ಪಿಐ ಕಿರಣ್‌ ಹಾಗೂ ವಸಂತ್‌ ಸೇರಿದಂತೆ ಇತರರ ಮೇಲೆ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. 

ಬೆಂಗಳೂರು(ಮೇ.31): ಭೂ ವಿವಾದದಲ್ಲಿ ಮಧ್ಯಪ್ರವೇಶಿಸಿ ಪಕ್ಷಪಾತ ಮಾಡಿದ ಆರೋಪದ ಮೇರೆಗೆ ಪುಲಿಕೇಶಿ ನಗರ ಠಾಣೆ ಇನ್ಸ್‌ಪೆಕ್ಟರ್‌ ಪಿ.ಬಿ.ಕಿರಣ್‌ ಸೇರಿದಂತೆ ಮೂವರ ವಿರುದ್ಧ ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಏಳು ವರ್ಷಗಳ ಹಿಂದೆ ಹರೀಶ್‌ ಫರ್ನಾಂಡೀಸ್‌ ಮತ್ತು ವಸಂತ್‌ ಫರ್ನಾಂಡೀಸ್‌ ಸೋದರ ಮಧ್ಯೆ ಮನೆ ಬಾಡಿಗೆ ವಿಚಾರವಾಗಿ ವಿವಾದವಾಗಿತ್ತು. ಆಗ ಅಧಿಕಾರ ದುರ್ಬಳಕೆ ಮಾಡಿಕೊಂಡು ಹರೀಶ್‌ ವಿರುದ್ಧವಾಗಿ ಕ್ರಮ ಜರುಗಿಸಿದ್ದಾರೆ ಎಂದು ಇನ್‌ಸ್ಪೆಕ್ಟರ್‌ ಕಿರಣ್‌ ಮೇಲೆ ಆರೋಪಿಸಲಾಗಿದೆ. ಈ ಸಂಬಂಧ ನ್ಯಾಯಾಲಯದ ಆದೇಶದ ಮೇರೆಗೆ ಕಿರಣ್‌, ವಸಂತ್‌ ಫರ್ನಾಂಡೀಸ್‌ ಹಾಗೂ ಮರಿಟ್ಟಾ ಫರ್ನಾಂಡೀಸ್‌ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಶ್ಲೀಲ ಫೋಟೊ ತೋರಿಸಿ ಮಾನಸಿಕ ಕಿರುಕುಳ ಪ್ರಕರಣ; ಸೈಕೋ ವಿರುದ್ಧ ದೂರು

ನಗರದ ರಿಚ್ಮಂಡ್‌ಟೌನ್‌ ಸಮೀಪದ ಅಲ್ಬರ್ಟ್‌ ಸ್ಟ್ರೀಟ್‌ನಲ್ಲಿ ತಮ್ಮ ಪಿತ್ರಾರ್ಜಿತ ಮನೆ ವಿಚಾರವಾಗಿ ಹರೀಶ್‌ ಫರ್ನಾಂಡೀಸ್‌ ಮತ್ತು ವಸಂತ್‌ ಫರ್ನಾಂಡೀಸ್‌ ಸೋದರರ ಮಧ್ಯೆ ವಿವಾದವಾಗಿತ್ತು. 2016ರಲ್ಲಿ ಮನೆ ಖಾಲಿ ಮಾಡುವಂತೆ ಸೋದರರರು ಪರಸ್ಪರ ಗಲಾಟೆ ಮಾಡಿಕೊಂಡು ಕೊನೆಗೆ ಅಶೋಕ ನಗರ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಆಗ ಈ ವಿವಾದದಲ್ಲಿ ಮಧ್ಯಪ್ರವೇಶಿಸಿದ ಪಿಐ ಕಿರಣ್‌, ಆ ಸೋದರರ ಪೈಕಿ ವಸಂತ್‌ ಪರವಾಗಿ ಪಕ್ಷಪಾತ ಮಾಡಿದ್ದರು.

2016ರ ಡಿಸೆಂಬರ್‌ 13 ರಂದು ಹರೀಶ್‌ ಮನೆಗೆ ವಸಂತ್‌ ಜತೆ ತೆರಳಿ ಕಿರಣ್‌ ದಾಂಧಲೆ ನಡೆಸಿದ್ದರು. ನ್ಯಾಯಾಲಯದ ವಾರೆಂಟ್‌ ಹಿನ್ನೆಲೆಯಲ್ಲಿ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿ ನಮಗೆ ಕಿರಣ್‌ ಬೆದರಿಕೆ ಹಾಕಿದ್ದರು. ಅಲ್ಲದೆ ನಮ್ಮ ಬಾಡಿಗೆದಾರರ ಮೇಲೂ ದರ್ಪ ತೋರಿದ್ದರು. ಆಗ ನಮ್ಮ ಮನೆಯಲ್ಲಿಟ್ಟಿದ್ದ 22 ಸಾವಿರ ರು ಹಣವನ್ನು ಕಿರಣ್‌ ಕಳ್ಳತನ ಮಾಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ವಿವಾದದ ಸಂಬಂಧ ಕಿರಣ್‌ ಹಾಗೂ ವಸಂತ್‌ ಸೇರಿದಂತೆ ಇತರರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ನ್ಯಾಯಾಲಯಕ್ಕೆ ಹರೀಶ್‌ ಖಾಸಗಿ ದೂರು ಸಲ್ಲಿಸಿದ್ದರು. ಈ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣದ ತನಿಖೆಗೆ ಆದೇಶಿಸಿತು. ಅದರನ್ವಯ ಪಿಐ ಕಿರಣ್‌ ಹಾಗೂ ವಸಂತ್‌ ಸೇರಿದಂತೆ ಇತರರ ಮೇಲೆ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.