ಬೆಂಗಳೂರು(ಡಿ.26): ಹಣ ಪಡೆದು ವಂಚಿಸಿದ ಆರೋಪದಡಿ ನಿರ್ಮಾಪಕ ಕೆ.ಮಂಜು ಸೇರಿ ನಾಲ್ವರ ವಿರುದ್ಧ ಮಹದೇವಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆ.ಮಂಜು, ಬಿ.ಎಂ.ರಾಜ್‌ಗೋಪಾಲ್‌, ರಮೇಶ್‌ ಬಾಬು ಹಾಗೂ ವಿಜಯಲಕ್ಷ್ಮಿ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ‘ಹೆಬ್ಬಟ್ಟು ರಾಮಕ್ಕ’ ಸಿನಿಮಾ ನಿರ್ಮಾಪಕ ಪುಟ್ಟರಾಜು ಎಂಬುವರು ಕೊಟ್ಟ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕೆ.ಮಂಜು ಪುತ್ರನ ಜೊತೆ ಕಣ್ಸನ್ನೆ ಹುಡುಗಿ ರೊಮ್ಯಾನ್ಸ್‌!

ಹೊಸಕೋಟೆ ತಾಲೂಕಿನ ಸೊಣ್ಣೇನಹಳ್ಳಿ ಬಳಿ ಇರುವ ತಮ್ಮ ಜಮೀನನ್ನು ರಾಜ್‌ಗೋಪಾಲ್‌ ಎಂಬುವರು ಮಾರಾಟ ಮಾಡಿದ್ದರು. ಅದನ್ನು ಖರೀದಿಸಿದ್ದ ಪುಟ್ಟರಾಜು, ಆರ್‌ಟಿಜಿಎಸ್‌ ಮೂಲಕ ಮುಂಗಡವಾಗಿ ಹಣ ನೀಡಿದ್ದರು. ಅದೇ ಜಮೀನು ಖರೀದಿಸಲು ಮುಂದಾಗಿದ್ದ ಕೆ.ಮಂಜು, ರಾಜ್‌ಗೋಪಾಲ್‌ ಜೊತೆಯಲ್ಲಿ ಒಪ್ಪಂದ ಸಹ ಮಾಡಿಕೊಂಡಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಪುಟ್ಟರಾಜು ಪ್ರಶ್ನಿಸಿದ್ದರು. 

ಪುಟ್ಟರಾಜು ಹೆಸರಿಗೆ ಜಮೀನು ನೋಂದಣಿ ಮಾಡಿಸುವುದಾಗಿ ಹೇಳಿ ಆರೋಪಿಗಳು ಮತ್ತಷ್ಟು ಹಣ ಪಡೆದಿದ್ದರೆಂದು ದೂರಲಾಗಿದೆ. ಆರೋಪಿಗಳು ಜಮೀನು ನೋಂದಣಿ ಮಾಡಿಸಿರಲಿಲ್ಲ. ಹಣವನ್ನೂ ವಾಪಸು ಕೊಟ್ಟಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಜೀವ ಬೆದರಿಕೆ ಹಾಕಿದ್ದರು ಎಂದು ಪುಟ್ಟರಾಜು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.