ಪಿಸ್ತೂಲ್‌ಗಾಗಿ ಕಲಬುರಗಿಗೆ ಆಗಮಿಸಿದ್ದರು ಹೈದ್ರಾಬಾದ್‌ ನಗರದ ಮೂವರು ಖರೀದಿದಾರರು| 3 ಖರೀದಿದಾರರು, ಇಬ್ಬರು ಆರೋಪಿಗಳು ಸೇರಿದಂತೆ ಐವರ ಬಂಧನ, 2 ಪಿಸ್ತೂಲ್‌, ಗುಂಡು ಜಪ್ತಿ| ಖಚಿತ ಮಾಹಿತಿ ಮೇರೆಗೆ ಪೊಲೀಸರ ದಾಳಿ| 

ಕಲಬುರಗಿ(ಮಾ.26): ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಅಕ್ರಮವಾಗಿ ನಾಡ ಪಿಸ್ತೂಲ್‌ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ವ್ಯಾಪ್ತಿಯ ಖತರ್‌ನಾಕ್‌ ಗ್ಯಾಂಗ್‌ ಪತ್ತೆ ಹಚ್ಚಿರುವ ಕಲಬುರಗಿ ನಗರ ಪೊಲೀಸರು ಈ ಸಂಬಂಧ ಐವರನ್ನು ಬಂಧಿಸಿ ವಶಕ್ಕೆ ಪಡೆದಿದ್ದು 2 ನಾಡ ಪಿಸ್ತೂಲ್‌, 2 ಜೀವಂತ ಗುಂಡುಗಳು, 5 ಮೋಬೈಲ್‌, 1 ಇನ್ನೋವಾ ಕಾರು ಸೇರಿದಂತೆ 21 ಲಕ್ಷ ರು ಮೌಲ್ಯದ ಮಾಲು ವಶಕ್ಕೆ ಪಡೆದಿದ್ದಾರೆ.

ಎಂಬಿ ನಗರ ಠಾಣೆ ವ್ಯಾಪ್ತಿಯ ಸೌಭಾಗ್ಯ ಕಲ್ಯಾಣ ಮಂಟಪದ ಬಳಿ ಎದುರಿಗಿನ ರಸ್ತೆಯಲ್ಲಿ ಇನ್ನೋವಾ ಕಾರಿನಲ್ಲಿ ಅಕ್ರಮ ಆಯುಧ ವಹಿವಾಟು ಸಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಅಲ್ಲಿಗೆ ಹೋಗಿ ಪರಿಶೀಲನೆ ಮಾಡಿದಾಗ ಈ ಆರೋಪಿಗಳು ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ.

ಪಿಸ್ತೂಲ್‌ ಮಾರಾಟಗಾರರಾದ ಅಬ್ಬು ಮೌಲಾನಾ (36) ಫಿರ್ದೋಸ್‌ ಕಾಲೋನಿ, ಹಾಗರಗಾ ಕ್ರಾಸ್‌, ಸದ್ದಾಂ ಮೊಹ್ಮದ್‌ ಇಟಗಿ (24) ಭೀಮಳ್ಳಿ ಹಾಗೂ ಇವರಿಂದ ಪಿಸ್ತೂಲ್‌ ಖರೀದಿಗೆ ಆಗಮಿಸಿದ್ದ ಹೈದ್ರಾಬಾದ್‌ನ ಮುರ್ಷಿದಾಬಾದ್‌ ಮೂಲದ ಮೊಹ್ಮದ್‌ ಅಸೀಫ್‌ (24), ಅಬ್ದುಲ್‌ ಮನ್ನಾನ್‌ (26) ಇನಾಯತ್‌ ಅಲಿ (25) ಇವರನ್ನು ಪೊಲೀಸರು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ. ಬಂಧಿತರಲ್ಲಿ ಮೂವರು ತೆಲಂಗಾಣ ಹಾಗೂ ಕರ್ನಾಟಕದಲ್ಲಿನ ವಿವಿಧ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರೋದು ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ.

ಏಕಾಏಕಿ ಕರ್ತವ್ಯದಲ್ಲಿದ್ದ ಪೊಲೀಸ್ ಮೇಲೆ ಗುಂಡಿನ ದಾಳಿ : ಅರೆಸ್ಟ್

ಎಂಬಿ ನಗರ ಠಾಣೆ ಪಿಐ ಚಂದ್ರಶೇಖರ ತಿಗಡಿ ನೇತೃತ್ವದಲ್ಲಿ ರೌಡಿ ನಿಗ್ರಹ ದಳದ ಪಿಎಸ್‌ಐ ವಾಹೀದ್‌ ಕೋತ್ವಾಲ್‌, ಎಎಸ್‌ಐ ಹುಸೇನ್‌ ಭಾಷಾ, ಪೇದೆಗಳಾದ ಶಿವಾನಂದ, ರಾಜಕುಮಾರ್‌, ತೌಶೀಫ್‌, ಈರಣ್ಣಾ ಯಶಸ್ವಿ ಕಾರ್ಯಾಚರಣೆ ನಡೆಸಿ ಅಕ್ರಮ ಆಯುಧ ಮಾರಾಟ ಹಾಗೂ ಖರೀದಿಯಲ್ಲಿ ತೊಡಗಿದ್ದಂತಹ ಅಂತರಾಜ್ಯ ಗ್ಯಾಂಗ್‌ ಬಂಧಿಸಿದ್ದಾರೆ.

ಬಂಧಿತರಲ್ಲಿ ಅಬ್ಬು ಮೌಲಾನಾ ಈತ 2019ರಲ್ಲಿ ವಿವಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಇನ್ನೂ ಬಂದೂಕು ಖರೀದಿಗೆ ಹೈದ್ರಾಬಾದ್‌ನಿಂದ ಬಂದ ಮೀವರಲ್ಲಿ ಮೊಹ್ಮದ ಅಸೀಫ್‌ ಹಾಗೂ ಅಬ್ದುಲ್‌ ಮನ್ನಾನ್‌ ಇವರಿಬ್ಬರೂ ತೆಲಂಗಾಣ ರಾಜ್ಯದ ಪಾಠಣಚೋರ್‌ ಪೊಲೀಸ್‌ ವ್ಯಾಪ್ತಿಯಲ್ಲಿ 2019 ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆಂದು ಕಲಬುರಗಿ ನಗರ ಉಪ ಪೊಲೀಸ್‌ ಆಯುಕ್ತ ಡಿ. ಕಿಶೋರ ಬಾಬು ಮಾಹಿತಿ ನೀಡಿದ್ದಾರೆ.

ಈಚೆಗಿನ ದಿನಗಳಲ್ಲಿ ಸಿಕ್ಕಿಬಿದ್ದಿರುವ ಬಹುದೊಡ್ಡ ಅಕ್ರಮ ಆಯುಧ ಮಾರಾಟದ ಗ್ಯಾಂಗ್‌ ಇದಾಗಿದ್ದು ಈ ತಂಡದ ಸದಸ್ಯರನ್ನು ಸೆರೆ ಹಿಡಿದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೆಲಸಕ್ಕೆ ಕಮೀಶ್ನರೇಟ್‌ ವ್ಯಾಪ್ತಿಯಲ್ಲಿ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.