುತ್ಯಾನಟ್ಟಿ ಮಾರುತಿ ಗಲ್ಲಿಯ ಕಲ್ಲಪ್ಪ ಸಿದ್ರಾಯಿ ಹೊನ್ನಂಗಿ (29), ಮಾಸ್ತಮರಡಿ ಗ್ರಾಮದ ವಿಠ್ಠಲ ಗಲ್ಲಿ ಮಾರುತಿ ಹನುಮಂತ ನಾಗಪ್ಪ ಬುರ್ರಾಣಿ (20) ಹಾಗೂ ಮುತ್ಯಾನಟಿ ದುರ್ಗಮ್ಮ ಗಲ್ಲಿ ವಿಶಾಲ ಪವರ ಸಿದ್ರಾಯಿ ತಳವಾರ (23) ಬಂಧಿತರು.
ಬೆಂಗಳೂರು: 80 ಹಂದಿ ಕದ್ದಿದ್ದ 10 ಕಳ್ಳರ ಬಂಧನ
ಜುಲೈ 31ರಂದು ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ತಮ್ಮ ಕಾರ್ ಮೂಲಕ ಬೆಳಗಾವಿಯಿಂದ ಧಾರವಾಡಕ್ಕೆ ಹೋಗುತ್ತಿದ್ದರು. ಈ ವೇಳೆ ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ನಾಳ ಗ್ರಾಮದ ಬಳಿ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿನಿಮೀಯ ರೀತಿಯಲ್ಲಿ ಸ್ಕಾರ್ಪಿಯೋ ವಾಹನದಿಂದ ಬೆನ್ನಟ್ಟಿ ಅಡ್ಡಗಟ್ಟಿದ ದರೋಡೆಕೋರರು ಪ್ಲಾಸ್ಟಿಕ್ ಪಿಸ್ತೂಲ್ ಲೈಟರ್, ತಲವಾರ, ಲಾಂಗ್‌ಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ. ಬಳಿಕ ಅರಣ್ಯ ಇಲಾಖೆಯ ನಿವೃತ್ತದ ಅಧಿಕಾರಿ ಬಳಿ ಇದ್ದ ನಾಲ್ಕು ಲಕ್ಷ ರುಪಾಯಿ ದೋಚಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ದರೋಡೆಕೋರರು ನಿವೃತ್ತ ಅಧಿಕಾರಿಯನ್ನು ಅಪಹರಿಸಿ ಇನ್ನೂ . 20 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಇನ್ಸಸ್ಪೆಕ್ಟರ್ ವಿಜಯಕುಮಾರ ಸಿನ್ನೂರ ನೇತೃತ್ವದ ತಂಡ ದರೋಡೆಕೋರರನ್ನು ಹೆಡೆಮುರಿ ಕಟ್ಟುವ ಕಾರ್ಯಕ್ಕೆ ಜಾಲ ಬಿಸಿದ್ದರು. ಪೊಲೀಸರು ಬಿಸಿದ ಬಲೆಗೆ ಬಿದ್ದ ದರೋಡೆಕೋರರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ದರೋಡೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ಬಂಧಿತರಿಂದ . 3.80 ಲಕ್ಷ ನಗದು, ಕೃತ್ಯಕ್ಕೆ ಬಳಿಸಿದ . 4 ಲಕ್ಷ ಮೌಲ್ಯದ ಸ್ಕಾರ್ಪಿಯೋ ವಾಹನ, ಪ್ಲಾಸ್ಟಿಕ್ ಡಮ್ಮಿ ಪಿಸ್ತೂಲ್ ಲೈಟರ್, ತಲವಾರ, ಕಬ್ಬಿಣದ ಲಾಂಗ್ ವಶಪಡಿಸಿಕೊಂಡಿದ್ದಾರೆ.
ನಗರ ಪೊಲೀಸ್ ಆಯುಕ್ತರ, ಉಪ ಆಯುಕ್ತರ ಹಾಗೂ ಗ್ರಾಮೀಣ ವಿಭಾಗದ ಎಸಿಪಿ ಎಸ್.ವಿ. ಗಿರೀಶ್ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸಸ್ಪೆಕ್ಟರ್ ವಿಜಯಕುಮಾರ ಸಿನ್ನೂರ, ಪಿಎಸ್‌ಐ ಪ್ರವೀಣ ಬಿರಾದಾರ, ಪ್ರೊಬೆಷನರಿ ಪಿಎಸ್‌ಐ ಅಭಿಷೇಕ ನಾಡಗೌಡರ, ಸಿಬ್ಬಂದಿ ಎ.ಕೆ. ಕಾಂಬಳೆ, ಎಂ.ಎ. ಮಂಟೂರ, ಆರ್.ಎಸ್. ಕೆಳಗಿನಮನಿ, ಎಸ್.ಜಿ. ಉಪ್ಪಾರಟ್ಟಿ, ಎಸ್.ಸಿ. ಚಿನ್ನನ್ನವರ, ಸಂತೋಷ ಜಗಜಂಪಿ ಹಾಗೂ ಟೆಕ್ನಿಕಲ್ ಸೆಲ್‌ದ ರಮೇಶ ಅಕ್ಕಿ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.