*  ನೆಲಮಂಗಲದಲ್ಲಿ ಬೇರೆಯವರಿಗೆ ಮಂಜೂರಾಗಿದ್ದ ಸೈಟ್‌ ತೋರಿಸಿ ಹಣ ಪಡೆದು ವಂಚನೆ*  ರಾಜಾಜಿನಗರದಲ್ಲಿ ಕಂಪನಿ ಕಚೇರಿ ತೆರೆದಿದ್ದ ಗೆಳೆಯರು*  ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿದ್ದ ಗ್ಯಾಂಗ್‌ 

ಬೆಂಗಳೂರು(ಜೂ.05): ಕಡಿಮೆ ಬೆಲೆಗೆ ನಿವೇಶನ ಕೊಡುವುದಾಗಿ ನಂಬಿಸಿ ಜನರಿಂದ ಹಣ ಸಂಗ್ರಹಿಸಿ ವಂಚಿಸಿದ ಆರೋಪದ ಮೇರೆಗೆ ಚಲನಚಿತ್ರ ನಿರ್ಮಾಪಕ ಸೇರಿದಂತೆ ನಾಲ್ವರನ್ನು ರಾಜಾಜಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಾಜಿ ನಗರದ 2ನೇ ಹಂತದ ಮಂಜುನಾಥ್‌, ಶಿವಕುಮಾರ್‌, ಗೋಪಾಲ್‌ ಹಾಗೂ ಚಂದ್ರಶೇಖರ್‌ ಬಂಧಿತರಾಗಿದ್ದು, ನೆಲಮಂಗಲದಲ್ಲಿ ತಾವು ಅಭಿವೃದ್ಧಿಪಡಿಸಿರುವ ಲೇಔಟ್‌ನಲ್ಲಿ ಕಡಿಮೆ ಬೆಲೆಗೆ ನಿವೇಶನ ವಿತರಿಸುವುದಾಗಿ ಹೇಳಿ ಜನರಿಗೆ ವಂಚಿಸಿದ್ದರು. ಈ ಬಗ್ಗೆ ಸಂತ್ರಸ್ತ ಕೆ.ಪುಷ್ಪ ಕುಮಾರ್‌ ನೀಡಿದ ದೂರಿನ ಮೇರೆಗೆ ಆರೋಪಿಗಳ ಬಂಧನವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಉಡುಪಿ: ತಲವಾರ್‌ ಹಿಡಿದು ಬರ್ತ್ ಡೇ ಆಚರಣೆ: ಮೂವರ ಹೆಡೆಮುರಿ ಕಟ್ಟಿದ ಪೊಲೀಸರು

ರಾಜಾಜಿ ನಗರದಲ್ಲಿ ಈಗಲ್‌ ಏ ಟ್ರೀ ಬಿಲ್ಡ​ರ್‍ಸ್ ಮತ್ತು ಡೆವಲಪರ್ಸ್‌ ಹೌಸಿಂಗ್‌ ಡಾಟ್‌ ಕಂ ಸಂಸ್ಥೆಯನ್ನು ಆರೋಪಿಗಳು ತೆರೆದಿದ್ದರು. ಈ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಕಡಿಮೆ ಬೆಲೆಗೆ ನೆಲಮಂಗಲದಲ್ಲಿ ನ್ಯೂ ಗಾರ್ಡನ್‌ ಸಿಟಿ ಲೇಔಟ್‌ನಲ್ಲಿ ಕಡಿಮೆ ಬೆಲೆಗೆ ನಿವೇಶನ ಕೊಡುವುದಾಗಿ ಜಾಹೀರಾತು ಪ್ರಕಟಿಸಿದ್ದರು. ಈ ಜಾಹೀರಾತು ನೋಡಿದ ಪುಷ್ಪ ಕುಮಾರ್‌ ಅವರು, ನಿವೇಶನ ಖರೀದಿ ಸಂಬಂಧ ಆರೋಪಿಗಳನ್ನು ಭೇಟಿಯಾಗಿದ್ದರು. ಆಗ ಸಂಗೀತಾ ಭಟ್‌ ಅವರಿಗೆ ಮಂಜೂರಾಗಿದ್ದ ನಿವೇಶನವನ್ನು ತೋರಿಸಿ ಪುಷ್ಪ ಅವರಿಂದ .3 ಲಕ್ಷವನ್ನು ಹಂತ ಹಂತವಾಗಿ ಆರೋಪಿಗಳು ವಸೂಲಿ ಮಾಡಿದ್ದರು. ಇದೇ ರೀತಿ 9 ಮಂದಿಗೆ .30 ಲಕ್ಷ ಪಾವತಿಸಿದ್ದರು ವಂಚಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಆರೋಪಿಗಳ ಪೈಕಿ ಮಂಜುನಾಥ್‌ ಚಲನಚಿತ್ರ ನಿರ್ಮಾಪಕನಾಗಿದ್ದು, ಕೋಮಲ್‌ ನಟನೆಯ ‘ಲೊಡ್ಡೆ’ ಸಿನಿಮಾವನ್ನು ಆತ ನಿರ್ಮಿಸಿದ್ದ. ಆದರೆ ಸಿನಿಮಾ ಯಶಸ್ಸು ಕಾಣದೆ ಆರೋಪಿಗೆ ನಷ್ಟವಾಯಿತು. ಇದರಿಂದ ನಿವೇಶನ ವಿತರಿಸಲು ಆರ್ಥಿಕವಾಗಿ ಸಮಸ್ಯೆಯಾಯಿತು ಎಂದು ವಿಚಾರಣೆ ವೇಳೆ ಮಂಜುನಾಥ್‌ ಹೇಳಿಕೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.