ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೋಡಿ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವ ಮುನ್ನ ಎಚ್ಚರ. ಏಕೆಂದರೆ, ಯುಟ್ಯೂಬ್ ಚಾನೆಲ್‌ವೊಂದರ ಜಾಹೀರಾತು ನೋಡಿ ಆನ್‌ಲೈನ್‌ನಲ್ಲಿ ಸೀರೆ ಬುಕ್ ಮಾಡಿದ್ದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ವಂಚನೆಗೆ ಒಳಗಾಗಿದ್ದಾರೆ.
ಬೆಂಗಳೂರು (ಏ.24): ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೋಡಿ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವ ಮುನ್ನ ಎಚ್ಚರ. ಏಕೆಂದರೆ, ಯುಟ್ಯೂಬ್ ಚಾನೆಲ್‌ವೊಂದರ ಜಾಹೀರಾತು ನೋಡಿ ಆನ್‌ಲೈನ್‌ನಲ್ಲಿ ಸೀರೆ ಬುಕ್ ಮಾಡಿದ್ದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ವಂಚನೆಗೆ ಒಳಗಾಗಿದ್ದಾರೆ. ರಾಜ್ಯದ ಸಕಾಲ ಮಿಷನ್ ನಿರ್ದೇಶಕಿ ಪಲ್ಲವಿ ಅಕುರಾತಿ ವಂಚನೆಗೆ ಒಳಗಾದ ಐಎಎಸ್ ಅಧಿಕಾರಿ. ಇವರು ನೀಡಿದ ದೂರಿನ ಮೇರೆಗೆ ಪೂರ್ವ ವಿಭಾಗದ ಸೈಬರ್ ಕೈಂ ಠಾಣೆ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಏನಿದು ಪ್ರಕರಣ?: ಕಳೆದ ತಿಂಗಳು ಪೂರ್ಣಿಮಾ ಕಲೆಕ್ಷನ್ ಎಂಬ ಯಟ್ಯೂಬ್ ಚಾನೆಲ್ ನೋಡುವಾಗ ತಮಿಳುನಾಡಿನ ಮಧುರೈ ಸುಂಗುಡಿ ಕಾಟನ್ ಸೀರೆ ಬಗ್ಗೆ ಜಾಹೀರಾತು ಕಂಡು ಬಂದಿದೆ. ಈ ಸೀರೆ ಖರೀದಿಸುವ ಉದ್ದೇಶದಿಂದ ಪಲ್ಲವಿ ಅಕುರಾತಿ ಅವರು ಈ ಸೀರೆಯ ಸ್ಕೀನ್ ಶಾಟ್ ಫೋಟೋ ತೆಗೆದು ಪೂರ್ಣಿಮಾ ಕಲೆಕ್ಷನ್ ವಾಟ್ಸಾಪ್‌ಗೆ ಕಳುಹಿಸಿದ್ದಾರೆ. ಜತೆಗೆ ಆನ್‌ಲೈನ್ ಮುಖಾಂತರ ಮಾ.10ರಂದು ₹850 ಪಾವತಿಸಿದ್ದಾರೆ. ಆದರೆ, ಒಂದು ತಿಂಗಳು ಕಳೆದರೂ ಸೀರೆ ಕಳುಹಿಸಿಕೊಟ್ಟಿಲ್ಲ. ಈ ಸಂಬಂಧ ವಿಚಾರಿಸಲು ಕರೆ ಮಾಡಿದರೂ ಪ್ರತಿಕ್ರಿಯಿಸಿಲ್ಲ. ಸಂದೇಶ ಕಳುಹಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಪಲ್ಲವಿ ಅಕುರಾತಿ ಅವರು ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮಂತೆಯೇ ಹಲವರಿಗೆ ವಂಚಿಸಿರುವ ಸಾಧ್ಯತೆಯಿದೆ. ಈ ಸಂಬಂಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಬೆಳೆ ವಿಮೆ ಹಣಕ್ಕಾಗಿ 9 ಈರುಳ್ಳಿ ಸಸಿ ನೆಟ್ಟು ವಂಚನೆ: ದಂಧೆಯಲ್ಲಿ ಕೆಲ ಅಧಿಕಾರಿಗಳು ಭಾಗಿ?
ಮರಕ್ಕೆ ಬೈಕ್ ಡಿಕ್ಕಿ: ದ್ವಿಚಕ್ರ ವಾಹನವೊಂದು ನಿಯಂತ್ರಣ ತಪ್ಪಿ ಪಾದಾಚಾರಿ ಮಾರ್ಗದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟು ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಲಗ್ಗೆರೆ ಚೌಡೇಶ್ವರಿನಗರ ನಿವಾಸಿ ನಿತಿನ್(24) ಮೃತ ಸವಾರ. ಹಿಂಬದಿ ಸವಾರ ಹೃದಯ್(24) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಬುಧವಾರ ಮುಂಜಾನೆ ಸುಮಾರು 2.45ಕ್ಕೆ ಹೊರವರ್ತುಲ ರಸ್ತೆಯ ಕೂಲಿನಗರ ಸೇತುವೆ ಬಳಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸವಾರ ನಿತಿನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತನ ಸ್ನೇಹಿತ ಹೃದಯ್ ಫ್ಲವರ್ ಡೆಕೋರೇಶನ್ ಕೆಲಸ ಮಾಡುತ್ತಿದ್ದ. ಈ ಇಬ್ಬರು ಸ್ನೇಹಿತರು ಬುಧವಾರ ಮುಂಜಾನೆ ದ್ವಿಚಕ್ರ ವಾಹನದಲ್ಲಿ ಹೊರವರ್ತುಲ ರಸ್ತೆಯ ಕೂಲಿನಗರ ಸೇತುವೆ ಬಳಿ ಬರುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ರಸ್ತೆಯ ಎಡಭಾಗದ ಪಾದಾಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದು ಬಳಿಕ ಮರಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಸವಾರರು ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಸವಾರ ನಿತಿನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ಹೃದಯ್‌ನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ.
ಬೆಲೆಯೇರಿಕೆಯೇ ಸಿದ್ದರಾಮಯ್ಯ ಸರ್ಕಾರದ 6ನೇ ಗ್ಯಾರಂಟಿ: ವಿಜಯೇಂದ್ರ
ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ದ್ವಿಚಕ್ರ ವಾಹನವನ್ನು ಅತಿವೇಗವಾಗಿ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಅಪಘಾತವಾಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
